ಗಮಕ :ಡಾ. ಎಚ್ಎಸ್ ವಿ ಅವರಿಗೆ ಕಾವ್ಯ ನಮನ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘದ
40ನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ ನಡೆಸುತ್ತಿರುವ ಮಾಸಿಕ ಗಮಕ ಕಾರ್ಯಕ್ರಮವು ಜೂ, 29ರ ಭಾನುವಾರ ಸಂಜೆ  ಜೆ ಸಿ ಆರ್ ಬಡಾವಣೆಯ ಗಣಪತಿ ದೇವಾಲಯದಲ್ಲಿ ನಡೆಯಿತು.

- Advertisement - 

ಗಮಕ ಕಲೆಯನ್ನು ಆಧರಿಸಿದ ವಿವಿಧ ರಾಗಗಳಲ್ಲಿ ಭಕ್ತಿ ಸಂಗೀತದ ಕಾರ್ಯಕ್ರಮವನ್ನು ನಗರದ ಹೆಸರಾಂತ ಸಂಗೀತ ಸಂಸ್ಥೆಗಳಾದ ಸ್ವರಾತ್ಮಿಕಾ ಸಂಗೀತ ಶಾಲೆ ಮತ್ತು ಶಾರದಾ ಸಂಗೀತ ಕಲಾಕೇಂದ್ರ ಇವುಗಳ  ಪ್ರಾಚಾರ್ಯರು  ಹಾಗೂ ವಿದ್ಯಾರ್ಥಿಗಳು ನಡೆಸಿಕೊಟ್ಟರು.

- Advertisement - 

ಇದೇ ಸಂದರ್ಭದಲ್ಲಿ ನಾಡಿನ ಪ್ರಸಿದ್ಧ ಸಾಹಿತಿ, ಸಮನ್ವಯದ ಕವಿ ಚಿತ್ರದುರ್ಗ ಸೀಮೆಯಲ್ಲಿ ತಮ್ಮ ಬದುಕಿನ ಪ್ರಮುಖ ಭಾಗವನ್ನು ಕಳೆದವರು ನಾಡಿನ ಗಮಕಲೆಯ ವ್ಯಾಖ್ಯಾನದ ಪರಿಣತರಲ್ಲಿ ಒಬ್ಬರು ಆಗಿದ್ದ ಡಾ. ಎಚ್.ಎಸ್. ವೆಂಕಟೇಶ್ ಮೂರ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಟ್ಟಳೆಯು ನಡೆಯಿತು. ಈ ಸಭೆಯಲ್ಲಿ ಎಲ್ಲರೂ ಎದ್ದು ನಿಂತು ಅಗಲಿದ ಕವಿ ಅವರಿಗೆ ಭಾವಪೂರ್ಣ ಮೌನ ಶ್ರದ್ಧಾಂಜಲಿಯನ್ನು ಆರ್ಪಿಸಿದರು. 

ಶಾರದೆಯ ಸ್ತುತಿ ವಾಚನದೊಂದಿಗೆ ಆರಂಭವಾದ ಸಭೆಯಲ್ಲಿ ವಿದುಷಿ ಮೀನಾಕ್ಷಿಭಟ್ ಸ್ವಾಗತಿಸಿದರು.ಶಾರದಾ ಸಂಗೀತ ಶಾಲೆಯ ವಿದ್ಯಾರ್ಥಿಗಳು ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ, ಎಂಬ ಗೀತೆಯನ್ನು ಹಾಗೆಯೇ  ಮೀನಾಕ್ಷಿ ಭಟ್ ಅವರು ಇರುವಂತೆ ಇರಬೇಕು ಎಂಬ ಗೀತೆಗಳನ್ನು ಹಾಡಿ  ಕವಿ ಸ್ಮರಣೆ ಮಾಡಿದರು. ಸ್ವರಾತ್ಮಿಕಾ ಸಂಗೀತ ಶಾಲೆಯ ಪ್ರಾಚಾರ್ಯರಾದ ಚಂಪಕಾಶ್ರೀಧರ್ ಮತ್ತು ಸಂಗಡಿಗರು ವಿದ್ಯಾರ್ಥಿಗಳೊಡಗೂಡಿ ನಂಬ ಬಹುದೇ ಗೆಳತಿ ಎಂಬ ಗೀತೆಯನ್ನು ಭಾವಪೂರ್ಣವಾಗಿ ಹಾಡುವುದರ ಮುಖಾಂತರ ದಿವಂಗತರಿಗೆ ಗೌರವ ನಮನ ಸಲ್ಲಿಸಿದರು.

- Advertisement - 

ಜೆ ಸಿ ಆರ್ ಗಣಪತಿ ದೇವಾಲಯದ ಮಾರುತಿ ಭಜನಾ ಮಂಡಳಿಯ ಸದಸ್ಯರು ಡಾ. ಎಚ್ಎಸ್ ವಿ ಅವರ ದಿನಗಳು ನೂರಾರು ಎಂಬ ರಾಷ್ಟ್ರೀಯ ಭಾವೈಕ್ಯ ಗೀತೆಯನ್ನು ಹಾಡಿ ಎಚ್ಚೆಸ್ವಿ ಅವರ ದೇಶಭಕ್ತಿಯನ್ನು ಸ್ಮರಿಸಿದರು.

ಕಾರ್ಯಕ್ರಮದ ಕೊನೆ ಭಾಗದಲ್ಲಿ  ಸ್ವರಾತ್ಮಿಕಾ ಸಂಗೀತ ಶಾಲೆಯ ವಿದ್ಯಾರ್ಥಿಗಳಾದ ಗಾನವಿ, ಸಯೂರಿ, ನಚಿಕೇತ ಮತ್ತು ಅನಿಕಾ ಅವರುಗಳು ವಿವಿಧ ಭಕ್ತಿ ಗೀತೆಗಳನ್ನು ಹಾಡಿ ಡಾ. ಎಚ್ಎಸ್ ವಿ ಅವರಿಗೆ ಸದ್ಗತಿಯನ್ನು ಕೋರಲಿ ಎಂದು  ಪ್ರಾರ್ಥಿಸಿದರು.

ಮುಖ್ಯ ಅತಿಥಿಗಳಾಗಿದ್ದ ಕವಯತ್ರಿ ನಿರ್ಮಲಾ ಮರಡಿಹಳ್ಳಿ ಅವರು ಮಾತನಾಡುತ್ತ ಗಮಕವು ಶ್ರೇಷ್ಠ ಕಲೆಗಳಲ್ಲಿ ಒಂದೆಂದು ಅಬಾಲವೃದ್ಧರಾದಿಯಾಗಿ ಎಲ್ಲರೂ ಈ ಕಲೆಯನ್ನು ಕಲಿಯುವ ಅಥವಾ ಆಸ್ವಾದಿಸುವ ಮೂಲಕ ಆ ಕಲೆಗೆ ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿದರು.

ಈ ಸಭೆಯಲ್ಲಿ ಹಿರಿಯ ಸಾಹಿತ್ಯ ಪರಿಚಾರಕ ಎಚ್ಎಸ್ ವಿ ಅವರ ಆಪ್ತ ಕೆ. ವೆಂಕಣ್ಣಚಾರ್ ದಿವಂಗತ ಕವಿಗೆ ತಮ್ಮ  ಒಡನಾಟದ ಅನೇಕ ಸಂದರ್ಭಗಳನ್ನು ನುಡಿ ನಮನದ ಮೂಲಕ ಸ್ಮರಿಸುತ್ತ, ಶ್ರದ್ಧಾಂಜಲಿ ಸಲ್ಲಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಗಮಕಲಾಭಿಮಾನಿಗಳ ಸಂಘದ ಅಧ್ಯಕ್ಷೆ  ಕೆ.ಆರ್. ರಮದೇವಿ ವೆಂಕಣ್ಣಾಚಾರ್ ಅವರು ವಂದಿಸಿದರು. ಬಿ .ಎಲ್. ಉಮಾ ಕಾರ್ಯಕ್ರಮವನ್ನು ನಿರ್ವಹಿಸಿದರು.

ಮುಂದಿನ 24ನೇ ಮಾಸಿಕ ಗಮಕ ಕಾರ್ಯಕ್ರಮವು ದಿನಾಂಕ 27-7- 2025 ನೇ ಭಾನುವಾರ ಸಂಜೆ ನಗರದ ಜೆಸಿಆರ್ ಗಣಪತಿ ದೇವಾಲಯದಲ್ಲಿ ನಡೆಯಲಿದ್ದು. ವೈದ್ಯಕೀಯ ವಿದ್ಯಾರ್ಥಿನಿ ತನ್ಮಯಿ ಹಾಗೂ ಎಮ್ ಸಿಎ ವಿದ್ಯಾರ್ಥಿನಿ ಭಾರ್ಗವಿಯವರು ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯದ ಭಾಗವನ್ನು ವಾಚನ ಮಾಡುವರು. ಇದಕ್ಕೆ ಡಾ. ಯಶೋಧಾ ರಾಜಶೇಖರಪ್ಪ ಅವರು ವ್ಯಾಖ್ಯಾನ ಮಾಡುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.

 

 

Share This Article
error: Content is protected !!
";