ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬೆಂಗಳೂರಿನ ಕುಮಾರ ಕೃಪಾದಲ್ಲಿ ಬೆಂಗಳೂರು ಹೊರ ವರ್ತುಲ ರೈಲ್ವೆ ಯೋಜನೆಯ ಕುರಿತು ಪೂರ್ವಭಾವಿ ಪರಿಶೀಲನಾ ಸಭೆ ನಡೆಸಿ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಅವರು ಚರ್ಚಿಸಿದರು.
ಬೆಂಗಳೂರಿನ ಕುಮಾರ ಕೃಪಾದಲ್ಲಿ, ರೈಲ್ವೆ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಪರಿಶೀಲನಾ ಸಭೆ ನಡೆಸಲಾಯಿತು.
ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಮಾತನಾಡಿ ನ್ಯೂನತೆ ಇದೆ ಅಂತ ಸಂಸದರು ಹೇಳಿದ್ದರಿಂದ ವರ್ತುಲ ರೈಲ್ವೆ ಕುರಿತು ಪೂರ್ವಭಾವಿ ಸಭೆ ಮಾಡಿದ್ದೇವೆ. 271 ಕಿ.ಮೀ ವರ್ತುಲ ರೈಲ್ವೆ ಯೋಜನೆ ಇದಾಗಿದ್ದು, ಇದಕ್ಕೆ ಸಬರ್ಬನ್ ರೈಲು ಜೋಡಿಸಬೇಕು. ಹೇಗೆ ಜೋಡನೆ ಮಾಡಬೇಕೆಂಬುದರ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿಸಿದ್ದಾರೆ.
ಈ ಮಹತ್ವದ ಯೋಜನೆಗೆ ಒಟ್ಟು 2,500 ಎಕರೆ ಜಾಗ ಬೇಕಾಗುತ್ತದೆ. ರೈಲ್ವೆ ಇಲಾಖೆಯೇ ಸಂಪೂರ್ಣ ಹಣ ಕೊಡುತ್ತದೆ. ಹಳ್ಳಿಗಳ ಮದ್ಯೆ ಹೋಗಬಾರದೆಂಬ ಅಭಿಪ್ರಾಯ ಇದೆ. ಕೆಐಇಡಿಬಿಯನ್ನು ಉಪಯೋಗಿಸಿಕೊಳ್ಳುತ್ತಿದ್ದೇವೆ. ಇದರ ಬಗ್ಗೆ ಅಧಿಕಾರಿಗಳೆಲ್ಲಾ ಕುಳಿತು ಚರ್ಚೆ ಮಾಡ್ತಾರೆ. ನಂತರ ಡಿಪಿಆರ್ ತಯಾರು ಮಾಡುತ್ತೇವೆ ಎಂದು ಸೋಮಣ್ಣ ಹೇಳಿದರು.
ಮುಂದಿನ 50 ವರ್ಷಗಳ ಮಹತ್ವದ ಯೋಜನೆ ಇದು. ದೇವನಹಳ್ಳಿ ಹಾಗೂ ಯಲಹಂಕ ಮಧ್ಯೆ ಟರ್ಮಿನಲ್ ಸಿದ್ಧತೆ ಮಾಡಬೇಕಾಗುತ್ತದೆ. ಗೂಡ್ಸ್, ಪ್ಯಾಸೆಂಜರ್ ಎರಡೂ ರೈಲು ಇರಲಿದೆ. ಮೆಗಾಕೋಚಿಂಗ್ ಟರ್ಮಿನಲ್ ಗೆ ಡಿಪಿಆರ್ ಆಗಿದೆ. ಸಂಪೂರ್ಣ ಹಣವನ್ನು ಕೇಂದ್ರ ಸರ್ಕಾರ ಕೊಡಲಿದೆ ಎಂದರು.
ಪೂರ್ವಭಾವಿ ಸಭೆಯಲ್ಲಿ ಕೇಂದ್ರದ ರಾಜ್ಯಖಾತೆ ಸಚಿವರು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದೆ ಕು. ಶೋಭಾ ಕರಂದ್ಲಾಜೆ, ರಾಜ್ಯದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಹೆಚ್ ಮುನಿಯಪ್ಪ, ಬೆಂಗಳೂರು ಕೇಂದ್ರ ಲೋಕಸಭಾ ಸದಸ್ಯ ಪಿ.ಸಿ ಮೋಹನ್, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸದಸ್ಯ ಡಾ. ಸಿ.ಎನ್ ಮಂಜುನಾಥ್ ಅವರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.