ಪೆನ್ನು ಖಡ್ಗಕ್ಕಿಂತ ಹರಿತವಾದದು

News Desk

ಚಂದ್ರವಳ್ಳಿ ನ್ಯೂಸ್, ಯಾದಗಿರಿ:
ಪೆನ್ನು ಖಡ್ಗಕ್ಕಿಂತ ಹರಿತವಾದದು
ಪೆನ್ನು ಎಂಬುದು ಕೇವಲ ಮಶಿಯನ್ನೊಳಗೊಂಡ ಒಂದು ಉಪಕರಣವಲ್ಲ. ಅದು ಚಿಂತನೆಗಳ ಆಯುಧ, ಪರಿವರ್ತನೆಯ ಹಾದಿ, ಸಮಾಜವನ್ನು ರೂಪಿಸುವ ಶಕ್ತಿಯ ಚಿಹ್ನೆ.

ಖಡ್ಗವು ತೀಕ್ಷ್ಣವಾಗಿರಬಹುದು; ಅದು ಶರೀರವನ್ನು ಗಾಯಗೊಳಿಸಬಹುದು. ಆದರೆ ಪೆನ್ನು ಆತ್ಮವನ್ನೂ, ಮನಸ್ಸನ್ನೂ, ಭಾವನೆಗಳನ್ನೂ ಸ್ಪರ್ಶಿಸಿ, ಸಾವಿರಾರು ಜನರ ಬದುಕನ್ನು ಬದಲಾಯಿಸಬಲ್ಲ ಶಕ್ತಿಯ ಮಾಧ್ಯಮವಾಗಿದೆ. ಆದ್ದರಿಂದಲೇ, “ಪೆನ್ನು ಖಡ್ಗಕ್ಕಿಂತ ಹರಿತವಾದದುಎಂಬ ಮಾತು ಅಕ್ಷರಶಃ ಸತ್ಯ.

ಇತಿಹಾಸಕ್ಕೆ ಹೊಕ್ಕರೆ, ಮಹಾತ್ಮ ಗಾಂಧೀಜಿ, ಅಂಬೇಡ್ಕರ್, ವಿಕ್ಟರ್ ಹ್ಯೂಗೋ, ಟೋಲ್‌ಸ್ಟಾಯ್, ಕುವೆಂಪು, ಟಗೋರ್ ಮತ್ತು ನೂರಾರು ಲೇಖಕರು ತಮ್ಮ ಬರಹದ ಮೂಲಕ ಜಗತ್ತನ್ನು ಜಾಗೃತಗೊಳಿಸಿದರು. ಗಾಂಧೀಜಿ ಖಡ್ಗ ಹಿಡಿಯದೆ ಕೂಡ ಬ್ರಿಟಿಷ್ ಆಳ್ವಿಕೆಗೆ ತೀವ್ರ ಧಕ್ಕೆಯನ್ನಿತ್ತರು. ಅವರು ಬರೆದ ನೂರಾರು ಲೇಖನಗಳು, ಪತ್ರಗಳು, ಭಾಷಣಗಳು ಜನರಲ್ಲಿ ಸ್ವಾತಂತ್ರ್ಯದ ಭಾವನೆಗೆ ಸ್ಪೂರ್ತಿಯಾದವು. ಅಂಬೇಡ್ಕರವರು ಬರೆದ ಸಂವಿಧಾನ, ಸಮಾಜದ ಎಳೆಯವನ್ನೂ ಬೆಳೆಯವನ್ನೂ ಮುಟ್ಟಿದ ಮಹಾಕೃತಿ. ಇದು ಪೆನ್ನಿನ ಶಕ್ತಿಗೆ ಬಲವಾದ ಉದಾಹರಣೆ.

 ಖಡ್ಗ ಎಲ್ಲಿ ಹಿಂಸೆ, ರಕ್ತಪಾತ, ಭೀತಿಯನ್ನುಂಟುಮಾಡುತ್ತದೆಯೋ, ಅಲ್ಲೆ ಪೆನ್ನು ಶಾಂತಿ, ನ್ಯಾಯ, ಸಂವಾದ, ಸಮಾನತೆಯ ಬೆಳಕು ಹಬ್ಬುತ್ತದೆ. ಒಂದು ಕಾಲದಲ್ಲಿ ತಿರುಳಿಲ್ಲದ ರಾಜ್ಯಗಳು ಶಕ್ತಿಯ ಮೂಲಕ ಆಳಿದರೂ, ಇಂದು ಲೋಕಶಕ್ತಿ ಪೆನ್ನಿನ ಮೂಲಕ ರೂಪುಗೊಳ್ಳುತ್ತಿದೆ.

ಸುದ್ದಿಪತ್ರಿಕೆಗಳು, ಪುಸ್ತಕಗಳು, ಸಾಮಾಜಿಕ ಜಾಲತಾಣಗಳಲ್ಲಿನ ಲೇಖನಗಳು ಲಕ್ಷಾಂತರ ಜನರ ಮನಸ್ಸನ್ನು ರೂಪಿಸುತ್ತಿವೆ. ಪೆನ್ನು ಸಮಾಜದ ಕಣ್ಣಾಗಿದ್ದು, ಅಸತ್ಯದ ವಿರುದ್ಧ ಸತ್ಯವನ್ನು ಎತ್ತಿ ಹಿಡಿಯುವ ಶಕ್ತಿಯಾಗಿದೆ.

ಪೆನ್ನು ಶಾಲೆಯ ವಿದ್ಯಾರ್ಥಿಯಿಂದ ಪ್ರಬುದ್ಧ ಚಿಂತಕರವರೆಗೆ ಎಲ್ಲರ ಕೈಯಲ್ಲಿರುವ ಶಸ್ತ್ರಾಸ್ತ್ರ. ಅದು ಯಾವುದೇ ಧ್ವಂಸವಿಲ್ಲದೆ, ಬದಲಾವಣೆಯ ಬೀಜವನ್ನೆ ಬಿತ್ತುತ್ತದೆ. ಖಡ್ಗವು ಒಂದು ಕ್ಷಣದ ಶಕ್ತಿಯಾಗಿದೆ ಆದರೆ ಪೆನ್ನು ಶಾಶ್ವತ ಪ್ರಭಾವ ಬೀರಬಲ್ಲದು. ಮನಸ್ಸಿನಲ್ಲಿ ಬದಲಾವಣೆ ತಂದಾಗಲೇ ನಿಜವಾದ ಕ್ರಾಂತಿ ಸಾಧ್ಯ. ಅದನ್ನು ಸಾಧ್ಯವಾಗಿಸೋದು ಪೆನ್ನಿನ ಕೆಲಸ.

ಅಂತೆಯೇ, ಪೆನ್ನಿನ ಶಕ್ತಿ ಅಷ್ಟೊಂದು ಮಹತ್ವದ್ದಾಗಿದೆ. ಅದು ಕೇವಲ ಬರೆಯುವುದಕ್ಕಾಗಿ ಅಲ್ಲ, ಬದಲಾಯಿಸುವುದಕ್ಕಾಗಿ. ಹೀಗಾಗಿ, “ಪೆನ್ನು ಖಡ್ಗಕ್ಕಿಂತ ಹರಿತವಾದದುಎಂಬ ಮಾತು ಯುಗಾದ್ಯಂತ ಶಾಶ್ವತವಾಗಿ ಸತ್ಯವಾಗಿರುತ್ತದೆ.
ಲೇಖನ-
ಚಂದನ್ ಎಸ್ ಅವಂಟಿ, ಇಡ್ಲೂರ್, ಯಾದಗಿರಿ ಜಿಲ್ಲೆ.

 

Share This Article
error: Content is protected !!
";