ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
‘ನಮಗೂ ಕೆಲಸಗಳಿವೆ ಬಂದು ಹೋಗಿ; ನಿಮಗೂ ಕೆಲಸಗಳಿವೆ ಹೋಗಿ ಬನ್ನಿ‘. ಇದು ನಟ ಉಪೇಂದ್ರ ಅಭಿನಯದ ಯಾವುದೇ ಚಲನಚಿತ್ರದ ಡೈಲಾಗ್ ಎಂದು ಪರಿಭಾವಿಸದಿರಿ. ಈ ಬರಹವಿರುವ ಬ್ಯಾನರ್ ಚಿತ್ರವೀಗ ಚಿತ್ರದುರ್ಗದಲ್ಲಿ ವೈರಲ್ ಆಗುತ್ತಿದೆ. ಅಷ್ಟೇ ಅಲ್ಲದೆ ಶೋಷಿತ ಸಮುದಾಯಗಳ ಯುವಕರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಟ್ಟಿಗಳಲ್ಲಿ ಪರಿವರ್ತನಾ ಗಾಳಿ ಬೀಸಲು ಪ್ರೇರಣೆ ನೀಡುತ್ತಿದೆ ಎಂದರೆ ಸೋಜಿಗವಲ್ಲ.
ಬಯಲುಸೀಮೆಯ ಚಿತ್ರದುರ್ಗದಲ್ಲಿ ವಾರಗಟ್ಟಲೇ ಮಾರಮ್ಮನ ಹಬ್ಬ ಆಚರಿಸುವ ಪರಿಪಾಠವಿದೆ. ವರ್ಷವಿಡೀ ಮೈಮುರಿದು ದುಡಿಯುವ ಜನ ಹಬ್ಬದಲ್ಲಿ ಮಿಂದೇಳುತ್ತಾರೆ. ಬೆವರಿನ ಹಣ ಹಬ್ಬದ ಹೆಸರಿನಲ್ಲಿ ಸದ್ದಿಲ್ಲದೆ ಸವೆದಿರುತ್ತದೆ. ಹಬ್ಬ ಮುಗಿದ ಬಳಿಕ ಮತ್ತದೆ ದುಡಿಮೆಯ ಹಾದಿಯ ಅನಿವಾರ್ಯತೆ. ಅನೇಕರ ಪಾಲಿಗೆ ಉಳಿಕೆ ಮತ್ತು ಗಳಿಕೆ ಎಂಬುದು ಗಗನ ಕುಸುಮ. ಇನ್ನೂ ಕೆಲವರಿಗೆ ಹಬ್ಬ ಎಂಬುದು ಸಾಲದ ಶೂಲವೇ ಸರಿ. ಆದರೂ ಹಬ್ಬಗಳು ಮಾತ್ರ ನಿಲ್ಲಲ್ಲ; ಹಬ್ಬದ ಆಚರಣೆ ನಿರಂತರ!
ದುರ್ಗಕ್ಕೆ ಭದ್ರೆಯ ಹೊಸ ನೀರು ಹರಿದು ಬರುವ ಈ ಸುಸಂದರ್ಭದಲ್ಲಿ ಹಟ್ಟಿಗಳಲ್ಲಿ ಹೊಸ ಗಾಳಿ ಬೀಸಲು ಶುರುವಾಗಿದೆ. ಬಿರು ಬೇಸಿಗೆಯಲ್ಲೂ ತಣ್ಣನೆಯ ದಿವ್ಯಾನುಭೂತಿ ಆವರಿಸಿದೆ. ಹುಣಸೇಕಟ್ಟೆ ಎಂಬ ಗ್ರಾಮದಲ್ಲಿ ಯುವಕರು ಅಳವಡಿಸಿದ ಬ್ಯಾನರ್ ಪರಿವರ್ತನಾ ಪರ್ವದ ಸಂಕೇತವಾಗಿದೆ.
‘ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳು ಮತ್ತು ನೆಂಟರು, ಅತಿಥಿಗಳು ಎರಡು ದಿನ ಆತಿಥ್ಯ ಸ್ವೀಕರಿಸಿ ತಮ್ಮ ಗ್ರಾಮಕ್ಕೆ ಮರಳುತ್ತಿರುವ ತಮಗೆ ವಂದನೆಗಳು. ನಮಗೂ ಕೆಲಸಗಳಿವೆ ಬಂದು ಹೋಗಿ; ನಿಮಗೂ ಕೆಲಸಗಳಿವೆ ಹೋಗಿ ಬನ್ನಿ‘ ಎಂಬುದಾಗಿ ಶ್ರೀ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿಯಿಂದ ಯುವಕರು ಬ್ಯಾನರ್ ಹಾಕಿಸಿದ್ದಾರೆ. ಇದೇ ಬ್ಯಾನರ್ ಈಗ ಸಂಚಲನ ಸೃಷ್ಟಿಸಿದ್ದು ಸರಳ ಹಬ್ಬದಾಚರಣೆ, ಬಾಂಧವ್ಯದ ನಿರ್ವಹಣೆ ಜತೆಗೆ ಕಾಯಕ ಪ್ರಜ್ಞೆ ಬಡಿದೆಚ್ಚರಿಸಿ ಆರ್ಥಿಕ ಜಾಗೃತಿ ಮೂಡಿಸಿದೆ.
ಬ್ಯಾನರ್ ನೋಡಿದಾಕ್ಷಣ ನನಗಂತೂ ಮೊದಲಿಗೆ ಚಾಣಾಕ್ಷ ವ್ಯಾಪಾರಿಗಳು ನೆನಪಾದರು. ಅಂಗಡಿಯ ಕ್ಯಾಶ್ ಕೌಂಟರ್ ನಲ್ಲೇ ‘ನಗದು ಪ್ರೇಮಸಂಗ ಉದ್ರಿ ಮಾನಭಂಗ‘ ಎಂಬುದಾಗಿ ಪ್ರಕಟಿಸಿ ಮುಲಾಜಿಲ್ಲದೆ ಹಣ ವಸೂಲಿ ಮಾಡುವ ಪರಿ ನೆನಪಾಗಿ ನಗು ಬಂತು. ಆದರೂ ವ್ಯಾಪಾರೋದ್ಯಮ ಮತ್ತು ಆರ್ಥಿಕ ಅಭಿವೃದ್ಧಿಗೆ ಈ ಶಿಸ್ತು ಅಗತ್ಯವೆಂಬ ಪರಮ ಸತ್ಯ ಅರಿವಾಯಿತು.
ನನ್ನ ತಾತ ಸಂತ ಗುಣದ ಲಿಂಗಪ್ಪ ಮುದನೂರ್ ಅವರು ಹೇಳುತ್ತಿದ್ದ ವೈಚಾರಿಕ ಮಾತುಗಳು ಕಾಡಿದವು. ನಮ್ಮದೇ ಕುಟುಂಬದ ಅನೇಕರು ದೇವರು-ದಿಂಡಿರು ಎಂದು ವಿವಿಧ ಆಚರಣೆಗಳನ್ನು ಆಚರಿಸಿ ದಿವಾಳಿ ಆಗುತ್ತಿದ್ದ ಕಾಲದಲ್ಲೇ ತಾತ ಮಾತ್ರ ಮೌಢ್ಯ ಆಚರಣೆಗಳಿಗೆ ಸಲಾಂ ಹೊಡೆದಿದ್ದರು. ಅಪಾರ ದೈವ ಭಕ್ತರಾಗಿದ್ದ ತಾತ ಗುರುಬೋಧನೆ ತೆಗೆದುಕೊಂಡಿದ್ದರು. ಆಧ್ಯಾತ್ಮದಲ್ಲಿ ಸಾಧಕರಾಗಿ ಗುರುತಿಸಿಕೊಂಡಿದ್ದರು. ಆದರೆ, ‘ದೇವರ ಹೆಸರಿನಲ್ಲಿ ಉಪರಾಟಿ ಖರ್ಚು ಮಾಡಬ್ಯಾಡ್ರಿ. ಭಕ್ತಿಯಿಂದ ದೀಪ ಮುಡಿಸಿ ಕೈಮುಗಿಯಿರಿ‘ ಸಾಕೆನ್ನುತ್ತಿದ್ದರು.
‘ಕಡುಕಷ್ಟ ಬಂದರೂ ದೇವರಿಗೆ ಕುರಿ-ಕೋಳಿಯ ಹರಕೆ ಹೊತ್ತುಕೊಳ್ಳುವ ಅಗತ್ಯವಿಲ್ಲ. ದೇವರು ಏನೂ ಕೇಳಲ್ಲ; ನಿಮ್ಮ ಸಮಾಧಾನಕ್ಕೆ ಬೇಕಿದ್ದರೆ ದೀಪ ಮುಡಿಸುವ ಹರಕೆ ಹೊತ್ತುಕೊಳ್ಳಿ. ಅಷ್ಟರ ಮೇಲೆ ಏನೂ ಹರಕೆ ಬೇಡ‘ ಎಂದು ಹೇಳಿ ಆತ್ಮ ಜಾಗೃತಿ ಮೂಡಿಸುತ್ತಿದ್ದರು. ತಾತನ ಮಾತುಗಳು ಅದೆಷ್ಟು ಸತ್ಯವೆಂದು ನೆನೆಯುತ್ತ ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ವಿದ್ಯುತ್ ದೀಪ ನಂದಿ ಹೋಗಿತ್ತು, ಜಗುಲಿಯ ದೀಪ ಪ್ರಖರವಾಗಿ ಬೆಳಗುತ್ತ ಬೆಳಕು ಚಲ್ಲಿತ್ತು. ಆತ್ಮ ಬೆಳಕು; ಅನಂತ ಬೆಳಕು!.
ಲೇಖನ: ಬಸವರಾಜ ಮುದನೂರ್, ಪತ್ರಕರ್ತರು, ಚಿತ್ರದುರ್ಗ.

