ರಾಜಕೀಯ ಪಕ್ಷಗಳಿಗೆ ಶಾಶ್ವತ ಕಾರ್ಯಕರ್ತರ ಪಡೆ ಬೇಕೇ?

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳಿಗೆ ಅಜೀವ ಕಾರ್ಯಕರ್ತರು ಅಥವಾ ಸದಸ್ಯರ ಅವಶ್ಯಕತೆ ಇದೆಯೇ
.

ಪ್ರಜಾಪ್ರಭುತ್ವದ ಕ್ರಮಬದ್ಧ ಮುಂದುವರಿಕೆಗಾಗಿ, ಆಡಳಿತಾತ್ಮಕ ಕೆಲಸಗಳಿಗಾಗಿ, ಚುನಾವಣಾ ವ್ಯವಸ್ಥೆ ಇದೆ. ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿಕೊಳ್ಳಲು ಈ ಚುನಾವಣಾ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಒಮ್ಮೆ ಚುನಾವಣೆ ನಡೆದು ಸೇವೆಗಾಗಿಯೋ, ಅಧಿಕಾರಕ್ಕಾಗಿಯೋ ಒಟ್ಟಿನಲ್ಲಿ ಬಹುಮತ ಪಡೆದ ವ್ಯಕ್ತಿಯೊಬ್ಬ ಜನ ಪ್ರತಿನಿಧಿಯಾಗಿ ಆಯ್ಕೆಯಾದ ನಂತರ ಈ ಕಾರ್ಯಕರ್ತರಿಗೆ ಇರುವ ಕೆಲಸವಾದರೂ ಏನು.

ನಾವೆಲ್ಲರೂ ಭಾರತೀಯರೇ, ವಿವಿಧ ಪಕ್ಷಗಳ ಬೆಂಬಲವನ್ನು ಆ ಸಂದರ್ಭಕ್ಕೆ ತಕ್ಕಂತೆ ಮಾಡುತ್ತೇವೆ. ಗೆದ್ದ ನಂತರ ಅಭ್ಯರ್ಥಿಗಳು ತಮ್ಮ ತಮ್ಮ ಸಂವಿಧಾನಾತ್ಮಕ ಕೆಲಸಗಳನ್ನು ಕಾನೂನು ಅಡಿಯಲ್ಲಿ ಮಾಡುತ್ತಾರೆ. ಏಕೆಂದರೆ ಗೆದ್ದ ನಂತರ ಆತ ಯಾವುದೋ ಒಂದು ಪಕ್ಷಕ್ಕೆ ಸೀಮಿತವಾಗಿರುವುಳಿದಿಲ್ಲ. ಎಲ್ಲಾ ಸಾರ್ವಜನಿಕರಿಗೂ ಆತ ಸಮಾನ ಪ್ರತಿನಿಧಿ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತರು ಮಾಡಬಹುದಾದ ಕೆಲಸವಾದರೂ ಏನು.

ಸುಮ್ಮನೆ ಅನಾವಶ್ಯಕವಾಗಿ ಎಂದೋ ಬರುವ ಚುನಾವಣೆಗಾಗಿ, ಯಾವುದೋ ಪಕ್ಷದ ಬೆಂಬಲಿಗನಾಗಿ, ಸದಸ್ಯತ್ವಗಳನ್ನು ಮಾಡಿಸುತ್ತಾ, ಸುಮ್ಮನೆ ಖಾಲಿ ಪೋಲಿ ಸುತ್ತಾಡುತ್ತಾ, ಜನರಲ್ಲಿ ತಮ್ಮ ಪಕ್ಷದ ಬಗ್ಗೆ ಇರುವ, ಇಲ್ಲದಿರುವ ಎಲ್ಲವನ್ನೂ ಹೇಳುತ್ತಾ, ಇನ್ನೊಂದು ಪಕ್ಷವನ್ನು ಟೀಕಿಸುತ್ತಾ, ತಮ್ಮ ಪಕ್ಷ ಏನೇ ತಪ್ಪು ಮಾಡಿದರೂ ಅದನ್ನು ಸಮರ್ಥಿಸುತ್ತಾ, ಸಾಮಾನ್ಯ ಜನರಲ್ಲಿ ದ್ವೇಷ, ಅಸೂಯೆ ಹುಟ್ಟಿಸುತ್ತಾ ಇರುವ ಈ ಅಜೀವ ಕಾರ್ಯಕರ್ತರ ಅವಶ್ಯಕತೆ ಇದೆಯೇ.

ಚುನಾವಣೆ ಸಂದರ್ಭದಲ್ಲಿ ಮಾತ್ರ, ಆ ಸಮಯದ ಸ್ವಲ್ಪ ದಿನಗಳ ಕಾಲ, ತಮ್ಮ ಪಕ್ಷದ ಸಿದ್ಧಾಂತ, ಸೇವಾ ಮನೋಭಾವ, ಭರವಸೆ, ದೃಷ್ಟಿಕೋನವನ್ನು ಹೇಳುವುದು ಹೊರತುಪಡಿಸಿ ಇವರಿಗೆ ಇನ್ಯಾವ ಕೆಲಸ ಇರುತ್ತದೆ. ಸುಮ್ಮನೆ ಯಾವುದೋ ರಾಜಕೀಯ ವ್ಯಕ್ತಿಗಳ ಹಿಂದೆ ಪುಡಾರಿಯಂತೆ ಜೀವನಪೂರ್ತಿ ಅಲೆದಾಡುವುದು, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ ಕೊಡುವುದು, ಭ್ರಷ್ಟಾಚಾರ, ಸ್ವಜನಪಕ್ಷಪಾತ ಹೆಚ್ಚು ಮಾಡುವುದು ಇವರ ಅನಧಿಕೃತ ಕೆಲಸವಾಗಿರುತ್ತದೆ. ಜನ ಪ್ರತಿನಿಧಿಗಳಿಗಿಂತ ಇವರದೇ ಹಾವಳಿ ಜಾಸ್ತಿ.

ಇದೊಂದು ರಾಷ್ಟ್ರೀಯ ಸಂಪನ್ಮೂಲದ ನಷ್ಟ ಅಥವಾ ದುರುಪಯೋಗವಲ್ಲವೇ, ಐದು ವರ್ಷಕ್ಕೋ, ಎರಡು ವರ್ಷಕ್ಕೋ ಇರುವ ಚುನಾವಣೆಗಾಗಿ ಎಲ್ಲ ಕೆಲಸ ಬಿಟ್ಟು ಒಂದು ಪಕ್ಷದ ಪರವಾಗಿ ಜೀವನ ಕಳೆಯುವುದು ಅವಮಾನಕರವಲ್ಲವೇ. ಪ್ರಜಾಪ್ರಭುತ್ವ ಎಂಬ ಕಾರಣದಿಂದ ಸುಮ್ಮನೆ ಪಕ್ಷಗಳಿಗೆ ಜೀತ ಮಾಡುವುದಕ್ಕಿಂತ ಬೇರೆ ಏನಾದರೂ ಒಳ್ಳೆಯ ಕೆಲಸ, ಸಾಧನೆ ಮಾಡಬಹುದಲ್ಲವೇ.

ಕೆಲವರಿಗೆ ಎಂದೋ ಒಂದು ದಿನ, ಯಾವುದೋ ಒಂದು ಅಧಿಕಾರ ದೊರೆಯಬಹುದು ಎಂಬ ಆಸೆಯಿಂದ ಎಷ್ಟೆಲ್ಲಾ ದೇಶ ವಿರೋಧಿ, ಸಂವಿಧಾನ ವಿರೋಧಿ, ಗುಲಾಮಿತನದ ಕೆಲಸ ಮಾಡಿಕೊಂಡು ಯಾಕೆ ಇರಬೇಕು. ದೇಶ ಮುಖ್ಯವೇ ಹೊರತು ಪಕ್ಷ ಮುಖ್ಯವಲ್ಲ. ಹಾಗಿದ್ದ ಮೇಲೆ ಆ ಪಕ್ಷಕ್ಕಾಗಿ ಏಕೆ ಜೀವನವನ್ನು ವ್ಯರ್ಥ ಮಾಡಿಕೊಳ್ಳಬೇಕು.

ಯಾರೋ ಒಬ್ಬರು ಗೆಲ್ಲಲಿ. ಚುನಾವಣೆ ಸಂದರ್ಭದಲ್ಲಿ ಮೂರು ತಿಂಗಳು ಮಾತ್ರ ಈ ರೀತಿಯ ಚಟುವಟಿಕೆಯಲ್ಲಿ ಭಾಗವಹಿಸಿ ಉಳಿದಂತೆ ಬೇರೆ ಕೆಲಸ ಮಾಡಬಹುದಲ್ಲವೇ. ನಾಯಕನ ಹಿಂದೆ ನಾಯಿಯಂತೆ ಹಿಂಬಾಲಿಸುತ್ತಾ, ಅವನ ಸುಖ ದುಃಖಗಳಲ್ಲಿ ಭಾಗಿಯಾಗಿ, ನಮ್ಮ ಬದುಕನ್ನು ವ್ಯರ್ಥ ಮಾಡಿಕೊಳ್ಳುವುದು ಒಳ್ಳೆಯ ಲಕ್ಷಣವಲ್ಲ.
ಆ ಕಾರಣದಿಂದ ರಾಜಕೀಯ ಪಕ್ಷಗಳಿಗೆ ನಿಜಕ್ಕೂ ಶಾಶ್ವತ  ಕಾರ್ಯಕರ್ತರ ಅವಶ್ಯಕತೆ ಇರುವುದಿಲ್ಲ. ಅದು ಇದ್ದರೂ ಚುನಾವಣೆ ಸಂದರ್ಭದಲ್ಲಿ ಎರಡು ಮೂರು ತಿಂಗಳುಗಳಿಗೆ ಮಾತ್ರ ಸೀಮಿತವಾಗಿರಬೇಕು.

ಅನಂತರ ನಾವೆಲ್ಲರೂ ಒಂದೇ. ಈ ಮನೋಭಾವ ಇದ್ದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ ಅಂದಾಜು ದೇಶದ ಒಟ್ಟು ಜನಸಂಖ್ಯೆಯ ಸುಮಾರು ಶೇಕಡಾ 10% ಕ್ಕೂ ಹೆಚ್ಚು ಜನ ಕೇವಲ ಈ ರೀತಿಯ ಕೆಟ್ಟ ರಾಜಕೀಯದಲ್ಲಿಯೇ ಒಬ್ಬರು ಇನ್ನೊಬ್ಬರ ಮೇಲೆ ದ್ವೇಷ ಕಾರುತ್ತಾ ಸುಮ್ಮನೆ ಕೆಲಸವಿಲ್ಲದೆ ಪ್ರಚಾರ ಮಾತ್ರ ಮಾಡಿಕೊಂಡು ಸಾಗುವುದು ಖಂಡಿತಾ ಅಭಿವೃದ್ಧಿಗೆ ಮಾರಕ. ಈ ಬಗ್ಗೆ ಎಲ್ಲರೂ ಗಂಭೀರವಾಗಿ ಯೋಚಿಸಬೇಕು. ಏನಾದರೂ ಸರಿಯಾದ ವಾಸ್ತವಿಕ ಬದಲಾವಣೆ ಅಥವಾ ಪರಿವರ್ತನೆ ಮಾಡಬೇಕು.

ಇತ್ತೀಚೆಗೆ ಆಡಳಿತ ಮತ್ತು ವಿರೋಧ ಪಕ್ಷಗಳು ಅನಾವಶ್ಯಕವಾಗಿ ಸಮ್ಮೇಳನಗಳು, ಪ್ರದರ್ಶನಗಳು, ಕಾಲ್ನಡಿಗೆ, ಪ್ರತಿಭಟನೆ, ವಿಜಯೋತ್ಸವ ಹೀಗೆ ಅನೇಕ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಿವೆ. ಅದಕ್ಕೆ ಪಕ್ಷದ ಕಾರ್ಯಕರ್ತರ ಹೆಸರಿನಲ್ಲಿ ಸಾವಿರಾರು ಜನರನ್ನು ದುಡಿಸಿಕೊಳ್ಳುತ್ತಿವೆ. ಇದೆಲ್ಲಾ ಅನಾವಶ್ಯಕವಲ್ಲವೇ..

ಇಷ್ಟೊಂದು ಸಮೂಹ ಸಂಪರ್ಕ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ವಿವಿಧ ಸ್ಯಾಟಲೈಟ್ ತಂತ್ರಜ್ಞಾನ ಬೆಳವಣಿಗೆ ಆಗಿರುವ ಸಂದರ್ಭದಲ್ಲಿ ಈ ಹಳೆಯ ಕಾಲದ ಜೈಕಾರ ಸಂಸ್ಕೃತಿಯ ಪಳೆಯುಳಿಕೆ ಅನಿವಾರ್ಯತೆ ಇದೆಯೇ.. ಇಷ್ಟೇ ಶ್ರಮವನ್ನು ರಾಜ್ಯದ ಅಭಿವೃದ್ಧಿಗೆ ಪ್ರಯತ್ನಿಸಿದರೆ, ಶ್ರಮಪಟ್ಟರೆ ಎಷ್ಟೋ ಉತ್ತಮ ಕೆಲಸಗಳಾಗುತ್ತವೆ.  ಗುಲಾಮಿತನದ ಪಕ್ಷಗಳ ಈ ಕಾರ್ಯಕರ್ತರ ಪಡೆ ನಿಜಕ್ಕೂ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆ ಮೂಡುತ್ತಿದೆ.

ಬೇರೆ ಬೇರೆ ಕೆಲವು ಕಾರಣಗಳನ್ನು ನೀಡಿ ಇದನ್ನು ಸಮರ್ಥಿಸಿಕೋಳ್ಳಬಹುದು. ಅದನ್ನೂ ಮೀರಿ ಅತ್ಯಂತ ಉಪಯೋಗಕಾರಿ ಪರ್ಯಾಯ ಮಾರ್ಗಗಳನ್ನು ಯೋಚಿಸುವುದು ಒಳಿತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ……ಇದು ಪಕ್ಷದ ಕಚೇರಿಯ ವಿವಿಧ ಹುದ್ದೆಗಳ ಪದಾಧಿಕಾರಿಗಳಿಗೆ ಅನ್ವಯಿಸುವುದಿಲ್ಲ…….
ಲೇಖನ-ವಿವೇಕಾನಂದ. ಎಚ್. ಕೆ. 9844013068………

- Advertisement -  - Advertisement -  - Advertisement - 
Share This Article
error: Content is protected !!
";