ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸುಮಾರು ವರ್ಷಗಳಿಂದ ಅರ್ಕಾವತಿ ನದಿ ಹೋರಾಟ ಸಮಿತಿಯ ಸತತ ಹೋರಾಟದ ಫಲವಾಗಿ ಬೆಂಗಳೂರಿನಲ್ಲಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಕಛೇರಿ ದೊಡ್ಡಬಳ್ಳಾಪುರಕ್ಕೆ ಸ್ಥಳಾಂತರಗೊಂಡಿದೆ. ಕಛೇರಿ ಉದ್ಘಾಟನೆಯಾಗಿ 12 ದಿನಗಳಾಗಿದ್ದು, ಉದ್ಘಾಟನೆ ದಿನ ಕಚೇರಿಗೆ ಹಾಕಿದ ಬೀಗ ಇನ್ನೂ ತೆಗೆದಿಲ್ಲ. ಹೀಗಾಗಿ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಹೋರಾಟಗಾರರು ಕಛೇರಿ ಮುಂದೆಯೇ ದಸರಾದ ಆಯುಧ ಪೂಜೆ ಯಲ್ಲಿ ಬೂದುಕುಂಬಳ ಕಾಯಿ ಹೊಡೆದು ಹರಿಸಿ ಕುಂಕುಮ ಇಟ್ಟು ಹೂಗಳಿಂದ ಸಿಂಗಾರ ಮಾಡಿ ಪೂಜೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಅರ್ಕಾವತಿ ನದಿ ಹೋರಾಟ ಸಮಿತಿ ಸದಸ್ಯ ವಸಂತ್ ಮಾತನಾಡಿ, ಅ.20ರಂದು ಕಾಟಾಚಾರಕ್ಕೆ ಕಚೇರಿ ಉದ್ಘಾಟಿಸಲಾಗಿದೆ. ಪೂಜೆ ಮಾಡಿ ಹೋದ ಅಧಿಕಾರಿಗಳು ಇಲ್ಲಿಯವರೆಗೂ ಕಛೇರಿ ಬಾಗಿಲು ತೆಗಿದಿಲ್ಲ, ಅಧಿಕಾರಿಗಳಿಗೆ ದೃಷ್ಟಿಯಾಗಿದೆ ಎಂದು ಯಾರೋ ಹೇಳಿದ್ರು, ದೃಷ್ಟಿ ನಿವಾರಣೆಗಾಗಿ ಪೂಜೆ ಮಾಡಲಾಗಿದೆ. ಕಛೇರಿ ಬಾಗಿಲು ತೆಗೆಯದಿದ್ದರೆ ಮಾಲಿನ್ಯ ನಿಯಂತ್ರಣ, ಮಂಡಳಿಯ ಶವಯಾತ್ರೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡ ರಮೇಶ್ ಮಾತನಾಡಿ, ನಮ್ಮೂರಿನ ಕೆರೆ ಸಂರಕ್ಷಣೆಗಾಗಿ, ಶುದ್ಧ ನೀರಿಗಾಗಿ ನಾವು ಉರುಳು ಸೇವೆ, ಕಪ್ಪು ಪಟ್ಟಿ ಪ್ರದರ್ಶನ, ಉಪವಾಸ ಸತ್ಯಾಗ್ರಹ ಮಾಡಿದ್ದೇವೆ. ನಮ್ಮ ಹೋರಾಟ ಫಲ ಕಛೇರಿ ದೊಡ್ಡಬಳ್ಳಾಪುರ ಕ್ಕೆ ಸ್ಥಳಾಂತರಗೊಂಡಿದೆ. ಜಿಲ್ಲಾಧಿಕಾರಿ . ಮತ್ತು ಶಾಸಕರ ಮಾತಿಗೂ ಬೆಲೆ ಕೊಡದ ಅಧಿಕಾರಿಗಳು ನಿರ್ಲಕ್ಷ್ಯ ತೋರಿಸಿದ್ದಾರೆ. ಅವರಿಗೆ ಕೆಲಸ ಮಾಡಲು ಇಷ್ಟ ಇಲ್ಲದಿದ್ದಾರೆ ರಾಜೀನಾಮೆ ಕೊಟ್ಟು ಹೋಗಲಿ, ನಿರುದ್ಯೋಗಿ ಯುವಕರಿಗೆ ಉದ್ಯೋಗವಾದರು ಸಿಗುತ್ತದೆ ಎಂದರು.
ಕೈಗಾರಿಕಾ ಪ್ರದೇಶದ ಸುತ್ತ ಮುತ್ತಲಿನ ದೊಡ್ಡ ದೊಡ್ಡ ಕಾರ್ಖಾನೆ ಬಿಡುವ ರಾಸಾಯಿನಿಕ ಮಿಶ್ರಿತ ತ್ಯಾಜ್ಯ ನೀರನ್ನು ತಡೆದು ಪರಿಸರ ಕಾಪಾಡುವುದು ಸರ್ಕಾರದ ಕರ್ತವ್ಯ. ಮಾಲಿನ್ಯ ತಡೆಯುವ ಕಾರಣಕ್ಕಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ರಚನೆಯಾಗಿದೆ. ಆದರೆ ಇದರಲ್ಲಿರುವ ಅಧಿಕಾರಿಗಳು ಕಾರ್ಖಾನೆಗಳ ಮಾಲಿಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯತೆ ಯಿಂದಾಗಿ ನಮ್ಮೂರಿನ ಕುಡಿಯುವ ನೀರು, ಸೇವಿಸುವ ಗಾಳಿ. ಪರಿಸರವು ಸಹಿತ ವಿಷವಾಗಿದೆ. ಶೀಘ್ರ ಕಚೇರಿ ಪ್ರಾರಂಭವಾಗದಿದ್ದಾರೆ ಮುಖ್ಯ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ. ಸತೀಶ್, ಸದಸ್ಯರು, ಅರ್ಕಾವತಿ ನದಿ ಹೋರಾಟ ಸಮಿತಿ ಹೋರಾಟಗಾರ.

