ಚಂದ್ರವಳ್ಳಿ ನ್ಯೂಸ್, ತುಮಕೂರು:
ರಾಜ್ಯೋತ್ಸವ ಪ್ರಶಸ್ತಿಯ 20 ಗ್ರಾಂ ಚಿನ್ನ ಸೇರಿದಂತೆ 90 ಗ್ರಾಂ ಚಿನ್ನ ಕಳವು ಮಾಡಿದ್ದ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿರುವ ಘಟನೆ ತುಮಕೂರಿನಲ್ಲಿ ಜರುಗಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ 20 ಗ್ರಾಂ ಚಿನ್ನದ ಪದಕ ಸೇರಿದಂತೆ ಮನೆಯಲ್ಲಿದ್ದ 90 ಗ್ರಾಂ ಚಿನ್ನಾಭರಣದ ಕಳ್ಳರನ್ನು ಘಟನೆ ನಡೆದ 12 ಗಂಟೆಗಳೊಳಗೆ ತಿಪಟೂರು ನಗರ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಂಕರ್ ಬಾಬು, ಗುರುರಾಜ್, ಮನೋಜ್ ಎಂಬ ಆರೋಪಿಗಳು ತಿಪಟೂರು ನಗರದ ಹೇಮಲತಾ ಎಂಬವರ ಮನೆಯಲ್ಲಿ ಪೈಂಟರ್ ಕೆಲಸ ಮಾಡುತ್ತಿದ್ದಾಗ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಹೇಮಲತಾ ಅವರು ತಮ್ಮ ವ್ಯಾನಿಟಿ ಬ್ಯಾಗ್ನಲ್ಲಿ ಇಟ್ಟಿದ್ದ 60 ಗ್ರಾಂ ತೂಕದ ಮಾಂಗಲ್ಯ ಸರ, 10 ಗ್ರಾಂ ತೂಕದ ಉಂಗುರ, ರಾಜ್ಯೋತ್ಸವ ಪ್ರಶಸ್ತಿ ಅಂಗವಾಗಿ ರಾಜ್ಯ ಸರ್ಕಾರ ನೀಡುವ 20 ಗ್ರಾಂ ತೂಕದ ಚಿನ್ನದ ಪದಕ ಸೇರಿದಂತೆ ಒಟ್ಟು 90 ಗ್ರಾಂ ಚಿನ್ನಾಭರಣ ಇಟ್ಟಿದ್ದರು.
ಡಿಸೆಂಬರ್ 10ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಮನೆ ಗೆಲಸಕ್ಕೆಂದು ಬಂದಿದ್ದ ಆರೋಪಿಗಳು ಚಿನ್ನಾಭರಣ ಕದ್ದು ಪರಾರಿಯಾಗಿದ್ದರು.
ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಿಪಟೂರು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಯಿತು. ಕಳ್ಳತನವಾದ 12 ಗಂಟೆಯೊಳಗೆ ಮೂರು ಮಂದಿ ಆರೋಪಿಗಳನ್ನು ಬಂಧಿಸಿ, 9 ಲಕ್ಷ ರೂ. ಬೆಲೆ ಬಾಳುವ 90 ಗ್ರಾಂ ಚಿನ್ನದ ಒಡವೆಗಳನ್ನು ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.

