ಹೆಚ್.ಸಿ.ಗಿರೀಶ್, ಹರಿಯಬ್ಬೆ
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಅಭಿವೃದ್ಧಿಯಲ್ಲಿ ಹಿಂದುಳಿದ, ನೂರು ವರ್ಷದಲ್ಲಿ ಸರಿ ಸುಮಾರು 70 ವರ್ಷಗಳಷ್ಟು ಬರ ಕಂಡಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿ ಕೇಂದ್ರ ಶೀಘ್ರ ನೂತನ ತಾಲೂಕಾಗಿ ಘೋಷಣೆ ಆಗುವ ಸಾಧ್ಯತೆ ನಿಚ್ಚಳವಾಗಿದೆ.
2013-2018ರ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲೇ ಪರಶುರಾಂಪುರ ನೂತನ ತಾಲೂಕು ಕೇಂದ್ರವಾಗಬೇಕಿತ್ತು. ಆದರೆ ರಾಜಕೀಯ ದಳ್ಳುರಿಗೆ ಸಿಲುಕಿದ ಪರಶುರಾಂಪುರ ತಾಲೂಕು ಕೇಂದ್ರ ಆಗಲಿಲ್ಲ, ಕೈಗೆ ಬಂದ ತುತ್ತು ಬಾಯಿಗಿಲ್ಲ ಎನ್ನುವಂತೆ ರಾಜಕೀಯ ಒತ್ತಡದಿಂದಾಗಿ ಆಪೋಶನ ಪಡೆದಿತ್ತು.
ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂತನ ತಾಲೂಕುಗಳನ್ನು ಘೋಷಣೆ ಮಾಡಿದರೆ ಖಂಡಿತವಾಗಿ ಪರಶುರಾಂಪುರ ತಾಲೂಕು ಕೇಂದ್ರವಾಗಿ ಘೋಷಣೆ ಆಗಲಿದೆ.
ಆಂದ್ರ ಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಪರಶುರಾಂಪುರ ಹೋಬಳಿಯ ಗಡಿ ಭಾಗಗಳು ತಾಲೂಕು ಕೇಂದ್ರದಿಂದ 60-70 ಕಿಲೋ ಮೀಟರ್ ದೂರಕ್ಕಿಂತಲೂ ಹೆಚ್ಚಿನ ದೂರ ಇದ್ದು ಶಾಸಕ ಟಿ.ರಘುಮೂರ್ತಿ ಅವರ ಇಚ್ಛಾಸಕ್ತಿಯಿಂದಾಗಿ ಸರ್ಕಾರದ ಮೇಲೆ ಒತ್ತಡ ಹೇರಿದ್ದು ಯಾವುದೇ ಕಾರಣಕ್ಕೂ ಈ ಸಲ ಕೈತಪ್ಪಿ ಹೋಗುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಎಲೆಮರೆ ಕಾಯಿಯಂತೆ ಅಭಿವೃದ್ಧಿ ಕಾರ್ಯ ಮಾಡುತ್ತಿರುವ ಶಾಸಕ ರಘುಮೂರ್ತಿ ಅವರು ಈಗಾಗಲೇ ಸರ್ಕಾರದ ಮೇಲೆ ಎಲ್ಲ ರೀತಿಯ ಪ್ರಭಾವ ಬೀರಿ ಪರಶುರಾಂಪುರ ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಪರಶುರಾಂಪುರ ತಾಲೂಕು ಕೇಂದ್ರ ಮಾಡುವುದಾಗಿ ಶಾಸಕ ಟಿ.ರಘುಮೂರ್ತಿ ಭರವಸೆ ನೀಡಿದ್ದನ್ನು ಸ್ಮರಿಸಬಹುದಾಗಿದೆ.
ನೂತನ ತಾಲೂಕು ಘೋಷಣೆಗೆ ಪೂರಕ ಅಂಶಗಳು-
ತಾಲೂಕು ಪುನರ್ ರಚನಾ ಸಮಿತಿ ಅಧ್ಯಕ್ಷ ಎಂ.ಬಿ.ಪ್ರಕಾಶ್ ನೇತೃತ್ವದ ಸಮಿತಿ ಮತ್ತು ಸಮಿತಿಯ ಸದಸ್ಯರಾದ ಹಾಗೂ ಐಎಎಸ್ ಅಧಿಕಾರಿಗಳಾದ ಚಿರಂಜೀವಿ ಸಿಂಗ್, ಎಚ್.ಕೆ.ಶಿವಾನಂದ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಶಿಫಾರಸ್ಸು ಮಾಡಿತ್ತು.
ಆಂದ್ರದ ಗಡಿ ಭಾಗದಲ್ಲಿರುವ ಪರಶುರಾಂಪುರ ಹೋಬಳಿಯ ಗಡಿ ತಾಲೂಕು ಕೇಂದ್ರಕ್ಕೆ 60-70 ಕಿಲೋ ಮೀಟರ್ ದೂರದಲ್ಲಿದೆ. ಆಡಳಿತ ವ್ಯವಸ್ಥೆ ಸುಗುಮವಾಗಿ ನಡೆಯಬೇಕಿದ್ದರೆ ಪರಶುರಾಂಪುರ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು. ಈ ಭಾಗವು ಸಾಕಷ್ಟು ಹಿಂದುಳಿದಿದೆ. ನೂತನ ತಾಲೂಕು ಕೇಂದ್ರ ಮಾಡಲು ಅಗತ್ಯವಾದ ಎಲ್ಲ ರೀತಿಯ ಮೂಲ ಸೌಲಭ್ಯಗಳಿವೆ.
ವಿದ್ಯುತ್ ವಿತರಣಾ ಕೇಂದ್ರ, ಆಸ್ಪತ್ರೆಗಳು, ಪ್ರವಾಸಿ ಮಂದಿರ, ಶಾಲಾ ಕಾಲೇಜ್ ಗಳು, ಅಂಚೆ ಕಚೇರಿ, ಪೊಲೀಸ್ ಠಾಣೆ, ಸಾರಿಗೆ ಸಂಪರ್ಕ ವ್ಯವಸ್ಥೆ ಹೀಗೆ ಎಲ್ಲ ರೀತಿಯ ಮೂಲ ಸೌಲಭ್ಯಗಳು ಇದ್ದು ಪರಶುರಾಂಪುರ ಹೋಬಳಿ ಕೇಂದ್ರವನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲು ಯಾವುದೇ ರೀತಿಯ ಅಡಚಣೆಗಳಿಲ್ಲ ಎನ್ನುವ ಶಿಫಾರಸ್ಸುಗಳನ್ನು ತಾಲೂಕು ಪುನರ್ ರಚನಾ ಸಮಿತಿ ಅಧ್ಯಕ್ಷ ಎಂ.ಬಿ.ಪ್ರಕಾಶ್ ನೇತೃತ್ವದ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.
೨೦೦೮-೦೯ರಲ್ಲಿ ನೇಮಕವಾದ ತಾಲೂಕು ಪುನರ್ ರಚನಾ ಸಮಿತಿ ಚಿತ್ರದುರ್ಗ ಜಿಲ್ಲೆಯಾದ್ಯಂತ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ಪೀಕರಿಸಿ, ಸ್ಥಳ ಪರಿಶೀಲಿಸಿ ನಂತರ ಸರ್ಕಾರಕ್ಕೆ 2015ರಲ್ಲಿ ವರದಿಯೊಂದನ್ನು ನೀಡಿ ಧರ್ಮಪುರ ಹೋಬಳಿಗಿಂತ ಸೂಕ್ತವಾದ ಸ್ಥಳ ಪರಶುರಾಂಪುರ ಎಂದು ಹೇಳಿತ್ತು.
ಸಮಿತಿಯ ಶಿಫಾರಸ್ಸುಗಳು ಏನು-
ತಾಲೂಕು ಪುನರ್ ರಚನಾ ಸಮಿತಿ ಅಧ್ಯಕ್ಷ ಎಂ.ಬಿ.ಪ್ರಕಾಶ್ ನೇತೃತ್ವದ ಸಮಿತಿಯು ಹಲವು ಮಾರ್ಪಾಡುಗಳನ್ನು ಮಾಡಿದೆ. ಚಳ್ಳಕೆರೆ ತಾಲೂಕಿನ ಪರಶುರಾಂಪುರ ಗ್ರಾಮವನ್ನು ತಾಲೂಕು ಕೇಂದ್ರವನ್ನಾಗಿರಿಸಿಕೊಂಡು ಪರಶುರಾಂಪುರ ಹೋಬಳಿಯ 51 ಗ್ರಾಮಗಳು, ತಳಕು ಹೋಬಳಿಯ 21 ಗ್ರಾಮಗಳು, ಕಸಬಾ ಹೋಬಳಿಯ 6 ಗ್ರಾಮಗಳು ಮತ್ತು ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ 2 ಗ್ರಾಮ ಪಂಚಾಯ್ತಿಗಳ ಮೂರು ಗ್ರಾಮಗಳನ್ನು ಸೋರಿಸಿಕೊಂಡು ಒಟ್ಟು 81 ಗ್ರಾಮಗಳ ನೂತನ ಪರಶುರಾಂಪುರ ತಾಲೂಕು ರಚನೆ ಮಾಡಲು ಸೂಕ್ತವಾಗಿದೆ ಎಂದು ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.
ಅಷ್ಟೇ ಅಲ್ಲ ನೂತನ ತಾಲೂಕು ಪರಶುರಾಂಪುರ ಸೇರಿಕೊಂಡಂತೆ ಚಳ್ಳಕೆರೆ, ಮೊಳಕಾಲ್ಮೂರು, ಹಿರಿಯೂರು ತಾಲೂಕುಗಳನ್ನು ಸೇರಿಸಿಕೊಂಡು ಹೊಸದಾಗಿ ಚಳ್ಳಕೆರೆಯಲ್ಲಿ ಒಂದು ಉಪ ವಿಭಾಗ ತೆರೆಯಲು ಸಮಿತಿ ಶಿಫಾರಸ್ಸು ಮಾಡಿತ್ತು.
ಪ್ರಸ್ತಾಪಿತ ಪರಶುರಾಂಪುರ ತಾಲೂಕು ಕೇಂದ್ರ-
17 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ 81 ಹಳ್ಳಿಗಳ ಒಟ್ಟು ವಿಸ್ತೀರ್ಣ 906.41 ಚ.ಕಿ.ಮೀ. ಒಟ್ಟಾರೆ ಜನಸಂಖ್ಯೆ೧,೨೦,೬೯೪. ಆಂದ್ರ ಗಡಿ ಭಾಗದ ರೇಣುಕಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ೭ ಹಳ್ಳಿಗಳು, ಓಬಳಾಪುರ ಗ್ರಾಪಂನ ೭ ಹಳ್ಳಿಗಳು, ಮೈಲನಹಳ್ಳಿ ಗ್ರಾಪಂನ ೪ ಹಳ್ಳಿಗಳು, ಘಟಪರ್ತಿ ಗ್ರಾಪಂನ ೪ ಹಳ್ಳಿಗಳು, ದೇವರಮರಿಕುಂಟೆ ಗ್ರಾಪಂನ ೬ ಹಳ್ಳಿಗಳು,
ಜಾಜೂರು ಗ್ರಾಪಂನ ೫ ಹಳ್ಳಿಗಳು, ಪಗಡಲಬಂಡೆ ಗ್ರಾಪಂನ ೭ ಹಳ್ಳಿಗಳು, ಚನ್ನಮ್ಮ ನಾಗತಿಹಳ್ಳಿ ಗ್ರಾಪಂನ ೭ ಹಳ್ಳಿಗಳು, ಚೌಳೂರು ಗ್ರಾಪಂನ ೬ ಹಳ್ಳಿಗಳು, ಪರಶುರಾಂಪುರ ಗ್ರಾಪಂನ ೧ ಹಳ್ಳಿ, ಮಹದೇವಪುರ ಗ್ರಾಪಂನ ೪ ಹಳ್ಳಿಗಳು, ಶಿದ್ದೇಶ್ವರನದುರ್ಗ ಗ್ರಾಪಂನ ೪ ಹಳ್ಳಿಗಳು, ದೊಡ್ಡಚೆಲ್ಲೂರು ಗ್ರಾಪಂನ ೩ ಹಳ್ಳಿಗಳು, ತಿಮ್ಮಣ್ಣನಾಯ್ಯನಕೋಟೆ ಗ್ರಾಪಂನ ೭ ಹಳ್ಳಿಗಳು, ಬೆಳಗೆರೆ ಗ್ರಾಪಂನ ೬ ಹಳ್ಳಿಗಳು, ಧರ್ಮಪುರ ಹೋಬಳಿಯ ವ್ಯಾಪ್ತಿಯ ಕಣಜನಹಳ್ಳಿ ಗ್ರಾಪಂನ ೧ ಹಳ್ಳಿ, ಖಂಡೇನಹಳ್ಳಿ ಗ್ರಾಪಂನ ಎರಡು ಹಳ್ಳಿಗಳನ್ನು ಸೇರಿಸಿಕೊಳ್ಳಲು ಶಿಫಾರಸ್ಸು ಮಾಡಿತ್ತು.
ನೂತನ ಪ್ರಸ್ತಾಪಿತ ತಾಲೂಕು ಕೇಂದ್ರಕ್ಕೆ ೧೭ ರಿಂದ ೩೦ ಕಿ.ಮೀ. ಅಂತರದಲ್ಲಿ ಗ್ರಾಮಗಳು ಬರಲಿದ್ದು ಸಾರಿಗೆ ಸೌಲಭ್ಯ, ವಿವಿಧ ರಾಜ್ಯ ಮತ್ತು ಕೇಂದ್ರ ಕಚೇರಿಗಳು, ಪೊಲೀಸ್ ಠಾಣೆ, ವಿದ್ಯುತ್ ವಿತರಣಾ ಕೇಂದ್ರ, ಪೋಸ್ಟ್ ಆಫೀಸ್ ಮತ್ತಿತರ ಎಲ್ಲ ಸೌಲಭ್ಯಗಳನ್ನು ಪರಶುರಾಂಪುರ ಕೇಂದ್ರ ಹೊಂದಿದೆ ಎಂದು ಸಮಿತಿ ವರದಿ ನೀಡಿದೆ.
ಸಚಿವ ಅಪಸ್ವರ-
ಹಿರಿಯೂರು ತಾಲೂಕಿನ ಆಂದ್ರ ಗಡಿ ಭಾಗದ ಧರ್ಮಪುರ ಹೋಬಳಿಯ 2 ಗ್ರಾಪಂ ವ್ಯಾಪ್ತಿಯ ಮೂರು ಹಳ್ಳಿಗಳನ್ನು ಪರಶುರಾಂಪುರ ತಾಲೂಕು ಕೇಂದ್ರಕ್ಕೆ ಸೇರ್ಪಡೆ ಮಾಡಲು ಅವಕಾಶ ನೀಡುವುದಿಲ್ಲ, ಪರಶುರಾಂಪುರ ತಾಲೂಕು ಕೇಂದ್ರ ಆಗಲು ಯಾವುದೇ ಕಾರಣಕ್ಕೂ ನಾನು ಅಡ್ಡಿ ಬರುವುದಿಲ್ಲ, ಧರ್ಮಪುರ ತಾಲೂಕು ಕೇಂದ್ರ ಆಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಶಾಸಕ ಟಿ.ರಘುಮೂರ್ತಿ ಅವರಿಗೆ ನೇರವಾಗಿಯೇ ಹೇಳಿದ್ದಾರೆ ಎನ್ನಲಾಗಿದೆ. ಧರ್ಮಪುರ ಹೋಬಳಿಯ ಮೂರು ಹಳ್ಳಿಗಳ ಕೊರತೆಯನ್ನು ಶಾಸಕ ರಘುಮೂರ್ತಿ ಅವರು ಬೇರೆಡೆ ಸಂಪಾದಿಸಬೇಕಾಗಿದೆ.
ಅಲ್ಲದೆ ತಳಕು ಹೋಬಳಿಯ ಕೆಲ ಹಳ್ಳಿಗಳು, ಚಳ್ಳಕೆರೆ ಕಸಬಾ ಹೋಬಳಿಯ ಕೆಲ ಹಳ್ಳಿಗಳ ಜನರು ಪರಶುರಾಂಪುರ ತಾಲೂಕು ಕೇಂದ್ರಕ್ಕೆ ಸೇರಿಸಬಾರದು ಈ ಹಿಂದೆ ಯಾವ ಸ್ಥಿತಿಯಲ್ಲಿದ್ದೇವೋ ಅದೇ ಸ್ಥಿತಿಯಲ್ಲಿ ಮನುಂದುವರೆಸುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಿರುವುದರಿಂದ ಆ ಭಾಗದ ಜನರನ್ನು ವಿಶ್ವಾಸಕ್ಕೆ ಪಡೆದು ನೂತನ ತಾಲೂಕು ಕೇಂದ್ರ ಘೋಷಣೆಗೆ ಶಾಸಕ ಟಿ.ರಘುಮೂರ್ತಿ ಅವರು ಮುಂದಡಿ ಇಟ್ಟಿದ್ದಾರೆ.
ಒಟ್ಟಾರೆ ಬೆಳಗಾವಿ ಅಧಿವೇಶನದಲ್ಲೇ ಪರಶುರಾಂಪುರ ಹೋಬಳಿ ಕೇಂದ್ರವು ಸೇರಿದಂತೆ ರಾಜ್ಯದ ವಿವಿಧ ಹೋಬಳಿ ಕೇಂದ್ರಗಳನ್ನು ನೂತನ ತಾಲೂಕು ಕೇಂದ್ರಗಳನ್ನಾಗಿ ಷೋಷಣೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
“ಪರಶುರಾಂಪುರವನ್ನು ತಾಲೂಕು ಕೇಂದ್ರ ಮಾಡಲು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ಸರ್ಕಾರ ನೂತನ ತಾಲೂಕು ಘೋಷಣೆ ಮಾಡುವ ಸಂದರ್ಭದಲ್ಲಿ ಪರಶುರಾಂಪುರ ತಾಲೂಕು ಕೇಂದ್ರ ಆಗಲಿದೆ. ಧರ್ಮಪುರ ಹೋಬಳಿಯ ಮೂರು ಹಳ್ಳಿಗಳು ಲಭ್ಯವಾಗದಿದ್ದರೆ ಪರ್ಯಾಯ ಚಿಂತನೆ ಮಾಡಲಾಗುತ್ತದೆ”. ಟಿ.ರಘುಮೂರ್ತಿ, ಶಾಸಕರು, ಚಳ್ಳಕೆರೆ ವಿಧಾನಸಭಾ ಕ್ಷೇತ್ರ.