ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಗಾಂಜಾ ಮಾರಾಟಗಾರನೊಬ್ಬ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿರುವ ಘಟನೆ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ಬಂಧಿತ ಆರೋಪಿ ನಸ್ರು ಅಲಿಯಾಸ್ ನಸ್ತುಲ್ಲಾ(21) ಎಂಬುವನ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿ ಬಂಧಿಸಿದ್ದಾರೆ.
ಗಾಂಜಾ ಮಾರಾಟಗಾರ ನಸ್ರುಲ್ಲಾನನ್ನು ಬಂಧಿಸಲು ಹೋದಾಗ ಈ ಘಟನೆ ನಡೆದಿದೆ. ಹಳೇ ನಗರ ಪೊಲೀಸ್ ಠಾಣೆಯ ಪಿಸಿ ಮೌನೇಶ್ ಅವರ ಮೇಲೆ ಹಲ್ಲೆ ನಡೆಸಿದ್ದಲ್ಲದೇ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಎನ್ನಲಾಗಿದೆ.
ಈ ವೇಳೆ ಠಾಣೆಯ ಪಿಎಸ್ಐ ಚಂದ್ರಶೇಖರ್ ಅವರು ತಮ್ಮ ಸಿಬ್ಬಂದಿ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿದರೂ ಕೂಡಾ ಆರೋಪಿ ನಸ್ರು ಓಡಲು ಪ್ರಾರಂಭಿಸಿದ. ಕೂಡಲೇ ಓಡಿ ಹೋಗದಂತೆ ಹಾಗೂ ಶರಣಾಗುವಂತೆ ಪೊಲೀಸರು ಸೂಚಿಸಿದರೂ ಓಡಿ ಹೋಗಲು ಪ್ರಯತ್ನಿಸಿದ್ದು, ಈ ವೇಳೆ, ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಆತನ ಎಡಗಾಲಿಗೆ ಗುಂಡು ತಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪ್ರಕಟಣೆ ಮೂಲಕ ಪೊಲೀಸರು ತಿಳಿಸಿದ್ದಾರೆ.
ಆರೋಪಿ ನಸ್ರುವಿನ ಮೇಲೆ ಭದ್ರಾವತಿಯಲ್ಲಿ 5 ಗಾಂಜಾ ಪ್ರಕರಣ ದಾಖಲಾಗಿವೆ. ಬಂಧನದ ವೇಳೆ ಈತನ ಬಳಿ 1.4 ಕೆ.ಜಿ ಗಾಂಜಾ ಪತ್ತೆಯಾಗಿದ್ದು, ವಶಕ್ಕೆ ಪಡೆಯಲಾಗಿದೆ. ತಕ್ಷಣಕ್ಕೆ ಆತನಿಗೆ ಭದ್ರಾವತಿಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.