ಸಾಮಾನ್ಯ ಜನರ ಕೈಯಲ್ಲಿ ಆಡಳಿತ ಇರಬೇಕೆನ್ನುವುದು ಸಂವಿಧಾನದ ಆಶಯ ;ಸಂಸದೆ ಪ್ರಭಾ ಮಲ್ಲಿಕಾರ್ಜುನ್

News Desk

ಸಾಮಾನ್ಯ ಜನರ ಕೈಯಲ್ಲಿ ಆಡಳಿತ ಇರಬೇಕೆನ್ನುವುದು ಸಂವಿಧಾನದ ಆಶಯ ;ಸಂಸದೆ ಪ್ರಭಾ ಮಲ್ಲಿಕಾರ್ಜುನ್
ಚಂದ್ರವಳ್ಳಿ ನ್ಯೂಸ್, ಹರಿಹರ:
ದೇಶದ ಆಡಳಿತ ಸಾಮಾನ್ಯ ಜನರ ಕೈಯಲ್ಲಿರಬೇಕು ಎನ್ನುವುದು ಸಂವಿಧಾನದ ಆಶಯವಾಗಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಮ್ಮ ಅಭಿಮತ ವ್ಯಕ್ತಪಡಿಸಿದರು.

ನಗರದ ತಾಲೂಕ ಕ್ರೀಡಾಂಗಣ(ಗಾಂಧಿ ಮೈದಾನ) ದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಂವಿಧಾನವು ಶ್ರೀಸಾಮಾನ್ಯರಿಗೆ ಆಡಳಿತ ಸಿಗಬೇಕು ಎನ್ನುವ ಆಶಯ ಹೊಂದಿದೆ ಎಂದರು.

ಈ ದಿವಸ ವಿಶ್ವದಾದ್ಯಂತ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ 80 ಕಿಲೋಮೀಟರ್ ಉದ್ದದ ಮಾನವ ಸರಪಳಿ ನಿರ್ಮಿಸಿ, ಜನಪ್ರತಿನಿಧಿಗಳು ಸೇರಿದಂತೆ 85,000ಕ್ಕೂ ಹೆಚ್ಚು ಜನ ಭಾಗಿಯಾಗಿ ಸಂವಿಧಾನದ ಪೀಠಿಕೆ ಓದುವ ಮೂಲಕ ಭಾಗವಹಿಸಿದ್ದಾರೆ ಎನ್ನುವುದು ಸಂತಸದ ಸಂಗತಿ ಎಂದು ಹೇಳಿದರು.

ಸಂವಿಧಾನದ ಮೂಲ ಉದ್ದೇಶ ಧ್ವನಿ ಇಲ್ಲದವರಿಗೆ ಧ್ವನಿ ಯಾಗುವುದು, ತಳ ಸಮುದಾಯಗಳಿಗೆ ನ್ಯಾಯ ದೊರಕಿಸುವುದು ಸೇರಿದಂತೆ ದೇಶದ ಪ್ರಜೆಗಳಿಗೆ ಹಲವಾರು ಸೌಲಭ್ಯಗಳನ್ನು ಒದಗಿಸುವ ಪ್ರಮುಖ ಅಂಶಗಳನ್ನು ಹೊಂದಿದ್ದು ಅಧಿಕಾರವು ಜನರ ಕೈಯಲ್ಲಿ ಇರಬೇಕು ಎನ್ನುವುದು ಇದರ ಮೂಲ ಉದ್ದೇಶ ವಾಗಿದೆ.

ಇಂತಹ ಪ್ರಬಲ ಸಂವಿಧಾನವು ಇತ್ತೀಚಿನ ದಿನಮಾನಗಳಲ್ಲಿ ಒತ್ತಡವನ್ನು ಎದುರಿಸುತ್ತಿದೆ ಜೊತೆಗೆ ಆಡಳಿತ ನಡೆಸುವವರ ಸರ್ವಾಧಿಕಾರ, ದಬ್ಬಾಳಿಕೆಗಳಿಗೆ ಒಳಗಾಗಿ ದೇಶದ ಜನತೆಗೆ ತಪ್ಪು ಮಾಹಿತಿ ನೀಡಿ ಇದರ ಬಗ್ಗೆ ಅಪನಂಬಿಕೆ ಮೂಡುವಂತೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಆದ್ದರಿಂದ ಮತದಾರರು ದೇಶವನ್ನು ಸಂವಿಧಾನವನ್ನು ರಕ್ಷಿಸುವವರಿಗೆ ಅಧಿಕಾರ ನೀಡಬೇಕು.
ಸಂವಿಧಾನ ರಕ್ಷಿಸುವ ಕೆಲಸ ಕೇವಲ ಸರ್ಕಾರದ್ದು ಮಾತ್ರ ಆಗಿರದೆ ಶ್ರೀಸಾಮಾನ್ಯರದ್ದೂ ಆಗಿದ್ದು ಎಲ್ಲರೂ ಜವಾಬ್ದಾರಿಯುತ ವಾಗಿ ಸಂವಿಧಾನ ರಕ್ಷಣೆಯ ಕೆಲಸವನ್ನು ಮಾಡಬೇಕಾಗಿದೆ. ಪ್ರತಿಯೊಬ್ಬ ಪ್ರಜೆಯೂ ತಮ್ಮ ಮತವನ್ನು ನಿಷ್ಪಕ್ಷವಾಗಿ ಚಲಾಯಿಸಿ ಪಾರದರ್ಶಕ ಆಡಳಿತ ನೀಡುವ ಸರ್ಕಾರವನ್ನು ಆರಿಸುವ ಮೂಲಕ ಸಂವಿಧಾನ ಉಳಿಸುವoತೆ ಮಾಡ ಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಪಿ.ಹರೀಶ್ ಮಾತನಾಡಿ ನಮ್ಮ ಭಾರತ ಅನೇಕ ರಾಜ್ಯ, ಧರ್ಮ, ಜಾತಿಗಳನ್ನು ಒಳಗೊಂಡ ದೇಶವಾಗಿದ್ದು ಇಲ್ಲಿ ಅನೇಕ ಆಚರಣೆಗಳನ್ನು ಮಾಡಲಾಗುತ್ತಿದೆ. ಮತ್ತು ಎಲ್ಲಾ ಧರ್ಮದವರಿಗೂ ಸಮಾನ ಅವಕಾಶ ನೀಡಿದೆ ಇದಕ್ಕೆ ನಮ್ಮ ಸಂವಿಧಾನವು ಆಧಾರವಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಭಾರತ ದೇಶವು ವಿಶ್ವದ ಶ್ರೀಮಂತ ದೇಶಗಳ ಜೊತೆ ಕ್ರೀಡೆ ಆರ್ಥಿಕ ಆರೋಗ್ಯ ಮುಂತಾದ ವಿಭಾಗಗಳಲ್ಲಿ ಸ್ಪರ್ಧೆ ನೀಡಿ ಗಮನ ಸೆಳೆಯುತ್ತಿದೆ ಇದಕ್ಕೆ ಮುಖ್ಯ ಕಾರಣ ದೇಶವನ್ನಾಳುತ್ತಿರುವ ವ್ಯಕ್ತಿ ಪಕ್ಷ ಕಾರಣವಾಗಿದೆ. ಸಂವಿಧಾನವನ್ನು ಪಾಲನೆ ಮಾಡಿ ಅದನ್ನು ರಕ್ಷಿಸುವುದು ನಮ್ಮ ಮುಖ್ಯ ಕರ್ತವ್ಯವಾಗಿದೆ ಎಂದರು.

18 ವರ್ಷಕ್ಕೂ ಹೆಚ್ಚಾಗಿರುವ ಪ್ರಜೆಗಳ ಜೊತೆ ಎಲ್ಲಾ ಭಾರತೀ ಯರು ದೇಶದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡುವಂತಹ ಸಮರ್ಥವಾಗಿ ದೇಶವನ್ನು ಮುನ್ನಡೆಸುವ ಪಕ್ಷಗಳಿಗೆ ಎಚ್ಚರಿಕೆಯಿಂದ ಮತ ನೀಡಿ ದೇಶದ ಚುಕ್ಕಾಣಿ ಹಿಡಿಯುವ ಸಮರ್ಥ ವ್ಯಕ್ತಿಗಳನ್ನು ಆಯ್ಕೆ ಮಾಡುವಂತೆ ಅವರು ಕರೆ ಕೊಟ್ಟರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಹಿಟ್ನಾಳ್ ಪ್ರಾಸ್ತಾವಿಕವಾಗಿ ಮಾತನಾಡಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಸಂದರ್ಭದಲ್ಲಿ ಮಾನವ ಸರಪಳಿ ನಿರ್ಮಿಸಲು ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಜಯ್ ಕುಮಾರ್ ಸಂತೋಷ್, ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಶೀಲ್ದಾರ್ ಕೆ.ಎo. ಗುರುಬಸವರಾಜ್, ನಗರಸಭೆ ಅಧ್ಯಕ್ಷ ಕವಿತಾ ಮಾರುತಿ ಬೇಡರ್, ಮಾಜಿ ಶಾಸಕ ಎಸ್.ರಾಮಪ್ಪ, ಕಾಂಗ್ರೆಸ್ ಮುಖಂಡ ಎನ್.ಎಚ್. ಶ್ರೀನಿವಾಸ್ ನಂದಿಗಾವಿ, ದಾವಣಗೆರೆ ತಹಶೀಲ್ದಾರ್ ಎಂ.ಬಿ. ಅಶ್ವಥ್, ಪೊಲೀಸ್ ಇನ್ಸ್ಪೆಕ್ಟರ್ ಎಸ್.ದೇವಾನಂದ್, ಗ್ರಾಮಾಂತರ ಸಿಪಿಐ ಸುರೇಶ್ ಸಗರಿ ಸೇರಿದಂತೆ ಜಿಲ್ಲೆಯ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ-ಕಾಲೇಜು ಮುಖ್ಯಸ್ಥರು, ಹಲವಾರು ಸಂಘಟನೆಯ ಮುಖಂಡರುಗಳು ಹಾಗೂ ಸಹಸ್ರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

- Advertisement -  - Advertisement -  - Advertisement - 
Share This Article
error: Content is protected !!
";