ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ನೇಕಾರರ ಮುಖವಾಣಿಯಾದ ಟೆಕ್ಸ್ಟೈಲ್ ಮ್ಯಾನುಫ್ಯಾಕ್ಚರ್ ಕೋ ಆಪರೇಟಿವ್ ಬ್ಯಾಂಕ್ ನ 2025ರಿಂದ 2030ರ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ.
ಚುನಾವಣಾಧಿಕಾರಿ ಹರೀಶಕುಮಾರ್ ರವರ ನೇತೃತ್ವದಲ್ಲಿ ಸೋಮವಾರದಂದು ಚುನಾವಣೆ ನಡೆಸಲಾಗಿದ್ದು, ಈ ವೇಳೆ ಅಧ್ಯಕ್ಷರಾಗಿ ಕೆ. ಪಿ. ವಾಸುದೇವ್ ಹಾಗೂ ಉಪಾಧ್ಯಕ್ಷರಾಗಿ ಡಿ. ಪ್ರಶಾಂತ್ ಕುಮಾರ್ ಅವಿರೋದವಾಗಿ ಆಯ್ಕೆಯಾಗಿದ್ದಾರೆ.
ಇದೇ ಜನವರಿ 6ರಂದು ಬ್ಯಾಂಕಿನ ನಿರ್ದೇಶಕರ ಅವಿರೋಧ ಆಯ್ಕೆ ನಡೆದು ಜಿ. ಮಂಜುನಾಥ್, ಎ. ಆರ್. ಶಿವಕುಮಾರ್, ಪಿ. ಸಿ. ವೆಂಕಟೇಶ್, ಡಿ. ಪ್ರಶಾಂತ್ ಕುಮಾರ್, ಕೆ. ಜಿ. ಗೋಪಾಲ್, ಬಿ. ಆರ್. ಉಮಾಕಾಂತ್, ನಾರಾಯಣ್ ಎನ್. ನಾಯ್ಡು, ಡಾ. ಇಂದಿರಾ, ಎ. ಗಿರಿಜಾ, ಕೆ. ಪಿ. ವಾಸುದೇವ್, ಎಸ್. ಅನಿಲ್ ಆಯ್ಕೆಯಾಗಿದ್ದರು.
ಪ್ರಸಕ್ತ ಸಾಲಿನಲ್ಲಿ ಆಯ್ಕೆಯಾಗಿರುವ ತಂಡ ಸತತ ನಾಲ್ಕನೇ ಬಾರಿಗೆ ಅಧಿಕಾರ ಮುಂದುವರೆಸಿದೆ. ಈ ಬಗ್ಗೆ ನೂತನ ಅಧ್ಯಕ್ಷ ಕೆ. ಪಿ. ವಾಸುದೇವ್ ಮಾತನಾಡಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ತಂಡ ಹೊಸ ಯೋಜನೆಯೊಂದಿಗೆ ಅವಿರತವಾಗಿ ಶ್ರಮಿಸಲಿದೆ. ಅವಿರೋಧ ಆಯ್ಕೆಗೆ ಸಹಕರಿಸಿದ ಬ್ಯಾಂಕಿನ ಎಲ್ಲಾ ಸದಸ್ಯರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.