ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿ ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಿದ ಪ್ರಹ್ಲಾದ್ ಜೋಶಿ

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು/ಬೆಂಗಳೂರು:
ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಅಗತ್ಯ ವಸ್ತುಗಳಾದ ಹಾಲು, ವಿದ್ಯುತ್, ಪೆಟ್ರೋಲ್, ಡೀಸೆಲ್, ನೋಂದಣಿ ಶುಲ್ಕ, ಪಹಣಿ ಸೇರಿದಂತೆ ಮತ್ತಿತರ ದರ ಏರಿಕೆ ಜೊತೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಮತ್ತು ಬೆಲೆ ಏರಿಕೆ ವಿಪರೀತವಾಗಿದೆ ಎಂದು ಆರೋಪಿಸಿ ಬಿಜೆಪಿ ಆಯೋಜಿಸಿರುವ 16 ದಿನಗಳ ಜನಾಕ್ರೋಶ ಯಾತ್ರೆಯು ಇಂದಿನಿಂದ ಮೈಸೂರಿನಲ್ಲಿ ಚಾಲನೆ ನೀಡಿ ಸರ್ಕಾರದ ವಿರುದ್ದ ರಣಕಹಳೆ ಮೊಳಗಿಸಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಿನ ಅಧಿದೇವತೆ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಿದರು.

ಪಾದಯಾತ್ರೆ-ಸೆಂಟ್ರಲ್ ಪೋಸ್ಟ್ ಆಫೀಸ್ ವೃತ್ತದಿಂದ ಅಶೋಕ ಮಾರ್ಗವಾಗಿ ಗಾಂಧಿ ಚೌಕದವರೆಗೆ ಪಾದಯಾತ್ರೆ ನಡೆಸಲಾಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು. ಗಾಂಧಿ ಚೌಕದ ಬಳಿ ತೆರೆದ ವಾಹನದಲ್ಲಿ ನಾಯಕರು ಜನರನ್ನುದ್ದೇಶಿಸಿ ಮಾತನಾಡಿದರು. ಬೆಲೆ ಏರಿಕೆ ಮಾತ್ರವಲ್ಲದೆ, ಮುಸ್ಲಿಂ ಓಲೈಕೆ, ದಲಿತರ ಹಣ ಲೂಟಿ, ರೈತರನ್ನು ಕಡೆಗಣಿಸಿದ ಭ್ರಷ್ಟ ಕಾಂಗ್ರೆಸ್ ಸರಕಾರ ಎಂದು ಆರೋಪಿಸಿರುವ ಬಿಜೆಪಿ ಏ. 7 ರಿಂದ ಮೇ 3 ರವರೆಗೆ ಅಂದರೆ 16 ದಿನಗಳ ಕಾಲ ಒಟ್ಟು 4 ಹಂತಗಳ ಹೋರಾಟ ರೂಪಿಸಿದೆ.

ಯಾಕೆ ಜನಾಕ್ರೋಶ ಯಾತ್ರೆ ? :
ಒಟ್ಟು ನಾಲ್ಕು ಹಂತಗಳಲ್ಲಿ ಯಾತ್ರೆ ನಡೆಯಲಿದೆ. ಏಪ್ರಿಲ್ 7ರಿಂದ 10ರವರೆಗೆ ಮೊದಲ ಹಂತದಲ್ಲಿ ಮೈಸೂರು
, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು, ಮಂಗಳೂರು, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಯಾತ್ರೆ ನಡೆಯಲಿದೆ. ಏಪ್ರಿಲ್ 13ರಿಂದ 18ರವರೆಗೆ ಎರಡನೇ ಹಂತದಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಯಾತ್ರೆ ನಡೆಯಲಿದೆ.

ಏಪ್ರಿಲ್ 21ರಿಂದ 24ರವರೆಗೆ ಮೂರನೇ ಹಂತದಲ್ಲಿ ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ, ಗದಗ, ಹಾವೇರಿ, ದಾವಣಗೆರೆ ಹಾಗೂ ಏ.27ರಿಂದ ಮೇ 3ರವರೆಗೆ ನಾಲ್ಕನೇ ಹಂತದಲ್ಲಿ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಯಾತ್ರೆ ಸಾಗಲಿದೆ.

ರಾಜ್ಯದಲ್ಲಿ ಕಳೆದ ಇಪ್ಪತ್ತು ತಿಂಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆ ನಿರಂತರವಾಗಿದೆ. ಸಾಮಾನ್ಯ ಜನರಿಗೆ ಬರೆ ಎಳೆಯುವ ಕೆಲಸವಾಗುತ್ತಿದೆ. ದುಬಾರಿ ಜೀವನವನ್ನು ನಾಡಿನ ಜನ ನಡೆಸುವ ದುಸ್ಥಿತಿ ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿದೆ. ಉಸಿರಾಡುವ ಗಾಳಿ ಬಿಟ್ಟರೆ ಉಳಿದ ಎಲ್ಲವುಗಳ ಬೆಲೆ ಏರಿಕೆ ನಿರಂತರವಾಗಿದೆ.ಮತದಾರರಿಗೆ ವರದಾನ ಆಗುವ ಬದಲು ಸರ್ಕಾರ ಶಾಪಗ್ರಸ್ಥವಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ವಿದ್ಯುತ್ ದರ ಏ. 1ರಿಂದ ಪ್ರತಿ ಯೂನಿಟ್‌ಗೆ 36 ಪೈಸೆ ಜಾಸ್ತಿ ಮಾಡಿದ್ದಾರೆ. ಹಾಲಿನ ದರ ನಾಲ್ಕು ರೂಪಾಯಿ ಜಾಸ್ತಿ ಮಾಡಿದ್ದಾರೆ. ಈಗಾಗಲೇ ಮೂರನೇ ಬಾರಿ ಜಾಸ್ತಿ ಮಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲೂ ಚಿಕಿತ್ಸೆ ದರ ಜಾಸ್ತಿ ಮಾಡಿದ್ದಾರೆ. ಬಡವರು, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುವ ಜನರಿಗೂ ಬರೆ ಎಳೆಯುತ್ತಿದೆ. ಅಫಿಡವಿಟ್, ಮುದ್ರಾಂಕ ಶುಲ್ಕ, ವೃತ್ತಿಪರ ತೆರಿಗೆ, ಬಸ್ ದರ ಜಾಸ್ತಿ ಮಾಡಿದ್ದಾರೆ. ರಾಜ್ಯದ ಜನತೆಯ ಮೇಲೆ ಬೆಲೆ ಏರಿಕೆಯ ಹೊರೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನಡೆಯನ್ನು ಖಂಡಿಸಿ ಜನಾಕ್ರೋಶ ಯಾತ್ರೆಯನ್ನು ನಡೆಸುತ್ತಿದೆ.

38,060 ಕೋಟಿ ರೂ. ಎಸ್‌ಸಿಟಿಪಿಎಸ್ ಹಣ ದುರುಪಯೋಗವಾಗಿದೆ. ಇದನ್ನು ನಾವು ಖಂಡಿಸುತ್ತಿದ್ದೇವೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಎರಡು ಪ್ರಮುಖ ಹೋರಾಟ ಮಾಡುತ್ತೇವೆ. ಏ. 7ರಂದು ಮೈಸೂರು ಭಾಗದಲ್ಲಿ ಹೋರಾಟ ನಡೆಯುತ್ತದೆ. 8ರಂದು ಮಂಡ್ಯ, 9ರಂದು ಕೊಡಗು, ಮಂಗಳೂರು, 10ರಂದು ಉಡುಪಿ, ಚಿಕ್ಕಮಗಳೂರಿನಲ್ಲಿ ಹೋರಾಟ ಮಾಡುತ್ತೇವೆ. 2ನೇ ಹಂತದ ಹೋರಾಟ ಶಿವಮೊಗ್ಗದಿಂದ 13ರಂದು ಆರಂಭವಾಗುತ್ತದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್‌ನವರು ಮುಸ್ಲಿಂ ಒಲೈಕೆಗಾಗಿ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.

ಅಯೋಗ್ಯ ಕಾಂಗ್ರೆಸ್ ಸರಕಾರದ ಬೆಲೆ ಏರಿಕೆ, ಮುಸ್ಲಿಮರಿಗೆ ಸರಕಾರಿ ಕಾಮಗಾರಿಗಳಲ್ಲಿ ಮೀಸಲಾತಿ, ದಲಿತರ ಅಭ್ಯುದಯಕ್ಕೆ ಮೀಸಲಿಟ್ಟ ಎಸ್‌ಇಪಿ, ಟಿಎಸ್‌ಪಿ ಹಣದ ವಿಚಾರದಲ್ಲಿ ದೋಖಾ ಸೇರಿ ಜನವಿರೋಧಿ ನೀತಿಯನ್ನು ರಾಜ್ಯದ ಜನರಿಗೆ ತಿಳಿಸುತ್ತೇವೆ. ಬಿಜೆಪಿ- ಜೆಡಿಎಸ್ ಮಧ್ಯೆ ಒಡಕಿಲ್ಲ, ಇದು ನಮ್ಮ ಪಕ್ಷದ ಹೋರಾಟ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.

ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಬಿಜೆಪಿ ಈಗ ವಿಶ್ವದ ಅತಿ ದೊಡ್ಡ ಪಕ್ಷವೆನಿಸಿದೆ. ದೇಶದಲ್ಲಿ 400ಕ್ಕೂ ಹೆಚ್ಚು ಸಂಸದರಿದ್ದ ಕಾಂಗ್ರೆಸ್ ಪಕ್ಷಕ್ಕೆ ಇವತ್ತು ಎಂಥ ಪರಿಸ್ಥಿತಿ ಬಂದಿದೆ. ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿಲ್ಲ. ಬಿಜೆಪಿ ಸುಭದ್ರವಾಗಿದೆ ಎಂದು ತಿರುಗೇಟು ನೀಡಿದರು.

ಪಕ್ಷದ ಅಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಬಿ. ಶ್ರೀರಾಮುಲು, ಬೈರತಿ ಬಸವರಾಜು, ಸಿ.ಟಿ. ರವಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಹಾಲಿ ಸಂಸದ ಯದವೀರ ಒಡೆಯರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

 

Share This Article
error: Content is protected !!
";