ಎಂ.ಎಲ್.ಗಿರಿಧರಷ ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಸಿ.ಎಂ ಬಡಾವಣೆ ಸೇರಿದಂತೆ ಹಿರಿಯೂರು ನಗರದ ಎಲ್ಲೆಡೆ ಹಂದಿಗಳ ಉಪಟಳ ಹೆಚ್ಚಿದ್ದು ಅನೈರ್ಮಲ್ಯ ಹಾಗೂ ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿದೆ.
ಹಂದಿಗಳು ಮನೆಗಳ ಮುಂದೆ ನೆಲ ಕೆದರಿ ಹೊಲಸು ಮಾಡುವುದು, ಚರಂಡಿ ಒಳಗೆ ಹಂದಿಗಳು ಇಳಿದು ನೀರು ಸರಾಗವಾಗಿ ಹರಿಯುತ್ತಿರುವ ಚರಂಡಿ ನೀರಿಗೆ ಅಡ್ಡಲಾಗಿ ಕಸಕಡ್ಡಿ ಹರಡುವುದರಿಂದ ನೈರ್ಮಲ್ಯ ಎನ್ನುವುದು ಮರೀಚಿಕೆ ಆಗುವುದರ ಜೊತೆಯಲ್ಲಿ ಸಿಕ್ಕ ಸಿಕ್ಕ ಜಾಗಗಳಲ್ಲಿ ರಸ್ತೆ ಅಕ್ಕ ಪಕ್ಕ ಹಂದಿಗಳೂ ಗೂರಾಡುವುದರಿಂದ ಅಸ್ತವ್ಯಸ್ತ ಆಗುತ್ತದೆ.
ಹಿರಿಯೂರು ನಗರದ ಬಹುತೇಕ ವಾರ್ಡಗಳೇ ಹಂದಿಗಳ ಸಾಕು ತಾಣಗಳಾಗಿದ್ದು ಸಾರ್ವಜನಿಕರ ಮನೆಗಳ ಪಕ್ಕದಲ್ಲೇ ಹಂದಿಗಳು ಎಗ್ಗಿಲ್ಲದೆ ಸಂತಾನಾಭಿವೃದ್ಧಿ ಮಾಡುತ್ತಿರುವುದರಿಂದ ವಿಪರೀತವಾಗಿ ಹಂದಿಗಳ ಸಂಖ್ಯೆ ಹೆಚ್ಚಳವಾಗಿದೆ.
ಹಿಂಡು ಹಿಂಡಾಗಿ ಹಂದಿಗಳು ರಸ್ತೆ ಮೇಲೆ ಅಡ್ಡಾದಿಡ್ಡಿ ಓಡಾಟ ಮಾಡುವುದರಿಂದ ಜನರು ರಸ್ತೆಯಲ್ಲಿ ಅಡ್ಡಾಡದಂತೆ ಬೆದರಿಸುತ್ತವೆ. ದ್ವಿಚಕ್ರ ವಾಹನಗಳಿಗೆ ಅಡ್ಡ ನುಗ್ಗುವುದರಿಂದ ಸವಾರರು ಕೈ ಕಾಲು ಮುರಿದುಕೊಂಡಿದ್ದಾರೆ. ಈ ಸಂಬಂಧ ಪದೇಪದೇ ನಗರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ನಗರಸಭೆಯ ಅಧಿಕಾರಿಗಳ ಮೇಲೆ ಯಾರು ಒತ್ತಡ ಹೇರುತ್ತಿದ್ದಾರೋ ಗೊತ್ತಿಲ್ಲ ಆದರೆ ಹಂದಿಗಳನ್ನು ನಿಯಂತ್ರಣ ಮಾಡುವಲ್ಲಿ ಮೀನಾಮೇಷ ಏಣಿಸಲಾಗುತ್ತಿದೆ ಎನ್ನುವ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಬೀದಿಗಳಲ್ಲಿ ನುಗ್ಗುವ ಹಂದಿಗಳು ಚಿಕ್ಕ ಮಕ್ಕಳನ್ನು ಕಚ್ಚಿ ಗಾಯಗೊಳಿಸಿರುವ ಉದಾಹರಣೆಗಳು ಇವೆ. ಹಂದಿಗಳ ಹಾವಳಿಯಿಂದಾಗಿ ಬಡ ವರ್ಗದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾ ಬೀರುತ್ತಿದೆ.
ಹಿರಿಯೂರು ನಗರದ ಎಲ್ಲ ವಾರ್ಡಗಳಲ್ಲಿ ಕಂಡು ಬರುವ ಹಂದಿಗಳನ್ನು ನಗರಸಭೆ ಕೂಡಲೇ ನಿಯಂತ್ರಿಸಬೇಕು ಅಥವಾ ಬೇರೆಡೆಗೆ ಸಾಗಿಸಿ ಸ್ಥಳಾಂತರ ಮಾಡಬೇಕು ಎನ್ನುವುದು ಸಾರ್ವಜನಿಕರು ಆಗ್ರಹವಾಗಿದೆ.
ಹಂದಿಗಳ ಮಾಲೀಕರು ಒಂದೊಂದು ವಾರ್ಡ್ ಗೆ ಇಂತಿಷ್ಟು ಹಂದಿಗಳೆಂದು ನಿಗದಿ ಮಾಡಿ ಬಿಡುತ್ತಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದೆ.
ಹಂದಿಗಳಿಂದ ನಿರಂತರ ದಾಳಿಗೆ ತುತ್ತಾಗುತ್ತಿರುವವರ ಪಟ್ಟಿಯಲ್ಲಿ ಮಕ್ಕಳು ಸೇರಿದಂತೆ ದ್ವಿಚಕ್ರ ವಾಹನ ಚಾಲಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ನಗರದ ಹೊರ ವಲಯದಲ್ಲಿ ಹಂದಿಗಳನ್ನು ಸಾಕಾಣೆ ಮಾಡಲಿ ಎನ್ನುವುದು ಸಾರ್ವಜನಿಕರ ವಿನಮ್ರ ಮನವಿಯಾಗಿದೆ.
“ನಗರಸಭೆ ಅಧಿಕಾರಿಗಳಿಂದ ಹಂದಿಗಳನ್ನು ನಗರ ಪ್ರದೇಶದಿಂದ ಮೂರು ಕಿಲೋ ಮೀಟರ್ ದೂರಕ್ಕೆ ಸ್ಥಳಾಂತರಿಸುವ ಭರವಸೆಗೇನೂ ಬರವಿಲ್ಲ. ಮಾನ್ಯ ಜಿಲ್ಲಾಧಿಕಾರಿಗಳು ಕೂಡಲೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಹಂದಿಗಳ ಹಾವಳಿ ತಪ್ಪಿಸಬೇಕು”. ಪ್ರೊ.ಎಂ.ಜಿ. ರಂಗಸ್ವಾಮಿ, ನಗರದ ನಿವಾಸಿ ಮತ್ತು ನಿವೃತ್ತ ಪ್ರಾಂಶುಪಾಲರು, ಸಿಎಂ ಬಡಾವಣೆ, ಹಿರಿಯೂರು.
“ನಾನು ಅಧಿಕಾರ ವಹಿಸಿಕೊಂಡ ಕೂಡಲೇ ಹಂದಿ ಸಾಕಾಣಿಕ ಮಾಡುವ ಮಾಲೀಕರೊಂದಿಗೆ ಸಭೆ ಮಾಡಿದ್ದೇನೆ. ಇದರ ಜೊತೆಯಲ್ಲಿ ಒಂದು ಗ್ರೂಪ್ ರಚನೆ ಮಾಡಿದ್ದು ಸಾರ್ವಜನಿಕರ ದೂರುಗಳು ಬಂದ ಕೂಡಲೇ ಆ ಗ್ರೂಪ್ ಗೆ ಮಾಹಿತಿ ರವಾನೆ ಮಾಡಿ ಬೀದಿಗಳಲ್ಲಿರುವ ಹಂದಿಗಳನ್ನು ಹಿಡಿದು ಬೇರೆಡೆ ಸಾಗುಸುವಂತೆ ಸೂಚನೆ ನೀಡುತ್ತೇನೆ. ಅಲ್ಲದೆ ಹಂದಿಗಳ ಮಾಲೀಕರು ಹಂದಿ ಹಿಡಿದು ಬೇರೆಡೆಗೆ ಸಾಗಿಸುವ ಗೂಗಲ್ ಫೋಟೋವನ್ನು ಕಡ್ಡಾಯವಾಗಿ ನಮಗೆ ನೀಡಬೇಕು. ಇಂತಹ ಹಲವು ಕ್ರಮಗಳನ್ನು ಕೈಗೊಂಡಿದ್ದು ದೂರುಗಳು ಬಂದ ತಕ್ಷಣ ಕ್ರಮ ಜರುಗಿಸಲಾಗುತ್ತದೆ”.
ಎ.ವಾಸೀಂ, ಪೌರಾಯುಕ್ತರು, ನಗರಸಭೆ, ಹಿರಿಯೂರು.