ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮೊದಲನೇ ಮದುವೆ ಆಗಲು ಕನ್ಯೆ ಸಿಗುವುದಿಲ್ಲ ಎನ್ನುವ ಕೊರಗು ಒಂದು ಕಡೆಯಾದರೆ ಎರಡು-ಮೂರು ಮದುವೆ ಮಾಡಿಕೊಂಡು ಮಜಾ ಮಾಡುವವರಿಗೇನು ಕಮ್ಮಿ ಇಲ್ಲ.
4 ವರ್ಷಗಳಿಂದ ಮೊದಲನೇ ಮದುವೆ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ 2ನೇ ಮದುವೆ ಮಾಡಿಕೊಳ್ಳುವ ಸಂದರ್ಭದಲ್ಲೇ ಮೊದಲನೇ ಪತ್ನಿ ಸೇರಿದಂತೆ ಅವರ ಕುಟುಂಬದವರು ಹಿಗ್ಗಾಮುಗ್ಗಾ ಗೂಸಾ ನೀಡಿದ ಘಟನೆ ಚಿತ್ರದುರ್ಗ ನಗರದ ಗಾಯಿತ್ರಿ ಕಲ್ಯಾಣ ಮಂಟಪದಲ್ಲಿ ಜರುಗಿದೆ.
ಎರಡನೇ ಮದುವೆಗಾಗಿ ಹಸೆಮಣೆ ಏರಲು ಸಿದ್ಧವಾಗಿದ್ದ ಪತಿರಾಯನಿಗೆ ಮದುವೆ ಮಂಟಪದಲ್ಲೇ ಮೊದಲ ಪತ್ನಿ ಚಪ್ಪಲಿಯಿಂದ ಹೊಡೆದಿದ್ದಾರೆ. ವರದಕ್ಷಿಣೆ ದುರಾಸೆಗೆ 2ನೇ ಮದುವೆ ಮಾಡಿಕೊಳ್ಳಲು ಎಲ್ಲ ರೀತಿಯ ಸಿದ್ಧತೆಗಳನ್ನು ಪತಿ ಮಾಡಿದ್ದ. ಕಲ್ಯಾಣ ಮಂಟಪದಲ್ಲೇ ಮೊದಲ ಪತ್ನಿಯ ಕಡೆಯವರಿಂದ ಪತಿರಾಯನ ಕಡೆಯವರಿಗೆ ಸಖತ್ ಧರ್ಮದೇಟು ನೀಡಲಾಯಿತು. ತಾಳಿ ಕಟ್ಟುವ ವೇಳೆ 2ನೇ ವಧುವಿನ ಕುಟುಂಬಸ್ಥರು ಕಕ್ಕಾಬಿಕ್ಕಿಯಾಗಿದ್ದಾರೆ.
ಕಳೆದ 4 ವರ್ಷದ ಹಿಂದೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮುಶೇನಾಳದ ತನುಜಾ ಎಂಬ ಯುವತಿಯನ್ನು ಚಿಕ್ಕಮಗಳೂರು ಜಿಲ್ಲೆ ಅರಸೀಕೆರೆ ತಿಪ್ಪಘಟ್ಟದ ಕಾರ್ತಿಕ್ ನಾಯ್ಕ ಮದುವೆಯಾಗಿದ್ದ. ಆದರೆ ಮೊದಲ ಪತ್ನಿಗೆ ತಿಳಿಯದಂತೆ ಚಿತ್ರದುರ್ಗದಲ್ಲಿ ಕಾರ್ತಿಕ್ 2ನೇ ಮದುವೆಗೆ ಪ್ಲ್ಯಾನ್ ಮಾಡಿದ್ದ.
ವರದಕ್ಷಿಣೆ ಆಸೆಗೆ ಮತ್ತೊಮ್ಮೆ ಹಸಣೆ ಏರಲು ಕಾರ್ತಿಕ್ ನಾಯ್ಕ್ ಸಿದ್ಧವಾಗಿದ್ದ ಸುದ್ದಿ ತಿಳಿದು ಕಲ್ಯಾಣ ಮಂಟಪಕ್ಕೇ ಮೊದಲ ಪತ್ನಿ ಮತ್ತು ಕುಟುಂಬದವರು ಬಂದು ಪತಿಗೆ ಧರ್ಮದೇಟು ನೀಡಿದ್ದಾರೆ.
ಇದರಿಂದಾಗಿ ಕಾರ್ತಿಕ ಪತ್ನಿ ತನುಜಾ ಕುಟುಂಬಸ್ಥರು 2ನೇ ಮದುವೆಗೆ ಬ್ರೇಕ್ ಹಾಕಿದ್ದಾರೆ. ಚಿತ್ರದುರ್ಗ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.