ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಯಾವುದೇ ಒಂದು ಸಂಸ್ಥೆ, ಸಮುದಾಯ, ಸಮಾಜ ಅಥವಾ ವ್ಯವಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಲು ದಕ್ಷ ನಾಯಕತ್ವ ಅಗತ್ಯ. ನಗರ- ಪಟ್ಟಣದ ಸಣ್ಣ ಭಾಗಗಳು, ಹಳ್ಳಿಗಳು ಸೇರಿದಂತೆ ಕೆಳ ಹಂತದಲ್ಲಿಯೇ ಸ್ಥಳೀಯವಾಗಿ ಸಮರ್ಥ ನಾಯಕರು ರೂಪುಗೊಳ್ಳಬೇಕಿದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಲ್ಲಿ ನಾಯಕತ್ವದ ಗುಣ ಬೆಳೆಸಬೇಕೆಂದು ಪ್ರಜಾಕೀಯ ವೆಂಕಟೇಶ್ ಹೇಳಿದರು.
ಇಲ್ಲಿನ ಶರಾವತಿ ನಗರದ ಇನ್‌ಫೆಂಟ್ ಜೀಸಸ್ ನರ್ಸರಿ ಮತ್ತು ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಇತ್ತೀಚೆಗೆ ಸದರಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳು ನಾಳಿನ ಪ್ರಜೆಗಳಷ್ಟೇ ಅಲ್ಲ, ನಾಯಕರೂ ಸಹ ಆಗಲಿದ್ದಾರೆ. ಎಲ್ಲಾ ಮಕ್ಕಳು ನಾಯಕರಾಗಲು ಸಾಧ್ಯವಿಲ್ಲವಾದರೂ ಉತ್ತಮ, ಸಮರ್ಥ ನಾಯಕ ಅಥವಾ ಪ್ರಜಾ ಪ್ರತಿನಿಧಿಗಳನ್ನು ಗುರುತಿಸಿ, ಆಯ್ಕೆ ಮಾಡುವ ಮಟ್ಟಿಗೆ ಮಕ್ಕಳ ಮನಸ್ಥಿತಿ ರೂಪಿಸಬೇಕೆಂದರು.
ಉತ್ತಮ ನಾಯಕತ್ವದಿಂದ ಸಮುದಾಯದ ಅಭಿವೃದ್ಧಿ ಸಾಧ್ಯ. ಸಮುದಾಯದ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಮಕ್ಕಳ ಭವಿ?ವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಶಿಸ್ತು, ಸಂಯಮ, ಸಮಯ ಪ್ರಜ್ಞೆಯೊಂದಿಗೆ ನಾಯಕತ್ವದ ಗುಣ ಬೆಳೆಸಬೇಕೆಂದು ಆಶಿಸಿದರು.
ರಾಷ್ಟ್ರ ಹಾಗೂ ರಾಜ್ಯ ಸಾಕಷ್ಟು ಪ್ರಗತಿ ಹೊಂದಿದರೂ ಅಸಂಖ್ಯಾತ ದುರ್ಬಲರು, ಬಡವರು ಅಸಹಾಯಕ ಬದುಕು ಸಾಗಿಸುತ್ತಿದ್ದಾರೆ. ಮನುಷ್ಯನಲ್ಲಿ ಮಾನವೀಯತೆ, ಅಂತಕರಣ, ತ್ಯಾಗ, ಉದಾರತೆಯಂತಹ ಗುಣಗಳು ಕಡಿಮೆಯಾಗುತ್ತಿರುವುದೂ ಸಹ ಇದಕ್ಕೆ ಕಾರಣ. ಆದ್ದರಿಂದ ಉಳ್ಳವರು ಇಲ್ಲದವರ ನೆರವಿಗೆ ಧಾವಿಸುವಂತಾಗಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಸಾಮಾಜಿಕ ಮೌಲ್ಯಗಳು ಮೈಗೂಡುವಂತೆ ಅವರ ವ್ಯಕ್ತಿತ್ವ ರೂಪಿಸಬೇಕೆಂದರು. ವಿದ್ಯಾರ್ಥಿಗಳ ಪ್ರತಿಭೆ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾಗಿರುವುದಿಲ್ಲ.
ನಾನಾ ಕ್ಷೇತ್ರಗಳಲ್ಲಿಯೂ ಪ್ರತಿಭಾನ್ವಿತರು ಇರುತ್ತಾರೆ. ಈ ಹಿನ್ನೆಲೆಯಲ್ಲಿ ಪೋಷಕರು ಹಾಗೂ ಶಿಕ್ಷಕರು ಮಕ್ಕಳ ಅಭಿರುಚಿ ಗಮನದಲ್ಲಿಟ್ಟುಕೊಂಡು ಕಲಿಕೆಯಲ್ಲಿ ತೊಡಗಿಸಬೇಕು. ಆಗ ಮಾತ್ರ ಕಲಿಕೆ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದು ಹೇಳಿದರು.
ನಾವು ಓದಿದ ಶಾಲೆಯ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವುದು ಸಂತಸ ತರುತ್ತದೆ. ಪ್ರಾಥಮಿಕ ಹಂತದಲ್ಲಿಯೇ ಈ ಶಾಲೆಯ ಶಿಕ್ಷಕರು ನನ್ನಲ್ಲಿ ನಾಯಕತ್ವ ಗುಣ, ಸಾಮಾಜಿಕ ಜವಾಬ್ದಾರಿ ಕಲಿಸಿದ್ದರಿಂದ ಸಮಾಜಮುಖಿಯಾಗಿರಲು ಸಾಧ್ಯವಾಗಿದೆ ಎಂದರು.
ಇನ್‌ಫೆಂಟ್ ಜೀಸಸ್ ಶಾಲೆಯ ಮಕ್ಕಳು ಶರಾವತಿ ನಗರದ ಚಾನಲ್ ಭಾಗದಲ್ಲಿ ಸ್ವಚ್ಛತೆ, ಹಸಿರೀಕರಣದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಾಮಾಜಿಕ ಬದ್ಧತೆ ಮೆರೆದಿದ್ದಾರೆ. ಈ ಶಾಲಾ ಮಕ್ಕಳು ಶರಾವತಿ ನಗರವನ್ನು ದತ್ತು ಪಡೆದು ಶಿವಮೊಗ್ಗ ನಗರದಲ್ಲಿಯೇ ಮಾದರಿ ವಾರ್ಡನ್ನಾಗಿ ರೂಪಿಸಬೇಕೆಂದರು.
ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ ಅಧ್ಯಕ್ಷ ಬಿಷಪ್ ರೆ.ಡಾ. ಎಸ್.ಜೆ. ಫ್ರಾನ್ಸಿಸ್ ಸೆರ್ರೋ ಅಧ್ಯಕ್ಷತೆ ವಹಿಸಿದ್ದರು. ಮೌಂಟ್ ಕಾರ್ಮೆಲ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ರೆ. ಫಾದರ್ ಕ್ಲಿಫೋರ್ಡ್ ರೋಷನ್ ಪಿಂಟೋ, ಎಸ್‌ಎಂಎಸ್‌ಎಸ್‌ಎಸ್ ಕಾರ್ಯದರ್ಶಿ ರೆ. ಫಾದರ್ ಪಿಯುಸ್ ಡಿಸೋಜಾ, ರೆ. ಫಾದರ್ ಬಿಜು ಥಾಮಸ್, ಎ.ಸಿ. ಮೇರಿ ಎವೆಲಿನ್, ಆರೋಕ್ಯ ಬರ್ನಾಡ್ ಮತ್ತಿತರರು ಭಾಗವಹಿಸಿದ್ದರು.