ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಪಿಎಸ್ಐ ಗಾದಿ ಲಿಂಗ ಗೌಡರ ಮೇಲೆ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ ಸಿ ಹನುಮಂತೇಗೌಡ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ನಗರ ಠಾಣೆಯಲ್ಲಿ ಹನುಮಂತೇ ಗೌಡರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದರು.
ಅದೇ ರೀತಿ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ ಸಿ ಹನುಮಂತೇಗೌಡರ ಮೇಲೆ ಪಿಎಸ್ಐ ಗಾದಿ ಲಿಂಗ ಗೌಡರ ಹಲ್ಲೆ ಮಾಡಿದ್ದು ಅವರ ವಿರುದ್ದ ಕೌಂಟರ್ (ಪ್ರತಿಯಾಗಿ) ಎಫ್ಐಆರ್ ದಾಖಲು ಮಾಡಲು ಪೊಲೀಸ್ ಇಲಾಖೆ ಮೀನಾಮೇಷ ಮಾಡಿದ್ದರಿಂದಾಗಿ ಇಡೀ ದಿವ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.
ಹಲ್ಲೆ ಮಾಡಿರುವ PSI ವಿರುದ್ದ FIR ದಾಖಲು ಮಾಡಲು ನಿರಾಕರಣೆ ಮಾಡಿದ ಜಿಲ್ಲಾ ಪೊಲೀಸ್ (SP) ಕಚೇರಿಯಲ್ಲಿ ಸಂಸದ ಗೋವಿಂದ ಕಾರಜೋಳ, ಎಂಎಲ್ ಸಿ ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ, ಮಾಜಿ ಶಾಸಕ ಪಾವಗಡ ತಿಮ್ಮರಾಯಪ್ಪ, ವಿಶ್ರಾಂತ ಐಎಎಸ್ ಅಧಿಕಾರಿ, ಬಿಜೆಪಿ ಮುಖಂಡ ಅನಿಲ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಜಯಣ್ಣ, ಜಿಲ್ಲಾಧ್ಯಕ್ಷ ಮುರುಳಿ, ಸೇರಿದಂತೆ ಬಿಜೆಪಿ, ಜೆಡಿಎಸ್ ಮುಖಂಡರು ಹಲವು ಗಂಟೆಗಳ ಕಾಲ ಎಸ್ಪಿ ಕಚೇರಿಯಲ್ಲೇ ಮೊಕ್ಕಂ ಹೂಡಿದ್ದರು.
ಸಂಧಾನ- ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಸಂಸದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯರಾದ ನವೀನ್, ಚಿದಾನಂದ್, ಮಾಜಿ ಶಾಸಕರಾದ ತಿಪ್ಪಾರೆಡ್ಡಿ, ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ ಇವರುಗಳ ಸಮ್ಮುಖದಲ್ಲಿ ನಡೆದ ರಾಜೀ ಸಂಧಾನ ಸಭೆಯಲ್ಲಿ ಪಿಎಸ್ಐ ವಿರುದ್ಧ ಯಾವುದೇ ಕಾರಣಕ್ಕೂ ಎಫ್ಐಆರ್ ದಾಖಲು ಮಾಡುವುದಿಲ್ಲ. ಅಲ್ಲದೆ ಎಫ್ಐಆರ್ ದಾಖಲಾಗಿರುವ ಹನುಮಂತೇಗೌಡರನ್ನು ಯಾವುದೇ ಕಾರಣಕ್ಕೂ ಬಂಧಿಸುವುದಿಲ್ಲ. ಹನುಮಂತೇಗೌಡರ ವಿರುದ್ಧ ದಾಖಲಾಗಿರುವ ಎಫ್ಐಆರ್ ಅನ್ನು 15 ದಿನದಿಂದ ಒಂದು ತಿಂಗಳೊಳಗೆ ಬಿ ರಿಪೋರ್ಟ್ ಹಾಕಲಾಗುತ್ತದೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಐಯರ್ ಆಸ್ಪತ್ರೆಗೆ ಹನುಮಂತೇಗೌಡರನ್ನು ಕೊರೆದೊಯ್ಯಲು ಅವಕಾಶ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಇಡೀ ದಿನ ಟೆನ್ಷನ್..ಟೆನ್ಷನ್…
ಜಿಲ್ಲಾಸ್ಪತ್ರೆಯಲ್ಲಿ ಪಿಎಸ್ಐ ಗಾದಿ ಲಿಂಗ ಗೌಡರ ಮತ್ತು ಬಿಜೆಪಿ ಮುಖಂಡ ಹನುಮಂತೇಗೌಡರು ಇಬ್ಬರು ದಾಖಲಾಗಿದ್ದರಿಂದಾಗಿ ಆಸ್ಪತ್ರೆಯಲ್ಲಿ ರಕ್ಷಣೆಗಾಗಿ ಹಲವು ಪೊಲೀಸರನ್ನು ನೇಮಕ ಮಾಡಲಾಗಿತ್ತು.
ಇದರ ಮಧ್ಯ ಸಂಸದರು, ಮಾಜಿ ಶಾಸಕರು, ವಿಧಾನ ಪರಿಷತ್ ಸದಸ್ಯರುಗಳು, ಬಿಜೆಪಿ ಮುಖಂಡರು ಮತ್ತು ನಾಯಕರುಗಳು, ಕಾರ್ಯಕರ್ತರು, ಜೆಡಿಎಸ್ ಮುಖಂಡರು, ಕಾರ್ಯಕರ್ತರುಗಳು ಇಡೀ ದಿನ ಜಿಲ್ಲಾಸ್ಪತ್ರೆ, ಜಿಲ್ಲಾ ಪೊಲೀಸ್ ಕಚೇರಿಯತ್ತ ಆಗಮಿಸುತ್ತಿದ್ದರಿಂದಾಗಿ ಆಸ್ಪತ್ರೆ ಸಿಬ್ಬಂದಿಗಳಿಗೂ ಸಾಕು ಸಾಕಾಗಿತ್ತು. ಹತ್ತಾರು ಸಂಖ್ಯೆಯಲ್ಲಿದ್ದ ಪೊಲೀಸರಿಗೂ ನಿಯಂತ್ರಿಸಲು ಕಷ್ಟವಾಗುತ್ತಿತ್ತು.
ಬಿಜೆಪಿ-ಜೆಡಿಎಸ್ ಮುಖಂಡರು ಪಿಎಸ್ಐ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಪಟ್ಟು ಹಿಡಿದು ಕೂತಿದ್ದು ಮತ್ತೊಷ್ಟು ಟೆನ್ಷನ್ ಗೆ ಕಾರಣವಾಗಿತ್ತು. ಕೊನೆಗೆ ರಾಜೀ ಸಂಧಾನದ ಮೂಲಕ ಪ್ರಕರಣ ಸುಖಾಂತ್ಯ ಕಂಡಂತೆ ಆಗಿದೆ.