ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಿಡಿಗೇಡಿಗಳು ಡ್ಯಾಗರ್‌ನಿಂದ ಪೊಲೀಸ್ ಮುಖ್ಯಪೇದೆ ಒಬ್ಬರ ಮೇಲೆ ಹಲ್ಲೆಗೈದಿರುವ ಘಟನೆ ಚಾಮರಾಜಪೇಟೆಯ ವಾಲ್ಮೀಕಿನಗರದ 2ನೇ ಮುಖ್ಯರಸ್ತೆಯಲ್ಲಿ ನಡೆದಿದೆ.
ಜುಲೈ 26ರಂದು ರಾತ್ರಿ 9:30ರ ಸುಮಾರಿಗೆ ಹೆಡ್ ಕಾನ್ಸ್‌ಟೇಬಲ್ ಸಂತೋಷ್ ಅವರ ಎಡಗೈಗೆ ಗಂಭೀರ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಚಾಮರಾಜಪೇಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಬ್ರೇಜ್, ಅಬ್ರೇಜ್, ಸಲ್ಮಾನ್ ಪಾಶಾ ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ರಸ್ತೆಯಲ್ಲಿ ಪಾನಮತ್ತ ಆರೋಪಿಗಳು ಗಲಾಟೆ ಮಾಡಿಕೊಳ್ಳುತ್ತಿರುವಾಗ ಗಸ್ತಿನಲ್ಲಿದ್ದ ಮುಖ್ಯಪೇದೆ ಸಂತೋಷ್ ಗಮನಿಸಿ ಜಗಳ ಬಿಡಿಸಲು ಹೋದಾಗ ಆರೋಪಿಗಳು ಸಂತೋಷ್ ಹಾಗೂ ಮತ್ತೋರ್ವ ಸ್ಥಳೀಯ ವ್ಯಕ್ತಿ ಮೊಹಮ್ಮದ್ ಶಫೀವುಲ್ಲಾ ಮೇಲೆ ಡ್ಯಾಗರ್‌ನಿಂದ ಹಲ್ಲೆಗೈದ ಬಳಿಕ ಪರಾರಿಯಾಗಿದ್ದರು.
ಘಟನೆಯಲ್ಲಿ ಸಂತೋಷ್ ಅವರ ಎಡಗೈಗೆ ಗಂಭೀರವಾದ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

