ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬುದ್ಧನ ಚಿಂತನೆ ಬಸವಣ್ಣನ ಸಮಾನತೆಯ ತಳಹದಿ ಅಂಬೇಡ್ಕರ್ ಅವರ ಸಮ ಸಮಾಜದ ಪರಿಕಲ್ಪನೆಯಿಂದ ಕೂಡಿದ ಬೃಹತ್ ಲಿಖಿತ ಸಂವಿಧಾನವಾಗಿದ್ದು ಇದು ಮಾನವೀಯ ಮೌಲ್ಯಗಳಿಂದ ಕೂಡಿದ ಸಂವಿಧಾನವಾಗಿದೆ ಎಂದು ನಗರಸಭಾ ಮಾಜಿ ಸದಸ್ಯ ಜಿ.ಪ್ರೇಮ್ ಕುಮಾರ್ ಅಭಿಪ್ರಾಯ ಪಟ್ಟರು.
ಪಟ್ಟಣದ ದೇವಗಿರಿ ನಗರದ ಭಾರತ್ ರೂರಲ್ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕಳವಿಭಾಗಿ ಶ್ರೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾಸಂಘ, ಸಕ್ಕರ, ಭಾರತ್ ರೂರಲ್ ಕೈಗಾರಿಕಾ ತರಬೇತಿ ಕೇಂದ್ರ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನ ದಿವಸ ಭಾರತೀಯರ ಪಾಲಿಗೆ ಹೆಮ್ಮೆಯ ಆಚರಣೆ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿ ಹೃದಯ ಸ್ಥಾನದಲ್ಲಿ ನಿಂತಿರುವ ಭಾರತೀಯ ಸಂವಿಧಾನವು ಅಭಿವ್ಯಕ್ತಿ ಸ್ವಾತಂತ್ರವನ್ನು ರಕ್ಷಿಸಿ ಪ್ರಜಾತಂತ್ರ ವ್ಯವಸ್ಥೆಯ ನಾಡಿಮಿಡಿತವಾಗಿದೆ. ದೇಶದ ಜನರ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ಸಮಾನವಾಗಿ ನೀಡುವ ಸಂಕಲ್ಪದ ಭಾರತ ಸಂವಿಧಾನ ವೈವಿಧ್ಯತೆಗಳ ಸಂಗಮವಾಗಿದ್ದು ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗದ ಮೂಲಕ ಕಾರ್ಯನಿರ್ವಹಿಸುತ್ತದೆ. ಸಂವಿಧಾನ ದಿನದ ಆಚರಣೆ 2015 ರಿಂದ ಆರಂಭವಾಗಿದೆ, ಇದಕ್ಕೂ ಮುನ್ನ ಈ ದಿನವನ್ನು ಕಾನೂನು ದಿನವನ್ನಾಗಿ ಆಚರಣೆ ಮಾಡಲಾಗುತ್ತಿತ್ತು ಎಂದು ಅವರು ಹೇಳಿದರು.
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಚಮನ್ ಷರೀಫ್ ಮಾತನಾಡಿ ಭಾರತೀಯ ಸಂವಿಧಾನವು ನಮ್ಮ ಜೀವನ ಸಂಸ್ಕಾರ ಭಾವನೆಗಳಿಗೆ ನವ ಚೈತನ್ಯ ಕೊಡಬಲ್ಲದು. ಇದು ದೇಶದ ಪ್ರತಿಯೊಬ್ಬ ಪ್ರಜೆಯ ಸ್ವಾಭಿಮಾನದ ಸಂಕೇತವಾಗಿದೆ. ಸಮಾಜದಲ್ಲಿ ಸ್ವಾತಂತ್ರ್ಯ ಸಮಾನತೆ ಭ್ರಾತೃತ್ವದ ಭಾವನೆಗಳನ್ನು ಎತ್ತಿ ಹಿಡಿದು ಅವುಗಳನ್ನು ಜೀವನದ ತತ್ವಗಳನ್ನಾಗಿ ಅಳವಡಿಸಿಕೊಂಡಲ್ಲಿ ಮಾತ್ರ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಂಡ ಕನಸು ನನಸಾಗಲು ಸಾಧ್ಯ. ಈ ದಿಸೆಯಲ್ಲಿ ಯುವ ಜನತೆ ಅಂಬೇಡ್ಕರ್ ಅವರ ಚಿಂತನೆಯ ಹಾದಿಯಲ್ಲಿ ಸಾಗಿದರೆ ಸಮೃದ್ಧ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಅಂಬೇಡ್ಕರ್ ಅವರ ಮಾನವೀಯ ಮೌಲ್ಯಗಳನ್ನು ಸಾಮಾನ್ಯ ಜನರಿಗೆ ತಲುಪಿಸುವ ಕೆಲಸಗಳು ಹೆಚ್ಚಾಗಿ ಆಗಬೇಕು ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಸ್. ಜಿ. ರಂಗಸ್ವಾಮಿ ಸಕ್ಕರ, ಮಾತನಾಡಿ ಡಾ. ಬಿ.ಆರ್ ಅಂಬೇಡ್ಕರ್ ಅವರು ವಿಶ್ವದ ಅನೇಕ ರಾಷ್ಟ್ರಗಳ ಸಂವಿಧಾನವನ್ನು ಅಧ್ಯಯನ ಮಾಡಿ ಜೀವಪರವು ಬಹುತ್ವದ ಈ ಸಂವಿಧಾನವನ್ನು ನೀಡಿ ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಹೋದರತೆಯ ಭಾವವನ್ನು ಮೇಳೈಸಿ ಸಮಗ್ರತೆಯ ಭಾರತವನ್ನು ಕಟ್ಟಲು ಸಂಕಲ್ಪಿಸಿದ್ದರು. ಅಂತೆಯೇ ಈ ಸಂದರ್ಭದಲ್ಲಿ ಮತ ಮೌಲ್ಯದ ಬಗ್ಗೆಯೂ ಜನತೆಗೆ ತಿಳಿಸಿಕೊಟ್ಟಿದ್ದರು ಈ ನಿಟ್ಟಿನಲ್ಲಿ ಅವರ ಸಮಾನತೆಯ ಸಮಾಜವನ್ನು ನಿರ್ಮಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತ್ ರೂರಲ್ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಎಂ ರಮೇಶ್, ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಎಸ್. ಅಸ್ಗರ್ ಅಹ್ಮದ್, ಭಾರತ್ ರೂರಲ್ ಕೈಗಾರಿಕಾ ತರಬೇತಿ ಕೇಂದ್ರದ ಕಿರಿಯ ತರಬೇತಿ ಅಧಿಕಾರಿಗಳಾದ ಸೈಯದ್ ಅಹ್ಮದ್, ಜೆ ಅನಿತ ,ಬಿ ಅಂಜಲಿ, ಸಂತೋಷ್ ಕುಮಾರ್ ರಾಕೇಶ್ ಮಂಜುನಾಥ ಅಜಿತ್ ಗಗನ್ ಸುನಿಲ್ ಹಾಗೂ ಇತರರು ಉಪಸ್ಥಿತರಿದ್ದರು.

