ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನಾದ್ಯಂತ ಶುಕ್ರವಾರ ರಾತ್ರಿ ಬಿದ್ದ ಹಸ್ತಮಳೆಗೆ ಅನೇಕ ಕೆರೆಗಳಲ್ಲಿ ಸಮೃದ್ದವಾದ ನೀರಿನ ಪ್ರಮಾಣ ಹೆಚ್ಚಾಗಿದ್ದು, ನಾಯಕನಹಟ್ಟಿ ಹೋಬಳಿಯ ಎನ್.ದೇವರಹಳ್ಳಿ ಕೆರೆ ತುಂಬಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ನಗರಂಗೆರೆ ಗ್ರಾಮದ ಕೆರೆಯೂ ತುಂಬಿ ಹರಿದು ಶನಿವಾರ ಬೆಳಗಿನಜಾವ ಕೋಡಿಬಿದಿದೆ.
ಪ್ರಸ್ತುತ ವರ್ಷ ಕೆರೆ ಕೋಡಿಬಿದ್ದ ಮೊದಲ ಗ್ರಾಮ ನಗರಂಗೆರೆಯಾಗಿದ್ದು ಕೋಡಿ ನೀರನ್ನು ನೋಡಲು ಗ್ರಾಮದ ಮಹಿಳೆಯರು, ಮಕ್ಕಳು, ಯುವಕರು, ಮುಖಂಡರು ತಂಡ, ತಂಡವಾಗಿ ಬಂದು ಗ್ರಾಮದ ಕೆರೆ ಕೋಡಿಬಿದಿದ್ದನ್ನು ಕಂಡ ಸಂತಸ ವ್ಯಕ್ತಪಡಿಸಿದ್ದಾರೆ.
ಕೆರೆಕೋಡಿಬಿದ್ದ ಪರಿಣಾಮವಾಗಿ ಗ್ರಾಮಸ್ಥರಲ್ಲಿ ಸಂತಸ ಹೆಚ್ಚಾಗಿದೆ. ಎಲ್ಲರ ಬಾಯಲ್ಲೂ ಕೆರೆಕೋಡಿ ಬಿದ್ದ ಬಗ್ಗೆಯೇ ಚರ್ಚೆ ಸಾಗಿದೆ.
ಕಳೆದ ೨೦೨೨ರಲ್ಲಿ ಬಿದ್ದ ಮಳೆಗೆ ಗ್ರಾಮದ ಕೆರೆ ಕೋಡಿಬಿದ್ದು ತೆಪ್ಪೋತ್ಸವ ಕಾರ್ಯಕ್ರಮವನ್ನೂ ಸಹ ಗ್ರಾಮದ ಎಲ್ಲರೂ ಸೇರಿ ವಿಜೃಂಭಣೆಯಿಂದ ನಡೆಸಿದ್ದರು. ಕಳೆದ ಕೆಲವು ದಿನಗಳ ಹಿಂದೆ ಬಿದ್ದ ಮಳೆಗೆ ಕೆರೆತುಂಬಿದ್ದು, ಶುಕ್ರವಾರ ರಾತ್ರಿ ಮಾತ್ರ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ಕೆರೆಕೋಡಿಬಿದಿದೆ.