ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ನಗರದ ಸ್ವಾಮಿ ವಿವೇಕಾನಂದ ನಗರ ಸರ್ಕಾರಿ ಶಾಲೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಮತ್ತು ಪೋಕ್ಸೋ ಕಾಯ್ದೆ ಕುರಿತು ಮಂಗಳವಾರ ಜಾಗೃತಿ ಕಾರ್ಯಕ್ರಮ ನಡೆಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ್ ಮಾತನಾಡಿ, ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವವರೆಗೆ ಮದುವೆ ಮಾಡಬಾರದು. ಶಿಕ್ಷಣ ಕೊಡಿಸಬೇಕು. ಮೊರಾರ್ಜಿ ವಸತಿ ಶಾಲೆ, ನವೋದಯ ಇತ್ಯಾದಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರ ಉಚಿತ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಇದರ ಸದುಪಯೋಗಪಡಿಸಿಕೊಳ್ಳಬೇಕು.
ಬಾಲ್ಯ ವಿವಾಹ ಪ್ರಕರಣಗಳು ಕಂಡು ಬಂದಲ್ಲಿ ಬೇಜವಾಬ್ದಾರಿ ಮಾಡದೆ ಸಂಬಂಧಪಟ್ಟ ಬಾಲ್ಯ ವಿವಾಹ ನಿಷೇಧಾಧಿಕಾರಿಗಳಿಗೆ, ಮಕ್ಕಳ ಸಹಾಯವಾಣಿ 1098 ಗೆ ಮಾಹಿತಿ ನೀಡಬೇಕು.
ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಮಾತನಾಡಿ, ಬಾಲ್ಯ ವಿವಾಹ ಕಡಿಮೆ ಮಾಡಲು ತಾಯಂದಿರು ಮತ್ತು ಕಿಶೋರಿಯರಿಬ್ಬರೂ ಜಾಗೃತರಾಗಬೇಕು. ಮೊಬೈಲ್ ತಂತ್ರಜ್ಞಾನವನ್ನು ಧನಾತ್ಮಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕಿ ನಿರ್ಮಲ, ಜೆಂಡರ್ಸ್ ಸ್ಪೆಷಲಿಸ್ಟ್ ಗೀತಾ, ಮಕ್ಕಳ ರಕ್ಷಣಾ ಘಟಕ ರೇಣುಕಾ, ಶಾಲಾ ಮುಖ್ಯೋಪಾಧ್ಯಾಯ ಷಣ್ಮುಖಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಸಾವಿತ್ರಮ್ಮ, ರಾಜಮ್ಮ, ವಿದ್ಯಾ ಇದ್ದರು.