ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಲ್ಯಾಣ ಮಂಟಪ, ಕನ್ವೆನ್ಷನ್ ಹಾಲ್ ಗಳಲ್ಲಿ ಮದುವೆಗಳ ಸಂದರ್ಭದಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಮಾಗಡಿ ರೋಡ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಪರಮೇಶ್ ಬಂಧಿತ ಆರೋಪಿ. ಆತನಿಂದ 400 ಗ್ರಾಂ ಚಿನ್ನಾಭರಣ, 91 ಸಾವಿರ ನಗದು ಸಹಿತ ಒಟ್ಟು 36.91 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಳ್ಳನ ಕೈಚಳಕ:
ಮದುವೆ ಸಮಾರಂಭಗಳಿಗೆ ಅತಿಥಿಯ ಸೋಗಿನಲ್ಲಿ ತೆರಳುತ್ತಿದ್ದ ಆರೋಪಿ ಮಾಂಗಲ್ಯಧಾರಣೆ ಸಂದರ್ಭದಲ್ಲಿ ವಧು, ವರನ ಕಡೆಯವರ ರೂಮ್‌ಗೆ ಹೋಗಿ ಚಿನ್ನಾಭರಣ, ನಗದು ದೋಚಿಕೊಂಡು ಪರಾರಿಯಾಗುತ್ತಿದ್ದ. ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ ಮೋಜು ಮಸ್ತಿಯಲ್ಲಿ ತೊಡಗುತ್ತಿದ್ದ. ಇದೇ ರೀತಿ ಮಾಗಡಿ ರೋಡ್, ಬಸವನಗುಡಿ, ಕಾಮಾಕ್ಷಿಪಾಳ್ಯ, ಕೆಂಗೇರಿ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ಎಸಗಿದ್ದನು.
ಇದಲ್ಲದೆ ಕಳೆದ ಮೇ ತಿಂಗಳಿನಲ್ಲಿ ಇದೇ ರೀತಿ ಮಾಗಡಿ ರಸ್ತೆಯ ಇಂಡಸ್ಟ್ರಿಯಲ್ ಟೌನ್‌ನಲ್ಲಿರುವ ಕಮ್ಯುನಿಟಿ ಸೆಂಟರ್‌ನ ರೂಮ್‌ಗೆ ನುಗ್ಗಿದ್ದ ಆರೋಪಿ, 31 ಸಾವಿರ ರೂಪಾಯಿ ನಗದನ್ನು ಕದ್ದು ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ಮಾಗಡಿ ರೋಡ್ ಠಾಣೆಯ ಇನ್ಸ್‌ಪೆಕ್ಟರ್ ರಾಜು ಜಿ.ಪಿ ಅವರ ನೇತೃತ್ವದ ತಂಡ ಪ್ರಕರಣದ ತನಿಖೆ ಕೈಗೊಂಡು ಗುಬ್ಬಿ ರೈಲ್ವೆ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿದ್ದಾರೆ. 8 ಪ್ರಕರಣಗಳಲ್ಲಿ ಆರೋಪಿ ಭಾಗಿಯಾಗಿರುವುದು ಬೆಳಕಿಗೆ ಬಂದಿವೆ. ಸದ್ಯ ಆರೋಪಿ ಕಳ್ಳ ಪರಮೇಶ್ ನಿಂದ 36.91 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

