ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾಶೆಟ್ಟಿಹಳ್ಳಿ ಪಟ್ಟಣ ಪಂಚಾಯ್ತಿ ಚುನಾವಣೆ ಯಾವುದೇ ಅಹಿತಕರ ಘಟನೆ ಇಲ್ಲದೆ ಶಾಂತಿಯುತವಾಗಿ ನಡೆದಿದೆ. ಬೆಳಗಿನಿಂದ ಮದ್ಯಾನ್ಹದವರೆಗೆ ಮಂದಗತಿಯಲ್ಲಿದ್ದ ಮತದಾನ ಪ್ರಕ್ರಿಯೆ ಮದ್ಯಾನ್ಹದ ನಂತರ ತೀವ್ರಗತಿ ಪಡೆದು ಕೊಂಡಿತ್ತು.
ಭಾಷೆಟ್ಟಿ ಹಳ್ಳಿ ಪಟ್ಟಣ ಪಂಚಾಯ್ತಿ ಯಾಗಿ ಪರಿವರ್ತನೆ ಗೊಂಡ ನಂತರ ನಡೆದ ಮೊದಲ ಚುನಾವಣೆ ಇದಾಗಿದ್ದು ಆ ಕಾರಣಕ್ಕೆ ಪಂಚಾಯ್ತಿ ವ್ಯಾಪ್ತಿಯ ಮತಗಟ್ಟೆಗಳಿಗೆ ಮತದಾರರು ಹುರುಪಿನಿಂದ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು. ಕೆಲ ಮತಗಟ್ಟೆಗಳಲ್ಲಿ ಸ್ಥಳೀಯರಲ್ಲದವರು ಮತದಾನ ಮಾಡಲು ಬಂದ ಬಗ್ಗೆ ಆಕ್ಷೇಪ ಉಂಟಾಗಿತ್ತು.
ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಸುಗಮ ಮತದಾನಕ್ಕೆ ಅವಕಾಶ ಕಲ್ಪಿಸಿದರು. ಚುನಾವಣಾ ಕಚೇರಿಯ ಮಾಹಿತಿ ಯಂತೆ ಸಂಜೆ 5 ಗಂಟೆ ವೇಳೆಗೆ 5017 ಪುರುಷ ಮತದಾರರು ಹಾಗೂ 5089 ಮಹಿಳಾ ಮತದಾರರು ಮತದಾನ ಮಾಡಿದ್ದು ಶೇಕಡಾ 81.34 ಮತದಾನವಾಗಿದೆ.
ಮತಗಟ್ಟೆಗಳಿಗೆ ಸೂಕ್ತ ಬಂದೋಬಸ್ತ್ ಮಾಡಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗಿತ್ತು. ಮತಗಟ್ಟೆಗಳಿಗೆ ರಾಜ್ಯ ಚುನಾವಣಾ ಆಯುಕ್ತ ಜಿ. ಎಸ್. ಸಂಗ್ರೇಶಿ, ಜಿಲ್ಲಾಧಿಕಾರಿ ಬಸವರಾಜ್ ಕೆ. ಯರಗೋಳ್ ಬೇಟಿ ನೀಡಿ ಚುನಾವಣಾ ವ್ಯವಸ್ಥೆ ಯನ್ನು ಪರಿಶೀಲಿಸಿದರು.
ಭಾಷೆಟ್ಟಿ ಹಳ್ಳಿ ಪಟ್ಟಣ ಪಂಚಾಯ್ತಿ ಚುನಾವಣೆ ಜೊತೆಯಲ್ಲೇ ನಗರಸಭೆಯ 21 ನೇ ವಾರ್ಡಿನ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಿತು. ನಗರದ ಮಹಿಳಾ ಸಮಾಜದಲ್ಲಿ ಮತಗಟ್ಟೆ ಆಯೋಜಿಸಲಾಗಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತ ಮತದಾನ ನಡೆಯಿತು. ಮಾಹಿತಿಯ ಪ್ರಕಾರ ಸಂಜೆ 5 ರ ವೇಳೆಗೆ ಶೇಕಡಾ 67.11 ಮತದಾನ ಎನ್ನಲಾಗಿದೆ.

