ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರು ಪ್ರತಿ ಟನ್ ಗೆ 3500 ರೂ.ನಿಗದಿ ಮಾಡುವಂತೆ ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು ಹೆದ್ದಾರಿ ಬಂದ್‌ಗೆ ಮುಂದಾಗಿರುವ ರೈತರ ಮೇಲೆ ಪೊಲಿಸರು ಲಾಠಿಚಾರ್ಜ್ ಮಾಡಿರುವ ಘಟನೆ ಜರುಗಿದೆ.
ಪೊಲಿಸರು ಲಾಠಿಚಾರ್ಜ್ ಮಾಡುತ್ತಿದ್ದಂತೆ ರೊಚ್ಚಿಗೆದ್ದ ರೈತರು ಪ್ರತಿಯಾಗಿ ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಿಂದ ಹತ್ತರಗಿ ರಾಷ್ಟ್ರೀಯ ಹೆದ್ದಾರಿ ಟೋಲ್ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಬಾಗಲಕೋಟೆಯ ರೈತರು ಹುಬ್ಬಳ್ಳಿ ಮತ್ತು ಸೋಲಾಪುರಕ್ಕೆ ಸಂಪರ್ಕಿಸುವ ಗಡ್ಡಕೇರಿ ಹೆದ್ದಾರಿ 218, ವಿಜಯಪುರ ಮತ್ತು ಧಾರವಾಡಕ್ಕೆ ಸಂಪರ್ಕಿಸುವ ಮುಧೋಳ ತಾಲೂಕಿನ ಮುದ್ದಾಪುರ ಗ್ರಾಮದ ಹೆದ್ದಾರಿ ಮತ್ತು ಜಿಲ್ಲೆಯ ಕಮತಗಿ ಗ್ರಾಮದ ಹೆದ್ದಾರಿಯನ್ನು ತಡೆದಿದ್ದರು.
ಬೆಳಿಗ್ಗೆಯಿಂದಲೇ ರಸ್ತೆ ತಡೆ ಆರಂಭವಾಯಿತು. ಇದರಿಂದಾಗಿ ಬಾಗಲಕೋಟೆಯ ಮೂರು ಸ್ಥಳಗಳಲ್ಲಿಯೂ ಸಂಚಾರ ಸ್ಥಗಿತಗೊಂಡಿತ್ತು. ರೈತರು ರಸ್ತೆ ತಡೆ ನಡೆಸಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿವೆ. ವಿವಿಧ ಮಠಾಧೀಶರ ರೈತ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ರೈತರು ಮಾಡುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು ರೈತರು ಪಟ್ಟು ಸಡಿಲಿಸುತ್ತಿಲ್ಲ. ಇಂಡಿ ತಾಲ್ಲೂಕು ಬಂದ್‌ಗೆ ರೈತರು ಕರೆ ನೀಡಿದ್ದರಿಂದ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು ಬಂದ್ ಮಾಡಲಾಗಿದ್ದು ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಿಜಯಪುರ ನಗರದಲ್ಲಿ ರೈತರು ಈಗಾಗಲೇ ಗಗನ್ ಮಹಲ್ ಬಳಿ ರಾತ್ರಿಯಿಡೀ ಧರಣಿ ನಡೆಸುತ್ತಿದ್ದಾರೆ. ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇದಕ್ಕೆ ವಿವಿಧ ಪ್ರಗತಿಪರ, ರೈತ ಪರ ಮತ್ತು ದಲಿತ ಪರ ಸಂಘಟನೆಗಳು ಬೆಂಬಲ ನೀಡಿವೆ.
ರೈತರು ತಮ್ಮ ಬೇಡಿಕೆಗಳನ್ನು ಈಡೇರಿಸಲು ಮತ್ತು ಮಹಾರಾಷ್ಟ್ರದ ಮಾದರಿಯಲ್ಲಿ ಕಬ್ಬಿಗೆ ಲಾಭದಾಯಕ ಬೆಲೆ ಘೋಷಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಿಲ್ಲೆಯ ಭೀಮಾಶಂಕರ್ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ನಂತರ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ಕಾರ್ಖಾನೆಯ ದ್ವಾರಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದು ಕಾರ್ಖಾನೆಯು ವಿಳಂಬವಿಲ್ಲದೆ ಪುನರಾರಂಭಿಸಬೇಕೆಂದು ಒತ್ತಾಯಿಸಿದ್ದಾರೆ. ಏತನ್ಮಧ್ಯೆ, ರೈತರು ತಮ್ಮ ಬೇಡಿಕೆಗಳು ಈಡೇರುವವರೆಗೆ ತಮ್ಮ ಪ್ರತಿಭಟನೆ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಂಬಲ ಬೆಲೆಗೆ ಒತ್ತಾಯಿಸಿ ರೈತರು ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಶುಕ್ರವಾರ ಮಧ್ಯಾಹ್ನದ ನಂತರ ಅವಳಿ ಜಿಲ್ಲೆಯಲ್ಲಿ ಬಂದ್ ಅಥವಾ ಹೆದ್ದಾರಿ ತಡೆ ನಡೆಸುವುದಾಗಿ ರೈತರು ಷರತ್ತು ವಿಧಿಸಿದ್ದರು. ಅದರಂತೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಬಂದ್‌ನಡೆಸಿದ್ದರೆ ಬಾಗಲಕೋಟೆ ಜಿಲ್ಲೆಯ ರೈತರು ಜಿಲ್ಲೆಯ ಮೂರು ಸ್ಥಳಗಳಲ್ಲಿ ಹೆದ್ದಾರಿ ತಡೆ ನಡೆಸಿದ್ದಾರೆ.

