ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನೆಹರು ನಗರ ವ್ಯಾಪ್ತಿಯ ಉಚ್ಚಂಗಿ ಯಲ್ಲಮ್ಮ ದೇವಸ್ಥಾನದ ಹತ್ತಿರ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ದಿನಾಚರಣೆ ಮಾಡಲಾಯಿತು.
ವೈದ್ಯಾಧಿಕಾರಿ ಡಾ.ಸೈಯದ್ ಬಿಲಾಲ್ ಇವರು ಗರ್ಭಿಣಿ ಸ್ತ್ರೀಯರಿಗೆ ಆರೋಗ್ಯ ಕಾರ್ಯಕ್ರಮಗಳು ಮತ್ತು ಪೌಷ್ಟಿಕಾಂಶಗಳ ಕುರಿತು ಮಾತನಾಡಿ ಪೌಷ್ಟಿಕ ಆಹಾರಗಳ ಸೇವನೆಯೊಂದಿಗೆ ತಿಂಗಳ ತಪಾಸಣೆ ಮಾಡುಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಿ ಗಂಡಾಂತರಗಳನ್ನು ದೂರವಿಡಿ ಎಂದು ಕಿವಿ ಮಾತು ಹೇಳಿದರು.
ಪ್ರತಿ ತಿಂಗಳು 9ನೇ ತಾರೀಖಿನಂದು ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ವಿಶೇಷ ತಪಾಸಣೆ ಮಾಡುತ್ತಿದ್ದು, ಇದನ್ನು ಎಲ್ಲಾ ಗರ್ಭಿಣಿಯರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಿದರು.
ಜಿಲ್ಲಾ ಪೌಷ್ಟಿಕ ಆಹಾರ ಮೇಲ್ವಿಚಾರಕಿ ಸಣ್ಣ ರಂಗಮ್ಮ ಇವರು ಪೌಷ್ಟಿಕಾಂಶ ಮತ್ತು ರಾಷ್ಟ್ರೀಯ ಕಾರ್ಯಕ್ರಮಗಳು ಹಾಗೂ ಅಪೌಷ್ಟಿಕತೆ ಕುರಿತು ಮಾತನಾಡಿ ಮಕ್ಕಳಿಗೆ ಪೌಷ್ಟಿಕಾಂಶ ಒಳಗೊಂಡ ಆಹಾರವನ್ನು ನೀಡಬೇಕು. ಗರ್ಭಿಣಿ ಸ್ತ್ರೀಯರು ಉತ್ತಮ ಪೌಷ್ಟಿಕ ಆಹಾರಗಳನ್ನು ಸೇವನೆ ಮಾಡುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳಬೇಕು ಎಂದು ಸಣ್ಣ ರಂಗಮ್ಮ ತಿಳಿಸಿದರು.
ಗರ್ಭಿಣಿ ಸ್ತ್ರೀಯರು ಪ್ರತಿದಿನ ದ್ವಿದಳ ಧಾನ್ಯಗಳಾದ ಹುರಳಿ, ಅಲಸಂದಿ, ಹೆಸರುಕಾಳು ಸೇರಿದಂತೆ ಅನೇಕ ದ್ವಿದಳ ಧಾನ್ಯಗಳನ್ನು ಊಟದೊಂದಿಗೆ ಸೇವಿಸಬೇಕು. ಕ್ಯಾಲ್ಷಿಯಂ ಪದಾರ್ಥಗಳನ್ನು ಸೇವಿಸುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಗ್ರಾಮೀಣ ಭಾಗದ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮತ್ತು ಆರೋಗ್ಯ ಇಲಾಖೆಯಿಂದ ಉಚಿತ ಆಂಬ್ಯುಲೆನ್ಸ್ ಸೌಲಭ್ಯ ಲಭ್ಯವಿರುತ್ತದೆ. ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವ ಜತೆಗೆ ಆಯುಷ್ಮಾನ್ ಭಾರತ್ ಕಾರ್ಡ್‌ಗಳನ್ನು ಪಡೆಯದ ಕುಟುಂಬಗಳು ಈ ಕೂಡಲೇ ಸರಕಾರಿ ಆಸ್ಪತ್ರೆಯಲ್ಲಿ ಟೋಕನ್ ಪಡೆದುಕೊಂಡು ಪಡಿತರ ಚೀಟಿಯೊಂದಿಗೆ ಆಯುಷ್ಮಾನ್ ಕಾರ್ಡ್‌ಗಳನ್ನು ಪಡೆದುಕೊಕೊಳ್ಳಬೇಕಾಗಿ ಸಣ್ಣ ರಂಗಮ್ಮ ವಿನಂತಿಸಿದರು.
ಇದೇ ಸಂದರ್ಭದಲ್ಲಿ ಅವರು ಅತಿಸಾರ ಭೇದಿಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಗುರುಮೂರ್ತಿ ಮಾತನಾಡಿ ಗರ್ಭಿಣಿ ಬಾಣಂತಿಯರಿಗೆ ಅಯೋಡಿನ್ ಕುರಿತು ಸಮಗ್ರ ಮಾಹಿತಿ ತಿಳಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಸುರಕ್ಷಣಾಧಿಕಾರಿ ಮಂಜುಳಾ, ಅಂಗನವಾಡಿ ಕಾರ್ಯಕರ್ತೆ ಬಂಗಾರಮ್ಮ, ಆಶಾ ಕಾರ್ಯಕರ್ತೆ ಭೀಮಕ್ಕ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.