ಗುಡ್ಡಪ್ಪ ಜೋಗಿಗೆ ಒಲಿದ ರಾಷ್ಟ್ರೀಯ ಪ್ರಶಸ್ತಿ-ಪ್ರತಾಪ್ ಜೋಗಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜನಪದ ಕಲೆಗಳು ನಶಿಸಿ ಹೋಗುತ್ತಿವೆ ಎಂದು ಒಂದೆಡೆ ಹೇಳುತ್ತಿರುವಾಗಲೇ ಮಲೆನಾಡಿನಲ್ಲಿ ಕಿನ್ನೂರಿ ಹಿಡಿದು ಊರೂರು ಸುತ್ತುತ್ತ ಬದುಕು ಕಟ್ಟಿಕೊಂಡ ಕಲಾವಿದ ಕೆ.ಗುಡ್ಡಪ್ಪ ಜೋಗಿಗೆ ನಾಡೋಜ ಎಚ್. ಎಲ್.ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ರಾಜ್ಯದ ಅಲೆಮಾರಿ ಸಮುದಾಯಗಳಿಗೆ ಸ್ಫೂರ್ತಿ ತಂದಿದೆ.

ಅದರಲ್ಲೂ ಸಹ ಕರ್ನಾಟಕ ಜೋಗಿ ಸಮಾಜ ಎಲ್ಲಾ ಬಂಧುಗಳು ಸಂತಸದಲ್ಲಿದ್ದು, ಆಯ್ಕೆ ಮಾಡಿದ ಗೌರವಾನ್ವಿತರಿಗೆ ಅಭಿನಂದನೆಗಳನ್ನು ಜೋಗಿ ಸಮಾಜ ತಿಳಿಸಿದೆ.

ಮೂಲತಃ ಅಲೆಮಾರಿಗಳಾದ ಇವರು ಕಿನ್ನೂರಿ ಜೋಗಿಗಳು ಎಂದು ಪ್ರಸಿದ್ದರು. ಗುಡ್ಡಪ್ಪ ಜೋಗಿ ಕುಟುಂಬದವರು ಮೂಲತಃ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನವರು. ಭಿಕ್ಷಾಟನೆ ಹಾಗೂ ಜಾನಪದ ಹಾಡುಗಳೊಂದಿಗೆ ಊರೂರು ಸುತ್ತುತ್ತಾ ಕೆ.ಗುಡ್ಡಪ್ಪ ಜೋಗಿ ನೆಲೆಯೂರಿದ್ದರು.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ವಾಸಿಸುತ್ತಿದ್ದು, ರಾಜ್ಯದ ಮೂಲೆ ಮೂಲೆಗಳಲ್ಲೂ ಸಹ  ಕಿನ್ನೂರಿಯನ್ನು ಹಿಡಿದುಕೊಂಡು ಪ್ರವಾಸ ಮಾಡಿ ಜನಪದ ಕಲೆಗಳನ್ನು ನಶಿಸಿದಂತೆ ಬೇರೂರಿದ್ದಾರೆ.

ಗುಡ್ಡಪ್ಪ ಜೋಗಿಯವರು ಭಿಕ್ಷಾಟನೆಗೆ ಹೆಚ್ಚು ಒತ್ತು ನೀಡದೆ ಕಿನ್ನೂರಿ ವಾದನ ಕಲೆಗೆ ಮಹತ್ವ ಸಿಗಬೇಕೆಂಬ ಉದ್ದೇಶದಿಂದ ಕಾಲಭೈರವೇಶ್ವರ ಕಲಾತಂಡ ಕಟ್ಟಿ ವಿವಿಧೆಡೆ ಕಾರ್ಯಕ್ರಮಗಳನ್ನು ನೀಡಿದ್ದು ಆಕಾಶವಾಣಿ, ಚಂದನ ವಾಹಿನಿ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಕಾರ್ಯಕ್ರಮ ನೀಡುವ ಮೂಲಕ ಕಲೆ ಬೆಳೆಸಿದ್ದಾರೆ. ಕಲಾವಿದರಾಗಿಯೂ ಗುರುತಿಸಿ ಕೊಂಡಿದ್ದಾರೆ.

ಕಾಡು ಪ್ರಾಣಿ ಉಳಿಸಿ ಅಭಿಯಾನಕ್ಕೆ ಕಿನ್ನೂರಿ ವಾದನ ಕಲೆ ಜೀವ ತುಂಬಿದೆ. ಗುಡ್ಡಪ್ಪ ಜೋಗಿ ಅವರು ಗೀಗಿ ಪದ, ಲಾವಣಿ, ಆಶು ಕಥೆಗಳನ್ನು ಸೊಗಸಾಗಿ ಹಾಡುತ್ತಾರೆ.

೧೦,೦೦೦ಕ್ಕೂ ಹೆಚ್ಚು ಕಾರ್ಯಕ್ರಮಗಳಿಗೆ ಭಾಗವಹಿಸಿದ್ದಾರೆ. ರಾಜ್ಯ ಸರ್ಕಾರವು ಗುಡ್ಡಪ್ಪ ಜೋಗಿರವರಿಗೆ ನಾಡೋಜ.ಹೆಚ್.ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿಯ ಜೊತೆಗೆ ರೂ.೧ ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ನೀಡಲಿದೆ.

ನ. ೨೨ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲಾಗುತ್ತಿದೆ. ಕೆ.ಗುಡ್ಡಪ್ಪ ಜೋಗಿರವರು ಚಿತ್ರದುರ್ಗ ಜಿಲ್ಲೆಯಲ್ಲೂ ಜನಪದ ಕಲೆಯ ಮೆರಗನ್ನು ನೀಡಿದ್ದಾರೆ. ರಾಜ್ಯ ಸರ್ಕಾರಕ್ಕೆ ಪ್ರತಾಪ್ ಜೋಗಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

 

 

- Advertisement -  - Advertisement -  - Advertisement - 
Share This Article
error: Content is protected !!
";