ರಾಜಕೀಯ ಪ್ರೇರಿತ ಬ್ಲ್ಯಾಕ್ ಮೇಲ್ ಮಾಡಲು ಆಗುವುದಿಲ್ಲ-ಡಿಕೆಶಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜಕೀಯ ಪ್ರೇರಿತವಾದ ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್​​ ವಿರುದ್ಧದ ಪ್ರತಿಭಟನೆಯಿಂದ ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡಲು ಆಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹರಿಹಾಯ್ದರು.

- Advertisement - 

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕುಮಾರಸ್ವಾಮಿ ಕಾಲದಲ್ಲಿ ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ಯೋಜನೆ ಮಂಜೂರಾತಿ ಆಗಿದೆ. ಯಡಿಯೂರಪ್ಪ ಅಧಿಕಾರದಲ್ಲಿ ಯೋಜನೆಗೆ ತಡೆ ನೀಡಿದ್ದರು. ಆಗ ಯೋಜನೆ ವೆಚ್ಚ 600 ಕೋಟಿ ರೂ ಇತ್ತು.‌ ಈಗ ಯೋಜನಾ ವೆಚ್ಚ ಸುಮಾರು 900 ಕೋಟಿ ರೂ‌.ನಿಂದ ಸಾವಿರ ಕೋಟಿಗೆ ತಲುಪಿದೆ. ಈಗಾಗಲೇ 400 ಕೋಟಿ ರೂ. ಬಿಡುಗಡೆಯಾಗಿ‌ ಕೆಲಸ ಆರಂಭವಾಗಿದೆ ಎಂದು ಡಿಸಿಎಂ ತಿಳಿಸಿದರು.

- Advertisement - 

ತುಮಕೂರು ಜಿಲ್ಲೆಗೆ ಸೇರಿರುವ ಕುಣಿಗಲ್ ಜ​​ನರಿಗೆ ಶೇ.91ರಷ್ಟು ಕುಡಿಯುವ ನೀರಿನ ಸಮಸ್ಯೆ ಇದೆ. 2014ರಿಂದ ಇಲ್ಲಿವರೆಗೆ ಕುಣಿಗಲ್​​ಗೆ ನೀರು ಹೋಗಬೇಕಿತ್ತು. ಅದರೆ ಶೇ. 10ರಷ್ಟು ನೀರೂ ಹೋಗಿಲ್ಲ. ಹೇಮಾವತಿ ಎಕ್ಸ್‌ಪ್ರೆಸ್‌ ಕೆನಾಲ್ ಯೋಜನೆಯಿಂದ ತುಮಕೂರು ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ.‌ ಕುಣಿಗಲ್​​ಗೆ 3 ಟಿಎಂಸಿ ಹಾಗೂ ಮಾಗಡಿಗೆ 0.6 ಟಿಎಂಸಿ ನೀರು ಹೋಗಲಿದೆ. ರಾಮನಗರಕ್ಕೆ ಈ ನೀರಿನ ಅವಶ್ಯಕತೆ ಇಲ್ಲ ಎಂದು ಉಪಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.

ಈ ಯೋಜನೆ ಜಾರಿಗೆ ಅಡ್ಡಿ ಮಾಡುತ್ತಿರುವ ಬಿಜೆಪಿಯವರಿಗೆ ಅಸೂಯೆ ಅಷ್ಟೇ. ಅಂತರರಾಜ್ಯ ವಿಚಾರ ಇದಲ್ಲ‌. ತಾಂತ್ರಿಕ ತಂಡ ರಚಿಸಲು ತುಮಕೂರು ಶಾಸಕರು ಮನವಿ ಮಾಡಿದ್ದರು. ಅದರಂತೆ ಸಮಿತಿ ರಚಿಸಿ, ತಾಂತ್ರಿಕ ವರದಿಯೂ ಬಂದಿದೆ. ಈ ಹಂತದಲ್ಲಿ ಅವರು ಕಾನೂನು ಕೈಗೆ ತಗೊಂಡ್ರೆ ಹೇಗೆ? ಎಂದು ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

- Advertisement - 

ನೀವು ಏನು ಶಬ್ದ ಬಳಸಿದ್ದೀರಿ. ಅದಕ್ಕಿಂತ ದೊಡ್ಡ ಶಬ್ದ ಬಳಸುವ ಶಕ್ತಿ ನನಗೆ ಇದೆ. ಆದರೆ ನಾನು ಆ ಬಗ್ಗೆ ಮಾತನಾಡುವುದಿಲ್ಲ. ಜನರ ಹಿತಕ್ಕೆ ನಾವು ಇರುವುದು‌. ಕುಣಿಗಲ್ ಅವರು ಬೇರೆಯವರ?. ಅವರೂ ತುಮಕೂರಿನವರು. ನೀವು ಸರ್ಕಾರವನ್ನು ಬ್ಲ್ಯಾಕ್ ಮೇಲ್ ಮಾಡಲಾಗುವುದಿಲ್ಲ. ನೀವು ಏಕೆ ಎಲ್ಲಾ ಸ್ವಾಮೀಜಿಗಳನ್ನು ಕರೆಸುತ್ತಿದ್ದೀರ?. ಸ್ವಾಮೀಜಿಗಳಿಗೂ ಇದಕ್ಕೂ ಸಂಬಂಧ ಏನು?. ಕಾನೂನು ಕೈಗೆ ತೆಗೆದುಕೊಳ್ಳಲು ಆಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ರಾಮನಗರಕ್ಕೆ ನೀರಿನ ಅವಶ್ಯಕತೆ ಇಲ್ಲ. ರಾಮನಗರಕ್ಕೆ ಯಾವುದೇ ನೀರನ್ನು ಕೊಂಡೊಯ್ಯುವುದಿಲ್ಲ. ತಮಕೂರುಗೆ ಕೃಷ್ಣಾ ನದಿಯಿಂದ ನೀರು ತೆಗೆದುಕೊಳ್ಳುತ್ತಿದ್ದಾರೆ. ಅವರು ಹೇಗೆ ಕೃಷ್ಣಾ ಜಲಾನಯನ ಪ್ರದೇಶದ ನೀರನ್ನು ತೆಗೆದುಕೊಳ್ಳುತ್ತಾರೆ?. ಎತ್ತಿನ‌ಹೊಳೆ ನೀರನ್ನು ತಮಕೂರಿಗೆ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ಮಹಾರಾಷ್ಟ್ರ ಸಿಎಂ ಆಕ್ಷೇಪ:
ಮಹಾರಾಷ್ಟ್ರ ಸಿಎಂ ಫಡ್ನವೀಸ್ ಅವರು ಆಲಮಟ್ಟಿ ಅಣೆಕಟ್ಟು ಎತ್ತರಿಸದಂತೆ ನಮ್ಮ ಸಿಎಂಗೆ ಪತ್ರ ಬರೆದು ಆಕ್ಷೇಪಿಸಿದ್ದಾರೆ. ಮಹಾರಾಷ್ಟ್ರ ಸಿಎಂ ಬರೆದ ಪತ್ರ ಆಘಾತ ಉಂಟು ಮಾಡಿದೆ. ಮಹಾರಾಷ್ಟ್ರ ಸರ್ಕಾರ ಹೊಸದಾಗಿ ಕ್ಯಾತೆ ತೆಗೆದಿರುವುದು ಅಚ್ಚರಿ ಉಂಟು ಮಾಡಿದೆ ಎಂದು ಡಿಸಿಎಂ ಶಿವಕುಮಾರ್ ಕಳವಳ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮೇ 9ರಂದು ಬರೆದ ಪತ್ರದ ಪ್ರಕಾರ ಆಲಮಟ್ಟಿ ಅಣೆಕಟ್ಟೆಯ ಎಫ್ ಆರ್ ಎಲ್ ಎತ್ತರ ಹೆಚ್ಚಳದಿಂದ ಹಿನ್ನೀರು ಏರಿಕೆಯಾಗಿ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಹಾಪುರ ಮತ್ತಿತರ ಭಾಗಗಳಲ್ಲಿ ಪ್ರವಾಹ ಸೃಷ್ಟಿಯಾಗಿ ತೊಂದರೆಯಾಗಲಿದ್ದು, ಉದ್ದೇಶಿತ ಎತ್ತರ ಹೆಚ್ಚಳ ಕೈಬಿಡಲು ಕೋರಿದ್ದಾರೆ. ಕೃಷ್ಣಾ ಎರಡನೇ ನ್ಯಾಯಾಧಿಕರಣ ಐತೀರ್ಪಿನ ಅಧಿಸೂಚನೆ ಕುರಿತು ಕೇಂದ್ರ ಜಲಶಕ್ತಿ ಸಚಿವರು ಮೇ 7ರಂದು ನಾಲ್ಕು ರಾಜ್ಯಗಳ ಸಭೆ ನಿಗದಿ ಮಾಡಿದ್ದರು. ಅನಿವಾರ್ಯ ಕಾರಣಗಳಿಂದ ಈ ಸಭೆ ಹಠಾತ್ ಮುಂದೂಡಿಕೆಯಾಗಿದೆ ಎಂಬ ಮಾಹಿತಿ ನೀಡಲಾಯಿತು. ದೆಹಲಿಗೆ ಹೋದರೂ ಮುಂಚಿತವಾಗಿ ಕಾಲಾವಕಾಶ ಪಡೆದಿದ್ದ ಕೇಂದ್ರ ಸಚಿವರಿಗೆ ಭೇಟಿಯಾಗಿ ವಾಪಸ್ಸಾಗಬೇಕಾಯಿತು ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಹೊಸದಾಗಿ ಮಹಾರಾಷ್ಟ್ರ ತಗಾದೆ ತೆಗೆದಿರುವುದರಲ್ಲಿ ರಾಜಕೀಯ ಬೆರೆಸಲು ಬಯಸಲ್ಲ. ನೆರೆಯ ರಾಜ್ಯಗಳ ಜತೆಗೆ ಜಗಳಕ್ಕಿಂತ ರಾಜ್ಯದ ಹಿತ ಮುಖ್ಯ. ಆದರೆ ಕೇಂದ್ರ ಜಲಶಕ್ತಿ ಸಚಿವರು ಕರೆದಿದ್ದ ನಾಲ್ಕು ರಾಜ್ಯಗಳ ಸಭೆಯು ದಿಢೀರ್ ರದ್ದಾದ ಎರಡೇ ದಿನಗಳಲ್ಲಿ ಮಹಾ ಸಿಎಂ ಆಕ್ಷೇಪ ಎತ್ತಿ ರಾಜ್ಯದ ಸಿಎಂಗೆ ಪತ್ರ ಬರೆದಿದ್ದು ಅಚ್ಚರಿ ಮೂಡಿಸಿದೆ. ಕೃಷ್ಣಾ ಎರಡನೇ ನ್ಯಾಯಾಧಿಕರಣವು ಬಿ ಸ್ಕೀಮ್ ನಡಿ ಹೆಚ್ಚುವರಿ ನೀರು ಹಂಚಿಕೆಗೆ ನಡೆದ ವಿಚಾರಣೆ, ಅಂತಿಮ ತೀರ್ಪು, ಸ್ಪಷ್ಟೀಕರಣದ ಆದೇಶ ನೀಡುವ ಸಂದರ್ಭದಲ್ಲಿ ಮಹಾರಾಷ್ಟ್ರ ಆಲಮಟ್ಟಿ ಅಣೆಕಟ್ಟೆ ಎತ್ತರ ಹೆಚ್ಚಳಕ್ಕೆ ಅಪಸ್ವರ ತೆಗೆದಿಲ್ಲ. ಅಂತಿಮ ಅಧಿಸೂಚನೆಗೆ ಸುಪ್ರೀಂ ಕೋರ್ಟ್​ನಲ್ಲಿ ರಾಜ್ಯದ ಕಾನೂನು ಹೋರಾಟಕ್ಕೆ ಕೈಜೋಡಿಸಿದೆ (ಇಂಪ್ಲಾಯ್ಡ್) ಅಷ್ಟೇ ಅಲ್ಲ, ಯಾವುದೇ ಮಧ್ಯಂತರ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಕೃಷ್ಣಾ ಪ್ರವಾಹದಿಂದ ರಾಜ್ಯದಲ್ಲಿ ಆಂತರಿಕವಾಗಿ ತಲೆದೋರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೇವೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಪ್ರವಾಹ ಉಂಟಾದರೆ ಅವರ ಆಂತರಿಕ ಸಮಸ್ಯೆ ಅವರೇ ಬಗೆಹರಿಸಿಕೊಳ್ಳಬೇಕು ಎಂದು ಡಿಸಿಎಂ ತಾಕೀತು ಮಾಡಿದರು.

ಮಹಾರಾಷ್ಟ್ರದ ಸಿಎಂ ಪತ್ರ ಕುರಿತು ಸಿಎಂ ಸಿದ್ದರಾಮಯ್ಯ ಜತೆಗೆ ಚರ್ಚಿಸಿದ್ದು, ಒಂದೆರಡು ದಿನಗಳಲ್ಲಿ ಪ್ರತ್ಯುತ್ತರವಾಗಿ ಸಿಎಂ ಪತ್ರ ಬರೆಯಲಿದ್ದಾರೆ. ಕೃಷ್ಣಾ ಎರಡನೇ ನ್ಯಾಯಾಧಿಕರಣ ರಾಜ್ಯಕ್ಕೆ ಹಂಚಿಕೆ ಮಾಡಿದ ನೀರು ನಮ್ಮದು, ಅದನ್ನು ಬಳಕೆ ಮಾಡುವುದು ನಮ್ಮ ಹಕ್ಕು. ಈ ವಿಷಯದಲ್ಲಿ ಅಗತ್ಯಬಿದ್ದರೆ ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಲಾಗುವುದು. ನಮ್ಮ ಪಾಲಿನ ನೀರು ಬಳಕೆ ಉದ್ದೇಶಿತ ಯೋಜನೆಗಳಿಗೆ ಬೇಕಾದ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಅಂದಾಜು ವೆಚ್ಚದ ಗಾತ್ರ ಒಂದು ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಮತ್ತಷ್ಟು ಅಡೆತಡೆಯಿಂದ ಯೋಜನೆಗಳ ಅನುಷ್ಠಾನ, ನೀರು ಬಳಕೆಗೆ ಅಡ್ಡಿಯಾಗಲಿದೆ. ಜತೆಗೆ ಯೋಜನಾಗಾತ್ರವು ಹೆಚ್ಚಲಿದೆ ಎಂಬ ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಚಿವರು, ಸಂಸದರ ಜವಾಬ್ದಾರಿ ದೊಡ್ಡದಿದೆ. ಪ್ರಧಾನಿ, ಜಲಶಕ್ತಿ ಸಚಿವರ ಮೇಲೆ ಒತ್ತಡ ತರಬೇಕು. ಭೇಟಿಗೆ ಕಾಲಾವಕಾಶ ಪಡೆದು, ರಾಜ್ಯದ ನಿಲುವು, ಮಹಾರಾಷ್ಟ್ರ ಇಷ್ಟು ದಿನ ಮೌನವಹಿಸಿ ಈಗ ತಕರಾರು ತೆಗೆದಿದ್ದರಲ್ಲಿ ಹುರುಳಿಲ್ಲವೆಂದು ಮನವರಿಕೆಗೆ ಅನುವು ಮಾಡಿಕೊಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.

 

 

Share This Article
error: Content is protected !!
";