ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಕ್ರಮ ನುಸುಳುಕೋರರನ್ನು ಗುಜರಾತ್ ಮಾದರಿಯಲ್ಲಿ ವಾಪಸ್ ಕಳಿಸುತ್ತೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಕ್ರಮ ನುಸುಳುಕೋರರ ಗಡಿಪಾರು ಮಾಡುವ ಪ್ರಕ್ರಿಯೆ ನಡೆದಿದೆ. ಈಗಾಗಲೇ 200ಕ್ಕೂ ಹೆಚ್ಚು ಮಂದಿ ಅನಧಿಕೃತವಾಗಿ ತಂಗಿರುವುದು ಪತ್ತೆ ಮಾಡಲಾಗಿದೆ. ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಗಡಿಪಾರು ಮಾಡುತ್ತಿದ್ದೇವೆ. ನಮ್ಮಲ್ಲೂ ಹೆಚ್ಚು ನುಸುಳುಕೋರರು ಇದ್ದರೆ ವಾಪಸ್ ಅವರ ದೇಶಕ್ಕೆ ಕಳುಹಿಸುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.
ಪೊಲೀಸರು ನುಸುಳುಕೋರರ ಬಗ್ಗೆ ನಿತ್ಯ ಪರಿಶೀಲನೆ ನಡೆಸಿದ್ದಾರೆ. ಗಮನಕ್ಕೆ ಬಂದಿರುವ ಎಲ್ಲರನ್ನೂ ಗಡಿಪಾರು ಮಾಡುತ್ತೇವೆ. ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಅಕ್ರಮ ವಲಸಿಗರಿರುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಅಕ್ರಮವಾಗಿ ಇದ್ದಾರೆ ಅಂದ್ರೆ ಗಡಿಪಾರು ಮಾಡ್ತೇವೆ. ಈ ವಿಚಾರದಲ್ಲಿ ಕಾಂಗ್ರೆಸ್ ಸಾಫ್ಟ್ ಆಗಿದೆ ಅನ್ನೋದು ಸುಳ್ಳು. ಬಾಂಗ್ಲಾ ನುಸುಳುಕೋರರನ್ನು ತಂದು ವೋಟ್ ಹಾಕಿಸಿಕೊಳ್ಳುವಷ್ಟು ಪರಿಸ್ಥಿತಿ ನಮಗೆ ಬಂದಿಲ್ಲ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.
ಗುಜರಾತ್ನಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಗರನ್ನು ಪತ್ತೆ ಮಾಡಿ ಕಳೆದ ಏಪ್ರಿಲ್ ತಿಂಗಳಿನಲ್ಲಿ ಭಾರತದಿಂದ ಹೊರ ಕಳುಹಿಸುವ ಬೃಹತ್ ಕಾರ್ಯಾಚರಣೆಯನ್ನು ಅಲ್ಲಿ ಪೊಲೀಸರು ಮಾಡಿದ್ದರು. ಈ ನಿಟ್ಟಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿಗರನ್ನು ವಶಕ್ಕೆ ಪಡೆದಿದ್ದರು ಎಂದು ಸಚಿವರು ತಿಳಿಸಿದರು.
ನಕಲಿ ದಾಖಲಾತಿ ಸೃಷ್ಟಿಸಿ, ಅಕ್ರಮವಾಗಿ ಬಾಂಗ್ಲಾದೇಶಿಗರಿಗೆ ನೆರವಾಗುತ್ತಿರುವ ಜಾಲತಾಣಗಳ ಕುರಿತು ತನಿಖೆ ನಡೆಸಲಾಗಿತ್ತು. ಅಲ್ಲಿನ ಸಿಎಂ ಭೂಪೇಂದ್ರ ಪಟೇಲ್ ಮತ್ತು ಗೃಹ ಸಚಿವ ಹರ್ಷ ಸಂಘ್ವಿ ಸೂಚನೆಯಂತೆ ಈ ಕಾರ್ಯಾಚರಣೆಯನ್ನು ನಡೆಸಿದ್ದರು ಎಂದು ಪರಮೇಶ್ವರ್ ಹೇಳಿದರು.
ಸೋಲದೇವನಹಳ್ಳಿ ಯುವಕರಿಂದ ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. ಕೇಸ್ನ ಪೂರ್ಣ ಮಾಹಿತಿ ಪಡೆದು ನಂತರ ಮಾಧ್ಯಮಗಳಿಗೆ ತಿಳಿಸುತ್ತೇನೆ. ರೇಣುಕಾಸ್ವಾಮಿ ಪ್ರಕರಣ ಯುವಕರಿಗೆ ಪ್ರೇರಣೆ ಆಗ್ತಿದ್ಯಾ ಗೊತ್ತಿಲ್ಲ. ಅದರ ಬಗ್ಗೆ ಸೈಕಾಲಜಿಸ್ಟ್‌ಗಳು ಹೇಳಬೇಕು. ಸೋಷಿಯಾಲಿಜಿಸ್ಟ್‌ಗಳು ಅಧ್ಯಯನ ನಡೆಸಬೇಕು ಎಂದು ಸಚಿವ ಪರಮೇಶ್ವರ್ ಹೇಳಿದರು.
ಶ್ರೀ ರಂಭಾಪುರಿ ಮಠದ ಸ್ವಾಮೀಜಿಗಳು ಡಿಕೆಶಿಗೆ ಅವಕಾಶ ಕೊಡಬೇಕೆಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ರಂಭಾಪುರಿ ಶ್ರೀಗಳು ಅವರ ಅಭಿಪ್ರಾಯ ಹೇಳಿದ್ದಾರೆ. ರಂಭಾಪುರಿ ಶ್ರೀಗಳ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ಸಚಿವ ಪರಮೇಶ್ವರ್ ಪ್ರಶ್ನಿಸಿದರು.