ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದಿವಾಳಿ ಸರ್ಕಾರ ವಿರುದ್ಧ ಸಾರಿಗೆ ನೌಕರರ ಮುಷ್ಕರ, ರಾಜ್ಯಾದ್ಯಂತ ಸ್ತಬ್ಧವಾದ ಬಸ್ ಸಂಚಾರ! ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ. ಬಸ್ಸಿಲ್ಲ.. ಬಸ್ಸಿಲ್ಲ.. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಬಸ್ಸಿಲ್ಲ, ನೌಕರರು, ಉದ್ಯೋಗಿಗಳು ಕೆಲಸಕ್ಕೆ ಹೋಗಲು ಬಸ್ಸಿಲ್ಲ,
ನೆಂಟರಿಷ್ಟರ ಮನೆಗಳಿಗೆ, ಶುಭ ಸಮಾರಂಭಗಳಿಗೆ, ಸಾವು-ನೋವಿಗೆ ಹೋಗಲು ಬಸ್ಸಿಲ್ಲ ಇದು ಬಹುಪಾಲು ಕನ್ನಡಿಗರ ಇವತ್ತಿನ ಬವಣೆ!! ರಾಜ್ಯದ ಖಜಾನೆ ಖಾಲಿ ಮಾಡಿ ಪಾಪರ್ ಆಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಚೆಲ್ಲಾಟ, ಜನಸಾಮಾನ್ಯರಿಗೆ ಪರದಾಟ, ಗೋಳಾಟ, ತೊಳಲಾಟ! ಎಂದು ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ನಿಮ್ಮ ಘನಂದಾರಿ ಆಡಳಿತದಿಂದ ಸಾರಿಗೆ ನಿಗಮಗಳನ್ನು ಸರ್ವನಾಶ ಮಾಡಿಬಿಟ್ಟರಲ್ಲ ಸ್ವಾಮಿ. ಸಾರಿಗೆ ನೌಕರರ ಹಿಂಬಾಕಿ ಕೊಡಲು ದುಡ್ಡಿಲ್ಲ, ನೌಕರರ ವೇತನ ಹೆಚ್ಚಳ ಮಾಡಲು ದುಡ್ಡಿಲ್ಲ, ಹೊಸ ಬಸ್ ಖರೀದಿಗೆ ದುಡ್ಡಿಲ್ಲ, ಹಳೆ ಬಸ್ಸುಗಳ ರಿಪೇರಿಗೆ ದುಡ್ಡಿಲ್ಲ ಎಂದು ಅಶೋಕ್ ಟೀಕಿಸಿದ್ದಾರೆ.
ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು. ನಿಮ್ಮ ಅಧಿಕಾರದ ಲಾಲಸೆಗೆ, ದುರಾಡಳಿತಕ್ಕೆ ಜನಸಾಮಾನ್ಯರು ಇನ್ಯಾವ್ಯಾವ ರೀತಿ ಪರದಾಡಬೇಕು, ಇನ್ನೆಷ್ಟು ಕಷ್ಟ ಅನುಭವಿಸಬೇಕು. ಸಿದ್ಧರಾಮಯ್ಯನವರೇ, ದಯವಿಟ್ಟು ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ. ಕನ್ನಡಿಗರಿಗೆ ನೆಮ್ಮದಿಯ ಜೀವನ ಮಾಡಲು ಬಿಡಿ ಎಂದು ಅಶೋಕ್ ತಾಕೀತು ಮಾಡಿದ್ದಾರೆ.

