ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಕ್ಕಳು ಸಾಕೆಂದು ಮಹಿಳೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದು ವೈದ್ಯರೊಬ್ಬರ ನಿರ್ಲಕ್ಷದಿಂದ ಸಂತಾನ ಹರಣ ಶಸ್ತ್ರ ಚಿಕಿತ್ಸೆ ವಿಫಲವಾಗಿದ್ದರಿಂದ ವೈದ್ಯನಿಗೆ ದಂಡ ಹಾಕಿರುವ ಘಟನೆ ಚಿತ್ರದುರ್ಗ ಜಿಲ್ಲಾ ಗ್ರಾಹಕರ ವೇದಿಕೆ ನ್ಯಾಯಾಲಯದಲ್ಲಿ ಜರುಗಿದೆ.
ಚಿತ್ರದುರ್ಗ ಜಿಲ್ಲಾಸ್ಪತ್ರೆ ವೈದ್ಯ ಡಾ.ಶಿವಕುಮಾರ್ ಗೆ 55 ಸಾವಿರ ದಂಡ ವಿಧಿಸಿ ಗ್ರಾಹಕರ ಆಯೋಗ ತೀರ್ಪು ನೀಡಿದೆ. ವೈದ್ಯ ಶಿವಕುಮಾರ್ ಅವರು ಲಕ್ಕಮ್ಮ ಎಂಬುವರಿಗೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿದ್ದರು. ಶಸ್ತ್ರ ಚಿಕಿತ್ಸೆ ವಿಫಲವಾಗಿ 3ನೇ ಮಗುವಿಗೆ ಅವರು ಜನ್ಮ ನೀಡಿದ್ದರು.
ಶಸ್ತ್ರ ಚಿಕಿತ್ಸೆಯಲ್ಲಿ ನಿರ್ಲಕ್ಷ ತೋರಿದ್ದ ಸರ್ಕಾರಿ ಜಿಲ್ಲಾಸ್ಪತ್ರೆ ವೈದ್ಯನ ವಿರುದ್ದ ದೂರು ದಾಖಲು ಮಾಡಲಾಗಿತ್ತು. 2014ರಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದ ಲಕ್ಕಮ್ಮ ಗ್ರಾಹಕರ ಆಯೋಗದಲ್ಲಿ 2021 ರಲ್ಲಿ ದೂರು ಸಲ್ಲಿಕೆ ಮಾಡಿದ್ದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಲಕ್ಕಮ್ಮ ದೂರು ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ಆಯೋಗದ ಅಧ್ಯಕ್ಷರಾದ HN ಮೀನಾ ಅವರು ವೈದ್ಯರ ನಿರ್ಲಕ್ಷ್ಯಕ್ಕೆ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.