ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವುದಕ್ಕಾಗಿ ರಾಜ್ಯಾದ್ಯಂತ ಮೇ 05-05-2025 ರಿಂದ 17-05-2025ರವರೆಗೆ ಪರಿಶಿಷ್ಟ ಜಾತಿ, ಉಪಜಾತಿ ಸಮಗ್ರ ಸಮೀಕ್ಷೆ ಮೂರು ಹಂತದಲ್ಲಿ ನಡೆಯಲಿದೆ.
ಮೀಸಲಾತಿ ವರ್ಗೀಕರಣ ಆಯೋಗದ ಅಧ್ಯಕ್ಷರಾದ ನ್ಯಾ. ನಾಗಮೋಹನ್‌ದಾಸ್ ಅವರು ಸರ್ಕಾರಕ್ಕೆ ನೀಡಿರುವ ಮಧ್ಯಂತರ ವರದಿಯನ್ವರ ಸುಪ್ರಿಂ ಕೋರ್ಟ್ ನಿರ್ದೇಶನ ನೀಡಿದಂತೆ ದತ್ತಾಂಶ (ಎಂಪಾರಿಕಲ್ ಡಾಟಾ) ಸಂಗ್ರಹಿಸಿ, ಅದರ ಆಧಾರದ ಮೇಲೆ ಮೀಸಲಾತಿ ನಡೆಯುತ್ತದೆ.
ಕರ್ನಾಟಕ ರಾಜ್ಯಾದ್ಯಂತ ಪ್ರತಿಯೊಂದು ಜಿಲ್ಲೆ, ತಾಲ್ಲೂಕು, ಹೋಬಳಿ, ತಾಂಡ, ಗ್ರಾಮಗಳಲ್ಲಿ ಒಳಮೀಸಲಾತಿ ವರ್ಗೀಕರಣ ಸಮೀಕ್ಷೆ ನಡೆಯಲಿದ್ದು ಸಮೀಕ್ಷೆ ತಂಡದ ಅಧಿಕಾರಿಗಳು ಆಯಾ ಊರಿನಲ್ಲಿ ಸಮೀಕ್ಷೆ ಮಾಹಿತಿ ಪಡೆಯಲು ಬರುತ್ತಾರೆ.
ಈ ಸಂದರ್ಭದಲ್ಲಿ ಊರಿನ ನಾಯಕ್, ಕಾರಬಾರಿ, ಡಾವೋ, ಗ್ರಾಮ ಪಂಚಾಯ್ತಿ ಸದಸ್ಯರು, ವಿದ್ಯಾರ್ಥಿಗಳು, ಮಹಿಳೆಯರು, ಯುವ ನಾಯಕರು ಎಲ್ಲರೂ ಸೇರಿ ನಾವು ಪರಿಶಿಷ್ಟ ಜಾತಿಯಲ್ಲಿದ್ದೇವೆ. ನಮ್ಮ ಉಪಜಾತಿ ಬಂಜಾರ (ಲಂಬಾಣಿ) ಎಂದು ನಮೂದಿಸಬೇಕು. ಸಮೀಕ್ಷೆಯಲ್ಲಿ ಉಪಜಾತಿಗಳ ಜನಸಂಖ್ಯೆ, ಕುಟುಂಬಗಳ ಸಂಖ್ಯೆ ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ ಹೊಂದಿರುವ ಸೌಲಭ್ಯಗಳು ಮುಂತಾದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದ ಮಾಹಿತಿಗಳು, ಸರ್ಕಾರಿ ಉದ್ಯೋಗ, ಖಾಸಗಿ, ಉದ್ಯೋಗ, ಭೂ ಒಡೆತನ, ಆದಾಯ, ಸರ್ಕಾರದ ಸೌಲಭ್ಯಗಳು, ರಾಜಕೀಯ ಪ್ರಾತಿನಿಧ್ಯ ಮಾಹಿತಿಯನ್ನು ನಮೂದಿಸಲಾಗುತ್ತದೆ. ನಮ್ಮ ಲಂಬಾಣಿ ಜಾತಿ ತುಂಬಾ ಬಡತನದಲ್ಲಿರುವ ಜಾತಿ. ಯಾವುದೇ ರಾಜಕೀಯ ಪ್ರಾತಿನಿಧ್ಯ ಇಲ್ಲದ ಜಾತಿ. ಜನಸಂಖ್ಯೆ ಅತೀ ಹೆಚ್ಚು 35 ಲಕ್ಷ ಇದ್ದು ಪ್ರತಿಯೊಬ್ಬರು ತಮ್ಮ ಮತ್ತು ಕುಟುಂಬ ಸದಸ್ಯರ ಮಾಹಿತಿ ಹಾಗೂ ಈ ಮೇಲಿನ ಎಲ್ಲಾ ಮಾಹಿತಿಯನ್ನು ತಪ್ಪದೇ ಬರೆಸಬೇಕು. ಸ್ವಯಂ ಘೋಷಣೆಗೆ ಆಧಾರ್ ನಂಬರ್ ಮತ್ತು ಜಾತಿ ಪ್ರಮಾಣಪತ್ರದ ಆರ್.ಡಿ.ಸಂಖ್ಯೆ ಕಡ್ಡಾಯವಾಗಿದೆ. ಯಾರು ಜಾತಿ ಪ್ರಮಾಣ ಪತ್ರ ಮಾಡಿಸಿರುವುದಿಲ್ಲವೋ, ಅವರುಗಳು ಕೂಡಲೇ ಜಾತಿ ಪ್ರಮಾಣಪತ್ರ ಮಾಡಿಸಿ ಕೊನೆ ಹಂತದಲ್ಲಿ ಆನ್ಲೈನ್ ಆ್ಯಪ್ ಮೂಲಕವು ಮಾಹಿತಿ ತುಂಬಿ ಸಲ್ಲಿಸಲು ಜಿಲ್ಲಾ ಬಂಜಾರ ವಿಧ್ಯಾರ್ಥಿ ಮತ್ತು ಯುವಕರ ಸಂಘ ಚಿತ್ರದುರ್ಗ ಅಧ್ಯಕ್ಷ ಪ್ರಕಾಶ್ ರಾಮಾನಾಯ್ಕ್ ಅವರು ಮನವಿ ಮಾಡಿದ್ದಾರೆ.