ವಿವಿ ಸಾಗರದ ನೀರಿಗಾಗಿ 4 ಗ್ರಾಮ ಪಂಚಾಯಿತಿಗಳಿಂದ ಸಂಘಟಿತ ಹೋರಾಟಕ್ಕೆ ಮುನ್ನುಡಿ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಿವಿ ಸಾಗರದ ನೀರಿಗಾಗಿ ಹಿರಿಯೂರು ತಾಲೂಕಿನ 4 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಹತ್ತಾರು ಹಳ್ಳಿಗಳ ಕೆರೆಗಳಿಗೆ ವಾಣಿ ವಿಲಾಸ ಸಾಗರದ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಶನಿವಾರ ಪಾದಯಾತ್ರೆ ಮಾಡುವ ಮೂಲಕ ಸಂಘಟಿತ ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ.

 ಹಿರಿಯೂರು ತಾಲೂಕಿನ ವಿವಿ ಪುರ ಗ್ರಾಮ ಪಂಚಾಯಿತಿ, ಸೂರಗೊಂಡನಹಳ್ಳಿ,  ಮೇಟಿಕುರ್ಕೆ, ಕೂನಿಕೆರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಕೆರೆ, ಕಟ್ಟೆಗಳಿಗೆ ವಿವಿ ಸಾಗರದಿಂದ ನೀರು ಹರಿಸುವಂತೆ ಒತ್ತಾಯಿಸಿ ಪಾದಯಾತ್ರೆ ಮೂಲಕ  ತಾಲೂಕ ಕಚೇರಿಗೆ ಆಗಮಿಸಿದ ರೈತರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ನಮ್ಮ ನೀರಿನ ಹಕ್ಕನ್ನು ನಮಗೆ ನೀಡಿ ಎಂದು ಆಗ್ರಹ ಮಾಡಿದ ಕೂಗು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಕಿವಿ ಬಿದ್ದು ಕೂಡಲೇ ತಾಲೂಕು ಕಚೇರಿಗೆ ಆಗಮಿಸಿ ನಿಮ್ಮ ಬೇಡಿಕೆ ಈಡೇರಿಸಲು ಸರ್ಕಾರದ ಗಮನಕ್ಕೆ ತರುವುದರ ಜೊತೆಯಲ್ಲಿ ಈ ಭಾಗದ ರೈತರ ಬೆನ್ನಿಗೆ ನಿಲ್ಲುವುದಾಗಿ ಪ್ರತಿಭಟನಾ ನಿರತ ರೈತರಿಗೆ ಭರವಸೆ ನೀಡಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ನೀರಾವರಿ ವಂಚಿತ ಹಿರಿಯೂರು ತಾಲೂಕಿನ ಗ್ರಾಮಗಳ ಜನರು ಮತ್ತು ರೈತರು ಎಚ್ಚೆತ್ತುಕೊಂಡು ಸಂಘಟಿತ ಹೋರಾಟ ಮಾಡುವ ಮೂಲಕ ಸರ್ಕಾರ ಗಮನ ಸೆಳೆಯಬೇಕು ಎಂದು ಹೇಳಿದರು.

ರೈತರ ಯಾವುದೇ ಬೇಡಿಕೆ ಈಡೇರಬೇಕಾದರೆ ಹೋರಾಟ ಅಗತ್ಯ. ಹೋರಾಟಕ್ಕೆ ಪಕ್ಷ, ಜಾತಿ ಬಿಟ್ಟು ಸಂಘಟಿತ ಹೋರಾಟ ಮಾಡೋಣ. ರೈತರ ಬೇಡಿಕೆಗಳಿಗೆ ಒಗ್ಗಟ್ಟಿಂದ ಹೋರಾಟ ಮಾಡಬೇಕು. ಜೆಜೆ ಹಳ್ಳಿ, ಧರ್ಮಪುರ ಸೇರಿದಂತೆ ತಾಲೂಕಿನ ಇತರೆ ಹೋಬಳಿಗಳ ಹೋರಾಟಕ್ಕೆ ಎಲ್ಲ ರೈತರು ಸಾಥ್ ನೀಡಬೇಕು. ಸರ್ಕಾರಕ್ಕೆ ಎಚ್ಚರ ಕೊಡುವ ಮುಖಾಂತರ ರೈತರ ಬೇಡಿಕೆ ಈಡೇರಿಸಿಕೊಳ್ಳಬೇಕು ಎಂದು ತಿಳಿಸಿದರು.

ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಡಿಯಸುಧಾಕರ್ ರೈತರ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹಿರಿಯೂರು ಬಂದ್ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.

 ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ನಾಯಕ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ಸೇರಿದಂತೆ ಇತರೆ ನೀರಾವರಿ ಯೋಜನೆಗಳಿಂದ ಜಿಲ್ಲೆಯ ಹಲವು ಹಳ್ಳಿಗಳು ವಂಚಿತವಾಗಿವೆ.

ಸರ್ಕಾರ ಸಮಗ್ರವಾದ ಯೋಜನೆ ರೂಪಿಸಬೇಕಾಗಿದೆ. ಜಿಲ್ಲೆಯ ಯಾವ ಯಾವ ಹಳ್ಳಿಗಳಿಗೆ, ಕೆರೆ, ಕಟ್ಟೆಗಳಿಗೆ ನೀರು ಹರಿಸುತ್ತಿಲ್ಲವೋ ಆ ಎಲ್ಲ ಹಳ್ಳಿಗಳ ಕೆರೆ ಕಟ್ಟೆಗಳಿಗೆ ನೀರು ಹರಿಸುವ ಕಾರ್ಯ ಮಾಡಬೇಕು. ಇದಕ್ಕಾಗಿ ರೈತರ ಹೋರಾಟ ನಿರಂತರವಾಗಿರಬೇಕು, ಹೋರಾಟಗಳ ಮೂಲಕ ಸರ್ಕಾರವನ್ನು ಎಚ್ಚರಿಸಬೇಕು ಎಂದು ಸಿದ್ದವೀರಪ್ಪ ಕರೆ ನೀಡಿದರು.

ಮನುಷ್ಯನಿಗೆ, ಜಾನುವಾರುಗಳಿಗೆ ನೀರು ಅಮೂಲ್ಯ. ಪ್ರತಿಯೊಬ್ಬರು ನೀರು ಪಡೆಯುವುದು ಹಕ್ಕಿನ ಜೊತೆಗೆ ಅವಿಭಾಜ್ಯ ಅಂಗ. ನಾಡಿಗೆ ಸ್ವಾತಂತ್ರ್ಯ ಬಂದು  77 ವರ್ಷ ಕಳೆದರೂ ಈ ದೇಶದ ಮೂಲಭೂತ ಸೌಲಭ್ಯಗಳು ಪೂರೈಸಕ ಆಗಿಲ್ಲ. ವಿವಿ ಸಾಗರ ನೀರು ತುಂಬಿಸಿ ಎಲ್ಲ ಕೆರೆಗಳಿಗೂ ನೀರು ಹರಿಸಿ ಎಂದು ಹೋರಾಟ ಮಾಡುತ್ತಿದೆ. ಆದರೆ ಹೊಸದುರ್ಗ ತಾಲೂಕಿನವರು ಎಚ್ಚೆತ್ತುಕೊಳ್ಳದೆ ನಿದ್ದೆ ಮಾಡುತ್ತಿದ್ದಾರೆ.

ಭದ್ರಾ ಮೇಲ್ದಂಡೆ ನೀರಿಗಾಗಿ ಮಾತ್ರ ಹೋರಾಟ ಮಾಡಬಾರದು ತುಂಗಭದ್ರಾ ನೀರಿಗಾಗಿ ನಾವು ಹೋರಾಟ ಮಾಡಬೇಕಾಗುತ್ತದೆ. ವೇದಾವತಿ ನದಿಯನ್ನು  ಪುನಶ್ಚೇತನ ಮಾಡುವಂತೆ ಮನವಿ ಮಾಡಿದ್ದೇವೆ. ವಿ ವಿ ಸಾಗರದ ಸಮೀಪ ಇರುವ ಜಮೀನುಗಳಿಗೆ ಎತ್ತರದಿಂದ ನೀರು ಹರಿಸಲು ಜನಪ್ರತಿನಿಧಿಗಳಲ್ಲಿ ಕೋರಿಕೊಂಡಿದ್ದೇವೆ ಎಂದು ತಿಳಿಸಿದರು.

ಸರ್ಕಾರಗಳು, ಜನಪ್ರತಿನಿಧಿಗಳು ನಾಡಿನ ರೈತರ ಹಿತಕ್ಕೋಸ್ಕರ ಕೆಲಸ ಮಾಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ಕೊಡುವ ಹಣ, ಹೆಂಡ, ಇತರೆ ಅಮಿಷಕ್ಕೆ ಬಲಿಯಾಗಬಾರದು. ಜನಪ್ರತಿನಿಧಿಗಳು ಕೆಲಸ ಮಾಡದಿದ್ದರೆ ಅಂಗಿ ಕೊಳ್ಪಟ್ನಿ ಹಿಡಿದು ಕೇಳುವವರೆಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುವುದಿಲ್ಲ ಎಂದು ಸಿದ್ದ ವೀರಪ್ಪ ಗುಡುಗಿದರು.
ರೈತರ ಬೇಡಿಕೆಗಳು ಈಡೇರಬೇಕಾದರೆ ರೈತರ ಪರ
ಹೋರಾಟಗಳಿಗೆ ಪ್ರತಿ ಕುಟುಂಬಕ್ಕೆ ಒಬ್ಬರಂತೆ ಪಾಲ್ಗೊಳ್ಳಬೇಕು. ಆಗ ಎಲ್ಲ ರೀತಿಯ ಹೋರಾಟಗಳು ಯಶಸ್ವಿಯಾಗಲಿವೆ ಎಂದು ಅವರು ತಿಳಿಸಿದರು.

- Advertisement -  - Advertisement - 
Share This Article
error: Content is protected !!
";