ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದು ಹೈಕೋರ್ಟ್ ತೀರ್ಪು ನೀಡಿದ್ದು ಶಿಕ್ಷೆ ಪ್ರಮಾಣದವನ್ನು ಆಗಸ್ಟ್-2 ರಂದು ಪ್ರಕಟಿಸುವುದಾಗಿ ತಿಳಿಸಿದೆ.

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶುಕ್ರವಾರ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ಮಹತ್ವದ ತೀರ್ಪು ಪ್ರಕಟಿಸಿದರು.

- Advertisement - 

ಆ.2ರಂದು ಶಿಕ್ಷೆ ಪ್ರಕಟ: ಅತ್ಯಾಚಾರ ಪ್ರಕರಣದ ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ಪರಿಗಣಿಸಿದ್ದು, ಆ.2ರಂದು ಶನಿವಾರ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ನ್ಯಾಯಾಧೀಶರು ಹೇಳಿದರು.

 ಏನಿದು ಪ್ರಕರಣ:
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೈಸೂರಿನ ಕೆ.ಆರ್.ನಗರದ ಸಂತ್ರಸ್ತ ಮಹಿಳೆ ನೀಡಿದ ದೂರಿನ ಮೇರೆಗೆ ಸೈಬರ್ ಅಪರಾಧ ಠಾಣೆಯಲ್ಲಿ ಐಪಿಸಿ ಸೆಕ್ಷನ್​ಗಳಾದ 376(2)(ಎನ್)
, 376(2)(ಕೆ), 506, 354-ಎ, 354(ಎ), 354(ಬಿ), 354(ಸಿ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಇ ಅಡಿ ಪ್ರಕರಣ ದಾಖಲಿಸಲಾಗಿತ್ತು.

- Advertisement - 

ಎಸ್ಐಟಿ ಅಧಿಕಾರಿಗಳು 123 ಸಾಕ್ಷ್ಯಗಳನ್ನು ಸಂಗ್ರಹಿಸಿ, ಸುಮಾರು 2 ಸಾವಿರ ಪುಟಗಳ ಆರೋಪಪಟ್ಟಿಯನ್ನು ಕಳೆದ ವರ್ಷಾಂತ್ಯದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಜ್ವಲ್ ಮೊದಲ ಬಾರಿಗೆ ಸಂತ್ರಸ್ತೆಯ ಮೇಲೆ ಹಾಸನದ ಗನ್ನಿಗಢ ಫಾರ್ಮ್ ಹೌಸ್ ಮತ್ತು ಆ ನಂತರ ಬೆಂಗಳೂರಿನ ಬಸವನಗುಡಿಯಲ್ಲಿರುವ ತಂದೆ ಹೆಚ್‌.ಡಿ.ರೇವಣ್ಣ ಅವರ ನಿವಾಸದಲ್ಲಿ ಬಲವಂತವಾಗಿ ಅತ್ಯಾಚಾರ ಎಸಗಿ, ಆ ಕೃತ್ಯವನ್ನು ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದರು. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಿದ್ದರು. ಬಳಿಕ ಮರಳುತ್ತಿದ್ದಂತೆ 2024ರ ಮೇ 21ರಂದು ಎಸ್ಐಟಿ ಅಧಿಕಾರಿಗಳು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.

14 ತಿಂಗಳಿಂದ ಜೈಲುವಾಸ: ಆರೋಪಿ ಪ್ರಜ್ವಲ್ ರೇವಣ್ಣ ಕಳೆದ 14 ತಿಂಗಳಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳು ವಜಾಗೊಳಿಸಿದ್ದವು.

 ಪ್ರಜ್ವಲ್​ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪಗಳ ತನಿಖೆಗಾಗಿ ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿತ್ತು. ಪ್ರಕರಣದ ತನಿಖೆ ನಡೆಸಿದ ತಂಡ 113 ಸಾಕ್ಷಿಗಳನ್ನೊಳಗೊಂಡ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು.

3 ಪ್ರಕರಣ ಬಾಕಿ: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪ ಸಂಬಂಧಿಸಿದ ಮೂರು ಪ್ರಕರಣಗಳನ್ನು ಪ್ರಜ್ವಲ್ ರೇವಣ್ಣ ಎದುರಿಸುತ್ತಿದ್ದಾರೆ. ಇವು ವಿಚಾರಣೆಯ ಹಂತಗಳಲ್ಲಿವೆ.

ದೆಹಲಿಯಲ್ಲಿರುವ ಸಚಿವ ಪ್ರಿಯಾಂಕ್ ಖರ್ಗೆ ಈ ಕುರಿತು ಮಾಧ್ಯಮಗಳ ಜೊತೆ ಮಾತಾಡಿ, ಜನಪ್ರತಿನಿಧಿಗಳ ನ್ಯಾಯಾಲಯವು ಅತ್ಯಾಚಾರ ಪ್ರಕರಣವೊಂದರಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಅಂತ ತೀರ್ಪಿತ್ತರೂ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಯಾಕಿನ್ನೂ ಸುಮ್ಮನಿದ್ದಾರೆ? ಅಂತ ಖಾರವಾಗಿ ಪ್ರಶ್ನಿಸಿದರು.

ಪ್ರಜ್ವಲ್ ರೇವಣ್ಣನ ಸಂಬಂಧಿಯೊಬ್ಬರು ಕೇಂದ್ರದಲ್ಲಿ ಸಚಿವರಾಗಿದ್ದಾರಲ್ಲ? ಅವರು ಯಾಕೆ ಪ್ರತಿಕ್ರಿಯೆ ನೀಡುತ್ತಿಲ್ಲ? ಇವರೆಲ್ಲರಿಗೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಗುರಾಣಿಗಳಾಗಿ ಬಳಸಲು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಬೇಕು, ಪ್ರಜ್ವಲ್ ಅಥವಾ ಸೂರಜ್ ರೇವಣ್ಣ ಮಾಡಿದ್ದು ತಪ್ಪು ಅಂತ ಒಬ್ಬ ಬಿಜೆಪಿ, ಜೆಡಿಎಸ್ ನಾಯಕನಾದರೂ ಹೇಳಿದ್ದಾನಾ? ಎಂದು ಪ್ರಿಯಾಂಕ್ ಖರ್ಗೆ ತೀಕ್ಷ್ಣವಾಗಿ ಪ್ರಶ್ನಿಸಿದರು.

Share This Article
error: Content is protected !!
";