ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಖಚಿತ ಮಾಹಿತಿ ಮೇರೆಗೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು ಪತ್ತೆ ಮಾಡಿ ಬಂಧಿತ ಆರೋಪಿಗಳಿಂದ 4.5 ಕೋಟಿ ಮೌಲ್ಯದ ಮಾದಕ ದ್ರವ್ಯಗಳನ್ನು ರಾಜಾನುಕುಂಟೆ ಪೊಲೀಸರು ಜಪ್ತಿ ಮಾಡಿದ್ದಾರೆ.
ಯಲಹಂಕ ತಾಲೂಕು ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅದ್ದಿಗಾನಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ವಿದೇಶಿ ಪ್ರಜೆಗಳು ವಾಸವಾಗಿದ್ದು, ಅವರ ಚಲನವಲನದ ಬಗ್ಗೆ ಪೊಲೀಸರಿಗೆ ಸಂಶಯ ಇತ್ತು. ಹೀಗಾಗಿ ಖಚಿತ ಮಾಹಿತಿ ಪಡೆದ ಮೇರೆಗೆ ರಾಜಾನುಕುಂಟೆ ಪೊಲೀಸರು ಅವರ ಮನೆ ಮೇಲೆ ದಾಳಿ ಮೂವರು ವಿದೇಶಿ ಪ್ರಜೆಗಳು ವಾಸವಾಗಿರುವುದು ಪತ್ತೆಯಾಗಿದೆ. ಮಾದಕ ದ್ರವ್ಯವೂ ಸಿಕ್ಕಿದೆ. ಹೀಗಾಗಿ ಅವರನ್ನು ಬಂಧಿಸಿ, NDPS ಕಾಯ್ದೆಯಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಕೆ. ಬಾಬಾ ಈ ಕುರಿತು ಮಾತನಾಡಿ, ನೈಜೀರಿಯಾ ಮೂಲದ ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ಆರೋಪಿಗಳು ಮೆಡಿಕಲ್ ಕಾರಣಕ್ಕಾಗಿ ದೆಹಲಿಗೆ ಬಂದಿದ್ದರು. ಅಲ್ಲಿಂದ ಬೆಂಗಳೂರಿನ ಅದಿಗಾನಹಳ್ಳಿಗೆ ಆಗಮಿಸಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಆರೋಪಿಗಳಿಂದ ಅಕ್ರಮವಾಗಿ ಶೇಖರಿಸಿ ಇಟ್ಟಿದ್ದ ನಿಷೇಧಿತ ಮಾದಕ ವಸ್ತುಗಳಾದ MDMA Crystal 2 ಕೆಜಿ 820 ಗ್ರಾಂ, 07 ಮೊಬೈಲ್ ಫೋನ್ಗಳು, 02 ತೂಕದ ಯಂತ್ರ ಮತ್ತು 2,06,870 ಲಕ್ಷ ರೂಪಾಯಿ ನಗದು ಜಪ್ತಿ ಮಾಡಲಾಗಿದೆ. ಒಟ್ಟು ಮೌಲ್ಯ 04.50 ಕೋಟಿ ಮೌಲ್ಯದ ಮಾದಕ ದ್ರವ್ಯ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಯಾರಿಗೂ ಅನುಮಾನ ಬಾರದಂತೆ ರೆಡಿಮೆಡ್ ಬಟ್ಟೆಗಳ ಪ್ಯಾಕ್ಗಳಲ್ಲಿ ಆರೋಪಿಗಳು ಡ್ರಗ್ ತುಂಬಿ ಮಾರಾಟ ಮಾಡ್ತಿದ್ದರು. ಶರ್ಟ್, ಪ್ಯಾಂಟ್ಗಳಲ್ಲಿ ಬಳಸುವ ಕಾರ್ಡ್ ಬೋರ್ಡ್ಗಳಲ್ಲಿ ಮಾದಕ ವಸ್ತುಗಳನ್ನ ಇಟ್ಟು ಮಾರಾಟ ಮಾಡುತ್ತಿದ್ದರು.
ಅಕ್ಕಪಕ್ಕದವರಿಗೆ ಅನುಮಾನ ಬಾರದೆಂಬ ಕಾರಣಕ್ಕೆ ಸೆಕ್ಯೂರಿಟ್ ಕೆಲಸದ ಬಟ್ಟೆಗಳನ್ನ ಹಾಕಿಕೊಂಡು ಮನೆಗೆ ಬಂದು ಹೋಗುತ್ತಿದ್ದರು. ಆರೋಪಿಗಳ ವಿಚಾರಣೆ ಮುಂದುವರೆಸಲಾಗಿದ್ದು, ಇವರಿಂದ ಮತ್ತಷ್ಟು ಮಾಹಿತಿಗಳನ್ನ ಕಲೆಹಾಕಿ ಡ್ರಗ್ಸ್ ಜಾಲವನ್ನ ಭೇದಿಸುವುದಾಗಿ ಎಸ್ಪಿ ಅವರು ತಿಳಿಸಿದ್ದಾರೆ.