ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರು ಪಶ್ಚಿಮ ವಿಭಾಗದ 6 ಶಿಕ್ಷಣ ಸಂಸ್ಥೆಗಳು ಹಾಗೂ 2 ಹಾಸ್ಟೆಲ್‌ಗಳಲ್ಲಿ ಮಾದಕ ಪದಾರ್ಥಗಳ ಸೇವನೆಯ ವಿರುದ್ಧದ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಪೊಲೀಸರು ದಿಢೀರ್ ತಪಾಸಣೆ ನಡೆಸಿ ಶಾಕ್ ನೀಡಿದರು.
ಶಿಕ್ಷಣ ಸಂಸ್ಥೆಗಳು ಹಾಗೂ ಹಾಸ್ಟೆಲ್‌ಗಳ ವ್ಯವಸ್ಥಾಪಕರ ಅನುಮತಿಯೊಂದಿಗೆ ಸುಮಾರು 1,200 ವಿದ್ಯಾರ್ಥಿಗಳಿಂದ ಸ್ಯಾಂಪಲ್ಸ್ ಪಡೆಯಲಾಗಿದ್ದು, 585 ಜನರ ಸ್ಯಾಂಪಲ್ಸ್ ಪರಿಶೀಲನೆ ನಡೆಸಿದಾಗ ಕೆಲವರು ಮಾದಕ ಪದಾರ್ಥ ಸೇವಿಸಿರುವುದು ದೃಢಪಟ್ಟಿದೆ ಎನ್ನಲಾಗಿದೆ.
ಆ ವಿದ್ಯಾರ್ಥಿಗಳನ್ನು ವ್ಯಸನ ಮುಕ್ತಗೊಳಿಸಲು ‘ಸನ್ಮಿತ್ರ‘ ಕಾರ್ಯಕ್ರಮದಡಿ ಪೋಷಕರಿಗೆ ನೆರವು ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
1,200 ವಿದ್ಯಾರ್ಥಿಗಳ ಸ್ಯಾಂಪಲ್ಸ್ ಪಡೆದು, 585 ಸ್ಯಾಂಪಲ್ಸ್ ಅನ್ನು ರ‍್ಯಾಂಡಮ್ ಆಗಿ ಮಾದಕ ಸೇವನೆ ಪತ್ತೆ ಪರೀಕ್ಷೆಗೊಳಪಡಿಸಿದಾಗ, 31 ವಿದ್ಯಾರ್ಥಿಗಳು ಮಾದಕ ಪದಾರ್ಥ ಸೇವಿಸಿರುವುದು ದೃಢಪಟ್ಟಿದೆ.
ಶಿಕ್ಷಣ ಸಂಸ್ಥೆ, ಹಾಸ್ಟೆಲ್‌ಗಳ ಆಡಳಿತ ಮಂಡಳಿಗಳು ಹಾಗೂ ಪುಣ್ಯ ಆಸ್ಪತ್ರೆ, ಪದ್ಮದೇವಯ್ಯ ಆಸ್ಪತ್ರೆ, ಕಾಡೆ ಆಸ್ಪತ್ರೆ, ಶರಾವತಿ ಆಸ್ಪತ್ರೆ, ಶ್ರೀಲಕ್ಷ್ಮೀ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಕಾಂಗರೂ ಕೇರ್ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಸಹಕಾರ ಒದಗಿಸಿದ್ದಾರೆ. ಮಾದಕ ಪದಾರ್ಥಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಕಾಲೇಜು ಆಡಳಿತ ಮಂಡಳಿಗೆ ಪೊಲೀಸರು ಮನವರಿಕೆ ಮಾಡಿಕೊಟ್ಟಿದ್ದಾರೆ.
ವ್ಯಸನಮುಕ್ತಾಗಿ ಸನ್ಮಿತ್ರ:
ಮಾದಕ ಪದಾರ್ಥಗಳ ಸೇವನೆ ಮಾಡುವವರನ್ನು, ವ್ಯಸನದಿಂದ ಮುಕ್ತಗೊಳಿಸಲು ಪೊಲೀಸ್ ಇಲಾಖೆಯ ವತಿಯಿಂದ ‘ಸನ್ಮಿತ್ರ‘ ಯೋಜನೆಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎಸ್ ಸಲೀಂ ಚಾಲನೆ ನೀಡಿದ್ದರು. ಇದರ ಮೂಲಕ ಮಾದಕ ವ್ಯಸನಿ ವಿದ್ಯಾರ್ಥಿಗಳುಮತ್ತು ಅವರ ಪೋಷಕರಿಗೆ ಪೊಲೀಸರು ನೆರವಾಗಲಿದ್ದಾರೆ.
ವ್ಯಸನಿಗಳನ್ನು ಕೌನ್ಸೆಲಿಂಗ್‌ಗೆ ಒಳಪಡಿಸಿ, ಅವರು ಯಾವ ಕಾರಣದಿಂದ ಮಾದಕ ಪದಾರ್ಥಗಳಿಗೆ ದಾಸರಾಗಿದ್ದಾರೆ? ಮಾದಕಪದಾರ್ಥಗಳು ಸಿಗುತ್ತಿರುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ಇದರೊಂದಿಗೆ ಅಂತಹ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿ ಅವರನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಲು ಪ್ರಯತ್ನಿಸಲಾಗುತ್ತದೆ. ವಿದ್ಯಾರ್ಥಿಗಳ ಮೇಲೆ ನಿರಂತರವಾಗಿ ಪೊಲೀಸರು ನಿಗಾವಹಿಸಲಿದ್ದಾರೆ ಮತ್ತು ಅವರ ಗೌಪ್ಯತೆ ಕಾಪಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

