ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರದ ಆಜಾದ್ ಬಡಾವಣೆಯ ನೋಬಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ದಿನದಿಂದ ಅಂಗವಾಗಿ ಶಾಲಾ ಆಡಳಿತ ಮಂಡಳಿ ವತಿಯಿಂದ ಗುರುವಾರ ಪ್ರತಿ ವಿದ್ಯಾರ್ಥಿಯಿಂದ ನೆರಳು ಹಾಗೂ ಫಲ ನೀಡುವ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಕಾರ್ಯಕ್ರಮವನ್ನು ಶಾಲೆಯ ಆವರಣದಲ್ಲಿ ಆಯೋಜಿಸಲಾಗಿತ್ತು.
ಪ್ರಾಥಮಿಕ ಶಾಲಾ ಆವರಣದಲ್ಲಿ ನಾನಾ ರೀತಿಯ ಅಲಂಕಾರಿಕ ಗಿಡಗಳು, ಹೂವಿನ ಗಿಡಗಳು ಹಾಗೂ ಇತರೆ ಗಿಡಗಳನ್ನು ಬೆಳೆಸಿ ಶಾಲೆಯ ಸೊಬಗನ್ನು ಹೆಚ್ಚಿಸುವುದರ ಜತೆಗೆ ಪರಿಸರ ಸಂರಕ್ಷಣೆ ಮಾಡುವ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಲಾಯಿತು.
ಹಿರಿಯೂರು ಗ್ರಾಮಾಂತರ ಪಿಎಸ್ಐ ಆನಂದ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಶಾಲಾ ಪರಿಸರವನ್ನು ಹಸಿರೀಕರಣವಿರುವಂತೆ ನೋಡಿಕೊಳ್ಳಲು ಶಾಲಾ ಮಕ್ಕಳಿಗೆ ಸೂಚಿಸಿದರು.
ಪರಿಸರ ಉಳುವಿಗಾಗಿ ಪ್ರತಿಯೊಂದು ಮಗು ಒಂದು ಗಿಡ ನೆಟ್ಟು ಪೋಷಣೆ ಮಾಡುವ ಹೊಣೆಗಾರಿಕೆ ತೆಗೆದುಕೊಳ್ಳಬೇಕು. ತಮ್ಮ ತಂದೆ, ತಾಯಿ, ಅಜ್ಜಿ ತಾತ ಇವರುಗಳ ಹೆಸರಿನಲ್ಲಿ ಗಿಡ ನೆಟ್ಟು ಪೋಷಣೆ ಮಾಡಬೇಕು ಎಂದರು.
ಶಾಲಾ ಹಂತದಲ್ಲಿ ಶಾಲಾ ಮುಖ್ಯಸ್ಥರು ಶಾಲಾ ಪರಿಸರವು ಶಿಕ್ಷಣದ ಅವಿಭಾಜ್ಯ ಅಂಗವೆಂದು ಭಾವಿಸಿ ವಿಶೇಷ ಗಮನಹರಿಸಬೇಕು. ನೆಟ್ಟ ಗಿಡಗಳ ಮೇಲ್ವಿಚಾರಣೆ ನಡೆಸಬೇಕು ಎಂದು ಅವರು ಮಕ್ಕಳಿಗೆ ನಿರ್ದೇಶನ ಮಾಡಿದರು.
ಸಂಸ್ಥೆಯ ಅಧ್ಯಕ್ಷ ಬಾಬು, ಉದ್ಯಮಿ ನವಾಬ್ ಸಾಬ್, ಮುಖ್ಯಶಿಕ್ಷಕಿ ಬಿ.ಶಾಹೀನಾ ಸೇರಿದಂತೆ ಸಹ ಶಿಕ್ಷಕರು, ಸಿಬ್ಬಂದಿಗಳು ಹಾಜರಿದ್ದರು.