ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹೊಸಯಳನಾಡು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಟಿ ಇವರು ಕರ್ತವ್ಯ ಲೋಪ ಎಸಗಿದ್ದು ಇವರ ವಿರುದ್ಧ ಜಿಪಂ ಉಪ ಕಾರ್ಯದರ್ಶಿ ಇವರ ಸ್ಥಳ ಭೇಟಿ ವರದಿ ಆಧರಿಸಿ ಶಿಸ್ತು ಕ್ರಮ ಜರುಗಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹೊಸಯಳನಾಡು ಗ್ರಾಮ ಪಂಚಾಯಿತಿಯಲ್ಲಿ ಹಿಂದು ಸ್ಮಶಾನಕ್ಕೆ (ಸರ್ಕಾರಿ ಜಾಗ ಮೀಸಲಿಟ್ಟಿದ್ದ ಜಾಗದಲ್ಲಿ 7200 ಅಡಿ ಜಾಗವನ್ನು ಕೆ ರವಿಕುಮಾರ್ ಬಿನ್ ಕಾಡಪ್ಪ ಎಂಬುವವರಿಗೆ 9/11 ಇ-ಸ್ವತ್ತು ಮಾಡಿದ್ದು, ಈ ವಿಷಯ ಗ್ರಾಮ ಪಂಚಾಯಿತಿಯ ಸದಸ್ಯರಿಗೆ ಮತ್ತು ಅಧ್ಯಕ್ಷರಿಗೆ ತಿಳಿದ ನಂತರ ಪಂಚಾಯಿತಿಯಲ್ಲಿ ಅಕ್ರಮವಾಗಿ ಕರಾ-ರಿಜಿಸ್ಟರ್ ನಲ್ಲಿ ಕೆ.ರವಿಕುಮಾರ್ ಬಿನ್ ಕಾಡಪ್ಪ ಎಂಬುವವರ ಹೆಸರಿಗೆ ಬರೆದಿರುವಂತಹ ಜಾಗವನ್ನು ವಜಾ ಮಾಡಬೇಕೆಂದು ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಗಿತ್ತು.
ಅಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಟಿ ಇವರು ಗ್ರಾಮ ಪಂಚಾಯತಿಯ ಸರ್ವಸದಸ್ಯರು ಮತ್ತು ಅಧ್ಯಕ್ಷರು ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ವಜಾ ಮಾಡಿದ ಅಕ್ರಮ ಖಾತೆಯನ್ನು ಖಾತೆ ಪುಸ್ತಕದಲ್ಲಿಯು ಸಹ ವಜಾ ಮಾಡಲಾಗಿದೆ ಎಂದು ನಮೂದಿಸಿದ್ದ ಕರಾ ಪುಸ್ತಕವನ್ನು ನೋಡದೆ, ಸ್ಥಳ ಪರಿಶೀಲನೆ ಮಾಡದೆ, ಗ್ರಾಮ ಠಾಣಾದಿಂದ ಹೋಗಿರುವ ಕಂದಾಯ ಇಲಾಖೆಗೆ ಸಂಬಂಧಪಟ್ಟ ಸರ್ಕಾರಿ ಜಾಗವನ್ನು ನೇರವಾಗಿ ಮ್ಯೂಟೇಶನ್ ಬದಲಾಯಿಸಿಕೊಟ್ಟು ಚಿನ್ನಸ್ವಾಮಿ ಬಿನ್ ಪಳನಿಸ್ವಾಮಿ ಎಂಬುವವರಿಗೆ ಇ-ಸ್ವತ್ತು ಮಾಡಿಕೊಟ್ಟಿರುತ್ತಾರೆ.
ಹಿಂದು ಸ್ಮಶಾನದ ಜಾಗವನ್ನು ಅಕ್ರಮವಾಗಿ ಇ-ಸ್ವತ್ತು ಮಾಡಿಕೊಟ್ಟಂತಹ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಕೂಡಲೇ ಅಮಾನತ್ತು ಮಾಡಬೇಕು ಮತ್ತು ಈ ಕೂಡಲೇ ಖಾತೆ ವಜಾಗೊಳಿಸಿ ಸರ್ಕಾರದ ಜಾಗ ಮುಟ್ಟು ಗೋಲು ಹಾಕಬೇಕೆಂದು ಕೋರಿರುತ್ತಾರೆ.
ಜಿಪಂ ಉಪ ಕಾರ್ಯದರ್ಶಿ ಖದ್ದು ಸ್ಥಳಕ್ಕೆ ಭೇಟಿ ನೀಡಿ ಚಿನ್ನಸ್ವಾಮಿ ಬಿನ್ ಎನ್ ಪಳನಿಸ್ವಾಮಿ ರವರು ಮ್ಯೂಟೇಶನ್ ಬದಲಾಯಿಸಲು ಗ್ರಾಮ ಪಂಚಾಯಿತಿಗೆ ಮನವಿ ನೀಡಿದ್ದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಟಿ. ಶ್ರೀನಿವಾಸ್ ರವರು ಯಾವುದೇ ಹಿಂದಿನ ದಾಖಲಾತಿ ಪರಿಶೀಲಿಸದೆ ದಿನಾಂಕ:26.02.2024 ರಂದು ಚಿನ್ನಸ್ವಾಮಿ.ಪಿ ಬಿನ್ ಎನ್ ಪಳನಿಸ್ವಾಮಿ ರವರಿಗೆ ಇ-ಸ್ವತ್ತು ವಿತರಿಸಿ ಕರ್ತವ್ಯ ಲೋಪವೆಸಗಿದ ಪಿಡಿಒ ವಿರುದ್ಧ ಶಿಸ್ತು ಕ್ರಮ ಜರುಗಿಸಬಹುದಾಗಿದೆ ಎಂದು ವರದಿ ಸಲ್ಲಿಸಿದ್ದಾರೆ. ಕಾರಣ ಕೇಳಿ ನೋಟಿಸ್ ಜಾರಿ ಮಾಡಿದಾಗಲು ಸದರಿ ನೌಕರ ಸಮರ್ಪಕವಾದ ಸಮಜಾಯಿಷಿ ನೀಡಿಲ್ಲ. ಹಾಗಾಗಿ ಜಿಪಂ ಸಿಇಒ ಸೇಮಶೇಖರ್ ಅವರು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ವಿರುದ್ಧ ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ.