ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಪಕ್ಷದ ನಾಟಕಗಳನ್ನು ನೋಡಿ ನೋಡಿ ಜನರು ಬೇಸತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದರು.
ಐದಾರು ದಶಕಗಳಿಂದ ಅಧಿಕಾರ ಅನುಭವಿಸಿ, ಒಂಬತ್ತು ಬಾರಿ ಶಾಸಕ, ಸಂಸದ, ಕೇಂದ್ರ ಸಚಿವರು, ರಾಜ್ಯಸಭೆ ವಿಪಕ್ಷ ನಾಯಕರು, ಎಐಸಿಸಿ ಅಧ್ಯಕ್ಷರಾಗಿರುವ ನಂತರವೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಮಲ್ಲಿಕಾರ್ಜುನ ಖರ್ಗೆ ಅವರು, ಈಗ ಅಸಹಾಯಕರಂತೆ ಬೇಡುತ್ತಿರುವ ನಾಟಕ, ನಿಮ್ಮ ವೈಫಲ್ಯಗಳ ಪ್ರದರ್ಶನವಷ್ಟೇ! ಎಂದು ಟೀಕಾಪ್ರಹಾರ ಮಾಡಿದರು.
ಅರ್ಧ ಶತಮಾನದಷ್ಟು ಕಾಲ ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇತ್ತು, ಈಗ ರಾಜ್ಯದಲ್ಲೂ ನಿಮ್ಮದೇ ಸರ್ಕಾರ ಇದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕದ ಜನರು ತಮ್ಮ ಮೇಲಿಟ್ಟ ಭರವಸೆಯನ್ನು, ಸ್ವಾರ್ಥ ಅಧಿಕಾರಕ್ಕಾಗಿ ಉಪಯೋಗಿಸಿಕೊಂಡಿದ್ದು ಯಾರೆಂದು ಇದರಿಂದಲೇ ಸಾಬೀತಾಗಿದೆ! ಎಂದು ಅವರು ಆರೋಪಿಸಿದರು.
ಅಧಿಕಾರವಿದ್ದಾಗ ಅಭಿವೃದ್ಧಿ ಮಾಡದೆ, ಈಗ ವೇದಿಕೆ ಮೇಲೆ ದಯನೀಯವಾಗಿ ಬೇಡುವ ನಾಟಕವಾಡಿ ಜನರನ್ನು ಮರುಳು ಮಾಡುವುದು ಸಾಧ್ಯವಿಲ್ಲ!
ಪ್ರಸಿದ್ಧ ಸೋಮನಾಥ ಕ್ಷೇತ್ರದಲ್ಲಿ ದೇವರ ದರ್ಶನ ಪಡೆದ ಪ್ರಧಾನಿಯವರನ್ನು ಟೀಕಿಸುವ ಖರ್ಗೆಯವರೇ, ಇನ್ನು ಎಷ್ಟು ದಿನ ನಿಮ್ಮೊಳಗಿರುವ ನಂಜನ್ನು ಬಯಲು ಮಾಡಿಕೊಳ್ಳುತ್ತೀರಿ? ನಾಡಿನ ಇತಿಹಾಸ ಮತ್ತು ಅಸ್ಮಿತೆಯ ಮೇಲೆ ನಿಮಗೇಕೆ ಇಷ್ಟು ಅಸಹನೆ? ಎಂದು ವಿಜಯೇಂದ್ರ ತೀಕ್ಷ್ಣವಾಗಿ ಖರ್ಗೆ ಅವರನ್ನ ಪ್ರಶ್ನಿಸಿದ್ದಾರೆ.
ಸೋಮನಾಥ ಭಾರತದ ಪುನರುತ್ಥಾನದ ಸಂಕೇತ. ಅದನ್ನು ಚುನಾವಣೆಗೆ ತಳುಕು ಹಾಕುವುದು ನಿಮ್ಮ ವೈಚಾರಿಕ ದಿವಾಳಿತನವನ್ನು ತೋರಿಸುತ್ತದೆ. ನಿಮ್ಮ ಪಕ್ಷದ ನಾಯಕರು ದೇಗುಲದ ಪುನರುತ್ಥಾನಕ್ಕೂ ಅಡ್ಡಿ ಪಡಿಸಿದ್ದ ಮಹಾನುಭಾವರು! ದೇಶದ ಕೋಟ್ಯಂತರ ಹಿಂದೂಗಳ ಧಾರ್ಮಿಕ ಶ್ರದ್ಧೆಗಳ ಬಗ್ಗೆ ಮಾತನಾಡುವ ನೈತಿಕತೆ ನಿಮ್ಮ ಪಕ್ಷ ಎಂದೋ ಕಳೆದುಕೊಂಡಿದೆ ಎಂದು ಅವರು ವಾಗ್ದಾಳಿ ಮಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ರವರು ಇತಿಹಾಸದ ಪುನರುತ್ಥಾನದ ಜೊತೆಗೆ ದೇಶದ ಭವಿಷ್ಯವನ್ನೂ ಕಟ್ಟುತ್ತಿದ್ದಾರೆ. ಮೋದಿ ರವರ ನೇತೃತ್ವದಲ್ಲಿ, ಈ 11 ವರ್ಷಗಳಲ್ಲಿ, 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಲಾಗಿದೆ. ಒಂದು ದಿನವೂ ವಿರಮಿಸದೆ, ದೇಶದ ಅಭಿವೃದ್ಧಿಗಾಗಿ ನಿರಂತರ ಕೆಲಸ ಮಾಡುತ್ತಿರುವ ಹೆಮ್ಮೆಯ ಪ್ರಧಾನಿಗಳ ಬಗ್ಗೆ, ಸತತವಾಗಿ ಅಧಿಕಾರದ ಸ್ಥಾನದಲ್ಲಿದ್ದೂ, ಅಭಿವೃದ್ಧಿ ಕೆಲಸ ಮಾಡದೆ, ನಿಮ್ಮ ಪಕ್ಷದ ವೇದಿಕೆಯಲ್ಲಿ, ನೀವು ಏನೇ ಮಾತನಾಡಿದರೂ, ಜನರು ಖಂಡಿತ ಮರುಳಾಗುವುದಿಲ್ಲ ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

