ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು, ಭ್ರಷ್ಟಾಚಾರ, ಅಭಿವೃದ್ಧಿ ಶೂನ್ಯ ದುರಾಡಳಿತದಿಂದ ಜನಸಾಮಾನ್ಯರು ನಿತ್ಯವೂ ಈ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಿಸಿದ್ದಾರೆ.
ಬಡ ಹಾಗೂ ಗ್ರಾಮೀಣ ಪ್ರೌಢಶಾಲೆಯ ಮಕ್ಕಳಿಗೆ ಆಸರೆಯಾಗಿದ್ದ ಬಿಸಿಯೂಟ ಯೋಜನೆಗೆ ಕಳೆದ 5 ತಿಂಗಳಿಂದ ಅಕ್ಕಿ ಪೂರೈಕೆಯಾಗದೆ ಮಕ್ಕಳ ಅನ್ನಭಾಗ್ಯವನ್ನೇ ಕಿತ್ತುಕೊಂಡ ಶಾಪಕ್ಕೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಗುರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಗೆ ಮೋದಿಜೀ ಅವರ ಸರ್ಕಾರ ನೀಡುತ್ತಿರುವ 5 ಕೆ.ಜಿ ಅಕ್ಕಿಯ ಹೊರತಾಗಿ ತಾವೂ 10 ಕೆ.ಜಿ ಅಕ್ಕಿ ನೀಡುವ ಆಮಿಷವೊಡ್ಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಅಕ್ಕಿಯನ್ನೂ ಕೊಡುತ್ತಿಲ್ಲ , ಹಣವನ್ನು ಹಾಕುತ್ತಿಲ್ಲ.
ಎಲ್ಲದಕ್ಕೂ ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವ ಈ ಸರ್ಕಾರ ಬಡ ಶಾಲಾ ಮಕ್ಕಳ ಬಿಸಿಯೂಟಕ್ಕೆ ಪರಿಕರ ಪೂರೈಸದಿರುವುದು ಸರ್ಕಾರದ ಆರ್ಥಿಕತೆ ದಿವಾಳಿಯಂಚಿಗೆ ತಲುಪಿತೇ ಎಂಬ ಅನುಮಾನ ಹುಟ್ಟುಹಾಕಿದೆ. ಇನ್ನಾದರೂ ಎಚ್ಚೆತ್ತುಕೊಂಡು ಶಾಲಾ ಮಕ್ಕಳ ಬಿಸಿಯೂಟದ ಅಕ್ಕಿ ಹಾಗೂ ಪರಿಕರ ವಿತರಿಸುವಲ್ಲಿ ಆಗಿರುವ ಪ್ರಮಾದವನ್ನು ಸರಿಪಡಿಸಲಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.