ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪ್ಲಾಸ್ಟಿಕ್, ಮಾನವಕುಲ ಹಾಗೂ ಜೀವಸಂಕುಲವನ್ನು ಸರ್ವ ನಾಶ ಮಾಡುವ ಮುನ್ನ ಮಾನವ ಪ್ರಜ್ಞೆ ಬಳಸಿ ಪ್ಲಾಸ್ಟಿಕ್ ಆಕ್ರಮಣ ಮೆಟ್ಟಿ ನಿಂತು, ಭೂಮಿಯಿಂದಲೇ ತೊಲಗಿಸಬೇಕಾದ ತುರ್ತು ಅಗತ್ಯವಿದೆ ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ. ಆರ್. ದಾಸೇಗೌಡ ಅವರು ಕರೆಕೊಟ್ಟರು. ಅವರು ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಚಿತ್ರದುರ್ಗ ವಿಜ್ಞಾನ ಕೇಂದ್ರ, ಸ್ವಾಸ್ತ್ಯ ಸರ್ಕಲ್ ಫೌಂಡೇಷನ್ ಮತ್ತು ಕರ್ನಾಟಕ ವಿದ್ಯಾ ಸಂಸ್ಥೆ ಚಿತ್ರದುರ್ಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ “ಪ್ಲಾಸ್ಟಿಕ್ ಮಾಲಿನ್ಯ ತೊಲಗಿಸಿ” ಎಂಬ ವಿಷಯದಡಿ ಚಿನ್ಮೂಲಾದ್ರಿ ಶಾಲೆಯ ಮಕ್ಕಳನ್ನು ಕುರಿತು ಮಾತನಾಡಿದರು.
ಅವರು ಮುಂದುವರೆದು ಮಾತನಾಡುತ್ತಾ, ಪ್ಲಾಸ್ಟಿಕ್ ಇಂದು ತನ್ನ ವಿವಿಧ ವಿಷ ರಸಾಯನಿಕಗಳಾದ ಡಯಾಕ್ಸಿನ್, ಥೈಲಾಟ್ ಗಳ ಮೂಲಕ ಭೂಮಿಯ ಮೂಲೆ ಮೂಲೆಯನ್ನು ಆಕ್ರಮಿಸಿದೆ. ವಾಯು,ಜಲ, ಮಣ್ಣು ಆಹಾರ ಗಳ ಮೂಲಕ ಜೀವಿ ಸಾಮ್ರಾಜ್ಯದ ಮೇಲೆ ಹಿಡಿತ ಸಾಧಿಸುತ್ತಿದೆ.ಮಾನವನ ಮಿದುಳಿನಿಂದ ಹಿಡಿದು ಕಂದಮ್ಮಗಳಿಗೆ ಕುಡಿಸುವ ತಾಯಿಯ ಎದೆ ಹಾಲಿಗೂ ಸೇರಿ ವೈವಿಧ್ಯಮಯ ರೋಗಗಳ ಮೂಲಕ ಅಣು ಅಣುವಾಗಿ ಸದ್ದಿಲ್ಲದೇ ಕೊಲ್ಲುತ್ತಿದೆ.
ನಮ್ಮ ವಸುಂಧರೆಯ ಉನ್ನತ ಶಿಖರ ಎವೆರೆಷ್ಟ್ ತುದಿಯಿಂದ ಸಾಗರದ ತಳದವರೆಗೂ ಅಕ್ರಮಿಸಿದೆ ಆದರೂ ಬುದ್ಧಿ ಜೀವಿಗಳಾದ ನಾವು ಪ್ಲಾಸ್ಟಿಕ್ ನ ದುಷ್ಪರಿಣಾಮದ ಅರಿವೇ ಇಲ್ಲದೆ ಸಂವೇದನಾ ಶೂನ್ಯರಾಗಿದ್ದೇವೆ. ಪ್ಲಾಸ್ಟಿಕ್ ಥೈರಾಯಿಡ್, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು, ಕೂದಲು ಚರ್ಮದ ಸಮಸ್ಯೆಗಳು, ಸಂತಾನೋತ್ಪತ್ತಿ ಸಮಸ್ಯೆಗಳು, ವಿವಿಧ ಕ್ಯಾನ್ಸರಗಳು, ವೀರ್ಯಾಣು ಉತ್ಪತ್ತಿ ಸಮಸ್ಯೆಗಳು, ನರ ಸಂಬಂಧಿ ಕಾಯಿಲೆಗಳನ್ನು ಉಂಟು ಮಾಡುತ್ತದೆ.ಈ ಕೆಲಸವನ್ನು ಈ ಹಾಳು ಪ್ಲಾಸ್ಟಿಕ್, ನಮ್ಮ ಮಿದಿಳನ್ನು ಸೇರಿ ನಾಗರಿಕ ಪ್ರಜ್ಞೆಗೆ ಲಕ್ವ ಹೊಡೆಯುವಂತೆ ಮಾಡಿರಬೇಕೇನೋ ಎಂಬ ಆತಂಕ ಉಂಟಾಗುತ್ತಿದೆ. 2040 ರ ಹೊತ್ತಿಗೆ ಶೇಕಡ 50 ರಷ್ಟು ಭೂ ಮಂಡಲವನ್ನು ಆಕ್ರಮಣ ಮಾಡುತ್ತದೆ ಎಂದು ಅಂದಾಜಿಸಲಾಗಿದೆ.
ಪ್ಲಾಸ್ಟಿಕ್ ನಮಗೆ ಶತ್ರುವೂ ಹೌದು, ಮಿತ್ರವೂ ಹೌದು. ಶತ್ರುವಿನ ರೂಪದಲ್ಲಿ ಕಾಡುತ್ತಿರುವ ಏಕ ಬಳಕೆ ಪ್ಲಾಸ್ಟಿಕ್ ನ ವಿರುದ್ಧ ರಕ್ಷಣಾತ್ಮಕ ಹೋರಾಟವನ್ನು ನಮ್ಮ ನಮ್ಮ ಮನೆಗಳಿಂದಲೇ, ತುರ್ತಾಗಿ ಕೈ ಗೊಳ್ಳಬೇಕಾಗಿದೆ.ಬೆಂಕಿಯಲ್ಲಿ ಸುಡುವಂತಿಲ್ಲ, ತಂಪಿನಲ್ಲಿ ಇಡುವಂತಿಲ್ಲ. ಎರಡರಿಂದಲೂ ವಿಷಕಾರಿ ವಸ್ತುಗಳು ಬಿಡುಗಡೆಯಾಗುತ್ತವೆ. ಸುಟ್ಟರಂತೂ ಬಂಧನದಲ್ಲಿರುವ ರೋಗಕಾರಕನನ್ನು ಬಯಲಿಗೆ ಬಿಟ್ಟಂತಾಗುತ್ತದೆ. ಈಗ ನಾವು ಅನುಸರಿಸುತ್ತಿರುವ ಕ್ರಮಗಳು ಸರಿಯಿಲ್ಲದ ಕಾರಣ ಪ್ಲಾಸ್ಟಿಕ್ ಮಾಲಿನ್ಯ ಹೆಚ್ಚಾಗುತ್ತಿದೆ ಆದ್ದರಿಂದ ಹೊಸದಾಗಿ ಆಲೋಚನೆ ಮಾಡಬೇಕಿದೆ.
ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ದಿವ್ಯ ನಿರ್ಲಕ್ಷ ತೋರುತ್ತಿರುವ ನಮ್ಮ ಸರ್ಕಾರಗಳನ್ನು ನಂಬಿ ಕೂರುವಂತಿಲ್ಲ. ಯಾವ ಪಕ್ಷಗಳೂ ಸಹ ಚುನಾವಣೆ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಗಳಲ್ಲಿ ಪರಿಸರ ಮಾಲಿನ್ಯದ ಬಗ್ಗೆ, ಕಾಡು ಬೆಳೆಸುವುದರ ಬಗ್ಗೆ, ಪ್ಲಾಸ್ಟಿಕ್ ಮಾಲಿನ್ಯದ ನಿರ್ಮೂಲನೆ ಬಗ್ಗೆ ಹೇಳಿದ್ದಿಲ್ಲ.ಆದ್ದರಿಂದ ನಾಗರಿಕರಾದ ನಾವು ಎಚ್ಚೆತ್ತು ಕೊಂಡು, ಸರ್ಕಾರ ಕಠಿಣ ನೀತಿ ರೂಪಿಸಿ, ಜಾರಿಗೆ ತರಬೇಕೆಂದು ಒತ್ತಾಯಿಸಬೇಕಾಗಿದೆ ಅದಕ್ಕಾಗಿ ಜನಾಂದೋಲನ ರೂಪಿಸಬೇಕಾಗಿದೆ ಮತ್ತು ಪ್ಲಾಸ್ಟಿಕ್ ನ ಹಿಡಿತದಿಂದ ಭೂಮಿಯನ್ನು ಬಿಡುಗಡೆಗೊಳಿಸಬೇಕಿದೆ ಎಂದರು.
ಸ್ವಾಸ್ತ್ಯ ಸರ್ಕಲ್ ಫೌಂಡೇಷನ್ ನ ಡಾ. ತೊಯಜಾಕ್ಷಿಭಾಯಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಲಿನ್ಯಕ್ಕೆ ನೇರ ಸಂಪರ್ಕ ಪಡೆಯುವ ನಮ್ಮ ದೇಹದ ಮೂರು ಅಂಗಗಳೆಂದರೆ ಚರ್ಮ, ಶ್ವಾಸಕೋಶ, ಮತ್ತು ಪಚನಾಂಗವ್ಯೂಹಗಳು. ಗಾಳಿಗೆ ಸೇರುವ ಮೈಕ್ರೋ ಪ್ಲಾಸ್ಟಿಕ್ ಕಣಗಳು, ಪಾಲಿಥಿನ್ ಬಟ್ಟೆಗಳಿಂದ ಚರ್ಮ ಹಾಗೂ ಶ್ವಾಸಕೋಶಗಳು ಪೀಡಿತವಾದರೆ,ಬಾಟಲಿ ನೀರು, ಪ್ಲಾಸ್ಟಿಕ್ ಪೊಟ್ಟಣಗಳಲ್ಲಿನ ಆಹಾರ ಸೇವನೆಯಿಂದ ಪಚನಾಂಗ ವ್ಯೂಹವು ರೋಗಪೀಡಿತವಾಗುತ್ತಿದೆ. ಮಾನವನ ರಕ್ತದಲ್ಲಿ ಪ್ಲಾಸ್ಟಿಕ್ ಕಣಗಳು ಕಂಡು ಬಂದಿವೆ, ಕೊಳ್ಳುಬಾಕತನದಿಂದ ಪರಿಸರಕ್ಕೆ ಎಸೆಯುವ ವಸ್ತುಗಳು ಹೆಚ್ಚಾಗಿ ಸರಳ ಜೀವನವನ್ನು ಸಂಕೀರ್ಣ ಮಾಡಿಕೊಂಡಿದ್ದೇವೆ. ಆದ್ದರಿಂದ ಪ್ಲಾಸ್ಟಿಕ್ ಮುಕ್ತ ಜೀವನ ನಡೆಸಿ ಎಂದು ಕರೆ ಕೊಟ್ಟರು.
ಚಿತ್ರದುರ್ಗ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಅವರು, ಮಕ್ಕಳಿಗೆ ಹಂಚಲು ತಂದಿದ್ದ ಬಿಸ್ಕೆಟ್ ಪಾಕೆಟ್ ಗಳ ಪ್ಲಾಸ್ಟಿಕ್ ಕವರ್ ಗಳನ್ನು ಕಂಪನಿಯವರಿಗೆ ಕೊರಿಯರ್ ಮೂಲಕ ಹಿಂತಿರುಗಿಸುವ ಪೊಟ್ಟಣವನ್ನು ಪ್ರದರ್ಶಿಸಿ, ಮಾತನಾಡುತ್ತಾ,ಆಹಾರದ ವ್ಯಾಪಾರಿಗಳು ತಮ್ಮ ಲಾಭಕ್ಕಾಗಿ, ಹೆಚ್ಚು ದಿನ ಆಹಾರ ಕೆಡದಂತೆ ಇಡಲು ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಅವರ ಲಾಭಕ್ಕೆ ನಮ್ಮ ಪರಿಸರ ಮತ್ತು ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದೇವೆ. ಆದ್ದರಿಂದ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಸಾಂಕೇತಿಕವಾಗಿ ಆ ಕಂಪನಿಯ ಮಾಲೀಕರಿಗೆ ಹಿಂತಿರುಗಿಸುತ್ತಿದ್ದೇವೆ. ಇತ್ತೀಚಿಗೆ ಎಲ್ಲಾ ಆಹಾರ ಪೊಟ್ಟಣಗಳಲ್ಲಿ ಬರುತ್ತಿದೆ ಬಟ್ಟೆ ಚೀಲಗಳನ್ನು ಬಳಸದಂತೆ ಆಹಾರ ವ್ಯಾಪಾರಿಗಳು ಮಾಡಿದ್ದಾರೆ. ಇದು ತಪ್ಪು ನಾವು ಬಟ್ಟೆಚೀಲಗಳನ್ನೇ ಬಳಸೋಣ ಎಂದರು.
ಕರ್ನಾಟಕ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ. ಆರ್. ನಾರಾಯಣಪ್ಪ ಅವರು ಪ್ಲಾಸ್ಟಿಕ್ ನಿಂದ ಬಂಧಿತವಾಗಿದ್ದ ಭೂಮಿ ಮಾದರಿಯನ್ನು ಪ್ಲಾಸ್ಟಿಕ್ ಚೀಲದಿಂದ ಹೊರ ತೆಗೆದು ಬಿಡುಗಡೆಗೊಳಿಸಿ, ಈ ಭೂಮಿ ಪ್ಲಾಸ್ಟಿಕ್ ಮುಕ್ತವಾಗಬೇಕೆಂಬ ಸಂದೇಶವನ್ನು ಸಾರಿದರು.
ಕರ್ನಾಟಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ವಿ. ಆರ್. ಮಂಜುನಾಥ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಪ್ರಕೃತಿ ನಮಗೆ ಬಲು ಸುಂದರವಾದ ಕಾಡು, ಬೆಟ್ಟ ಗುಡ್ಡ ಸಾಗರ ಸಮುದ್ರಗಳ ಕೊಡುಗೆ ನೀಡಿದೆ. ನಮ್ಮ ಸ್ವಾರ್ಥದಿಂದ ಎಲ್ಲವನ್ನು ಹಾಳು ಮಾಡಿ, ಮಾಲಿನ್ಯ, ಹವಾಮಾನ ಬದಲಾವಣೆಯಂತಹ ದೊಡ್ಡ ಸವಾಲುಗಳನ್ನು ಎದುರು ಹಾಕಿಕೊಂಡಿದ್ದೇವೆ, ಪ್ಲಾಸ್ಟಿಕ್ ಬಳಕೆಗೆ ಬದಲಾಗಿ ಪರ್ಯಾಯ ವಸ್ತುಗಳನ್ನು ಬಳಸಬೇಕು,ಕಸ ವಿಂಗಡಣೆಯನ್ನು ವೈಜ್ಞಾನಿಕವಾಗಿ ಎಲ್ಲರೂ ಮನೆಯಲ್ಲೇ ಮಾಡಬೇಕು ಎಂದು ಕರೆಕೊಟ್ಟರು.
ಸ್ವಾಸ್ತ್ಯ ಸರ್ಕಲ್ ಫೌಂಡೇಷನ್ ಸಂಚಾಲಕ ಎಂ. ಟಿ. ಮೂರ್ತಪ್ಪ, ಚಿತ್ರ ರಚನಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಮತ್ತು ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ, ನಮ್ಮ ಸಂಸ್ಥೆ ಡಾ. ತೊಯಜಾಕ್ಷಿಭಾಯಿ ಅವರ ಮಾರ್ಗ ದರ್ಶನದಲ್ಲಿ ಅರೋಗ್ಯ ರಕ್ಷಣೆ ಮತ್ತು ಪರಿಸರ ರಕ್ಷಣೆ ಯ ಬಗ್ಗೆ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಸಮರ್ಥ್ ಪ್ಲಾಸ್ಟಿಕಾಸುರನ ಛದ್ಮವೇಶ ಧರಿಸಿದ್ದರು. ಪ್ಲಾಸ್ಟಿಕ್ ಮಾಲಿನ್ಯದ ಬಗೆಗೆ ಅರಿವು ಮೂಡಿಸುವ ಗೀತೆಯನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ಹಾಡಿದರು.
ಸ್ವಾಗತ ಗೀತೆಯನ್ನು ಹತ್ತನೇ ತರಗತಿ ವಿದ್ಯಾರ್ಥಿ ಪ್ರೇಮ್ ಚಂದ್, ಸ್ವಾಗತವನ್ನು ಶಿಕ್ಷಕ ಗುರುಪ್ರಸಾದ್, ಪ್ರಾಸ್ತಾವಿಕ ನುಡಿಯನ್ನು ಶಿಕ್ಷಕ ಜಿ. ಮಹೇಶ್ವರಪ್ಪ,ವಂದನಾರ್ಪಣೆಯನ್ನು ಶಿಕ್ಷಕಿ ರಜನಿ ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಕನ್ನಡ ಶಿಕ್ಷಕ ಎಚ್. ಮುರಳಿ ಅವರು ನಿರ್ವಹಿಸಿದರು. ವೇದಿಕೆಯಲ್ಲಿ ಮುಖ್ಯ ಶಿಕ್ಷಕ ಪಿ. ಕೃಷ್ಣಪ್ಪ, ಯುವರಾಜ್, ಇದ್ದರು. ಖಜಾಂಚಿ ಕೆ. ರಾಮಪ್ಪ, ಸದಸ್ಯ ಜಯದೇವಮೂರ್ತಿ, ಶಾಲಾ ಸಿಬ್ಬಂದಿ ವರ್ಗ ಮತ್ತು ಮಕ್ಕಳು ಹಾಜರಿದ್ದರು.