ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಹಾಲು ಒಕ್ಕೂಟವು ಸಂಕ್ರಾಂತಿ ಹಬ್ಬದ ಬಳಿಕ ನಂದಿನಿ ಹಾಲಿನ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಪ್ರತಿ ಲೀಟರ್ ಹಾಲಿನ ದರದಲ್ಲಿ 5 ರೂ. ಏರಿಕೆ ಮಾಡುವಂತೆ ಕಳೆದ ಎರಡು ದಿನಗಳಿಂದೆ(ಬುಧವಾರ) ನಡೆದ ಹಾಲು ಒಕ್ಕೂಟ ಸಭೆಯಲ್ಲಿ ಪ್ರಸ್ತಾಪವಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಮಾಹಿತಿ ನೀಡಿದರು.
ಬೆಂಗಳೂರಿನ ಡೈರಿ ಸರ್ಕಲ್ ಬಳಿಯ ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಲೆ ಏರಿಕೆ ಬಗ್ಗೆ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ಪರಿಶೀಲಿಸುತ್ತೇವೆ. ದರ ಏರಿಕೆ ದುಡ್ಡು ರೈತರ ಕೈ ಸೇರುತ್ತೆ ಎಂದು ತಿಳಿಸಿದರು.
ಪ್ರತಿ ಲೀಟರ್ ಪ್ಯಾಕೇಟ್ನಲ್ಲಿ 50 ಎಂಎಲ್ ಹಾಲನ್ನು ಹೆಚ್ಚಳ ಮಾಡಿ ಈ ಹಿಂದೆ ಸರ್ಕಾರ 2 ರೂ. ದರ ಏರಿಕೆ ಮಾಡಿತ್ತು. ಇದರಿಂದ ಗ್ರಾಹಕರ ಕೆಂಗಣ್ಣಿಗೆ ಗುರಿಯಾದ ಸರ್ಕಾರ, ಇದನ್ನು ವಾಪಸ್ ಪಡೆಯಲು ಮುಂದಾಗಿದೆ. ಪ್ರತಿ ಲೀಟರ್ಗೆ 5 ರೂ. ಹೆಚ್ಚಳ ಮಾಡಲು ಮುಂದಾಗಿರುವುದಕ್ಕೆ ಜನರು ಆಕ್ರೋಶ ಹೊರಹಾಕಿದ್ದು, ದಿಢೀರ್ ಬೆಲೆ ಏರಿಕೆ ಮಾಡುವುದು ಸರಿಯಲ್ಲ.ಹಾಲಿನ ದರ ಹೆಚ್ಚಳಕ್ಕೆ ಯಾವುದೆ ಮಾನದಂಡ ಇಲ್ಲ. ಈ ಬಗ್ಗೆ ತಜ್ಞರ ಸಲಹೆ ಪಡೆದು ಬಳಿಕ ಹಾಲಿನ ದರ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಹಾಲಿನ ದರ ಏರಿಕೆ ಮಾಡುವ ಮೂಲಕ ಜನರಿಗೆ ಹೊರೆ ಮಾಡುತ್ತಿರುವುದು ಸರಿಯಲ್ಲ. ಹೀಗಾಗಿ, ಹಾಲಿನ ದರ ಏರಿಕೆ ಬೇಡ ಎಂದು ಆಗ್ರಹಿಸಿದ್ದಾರೆ.
ದೋಸೆ, ಇಡ್ಲಿ ಹಿಟ್ಟು ಮಾರುಕಟ್ಟೆಗೆ-
ಹೊಸ ಹೊಸ ಉತ್ಪನ್ನಗಳೊಂದಿಗೆ ನಂದಿನಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇಷ್ಟು ದಿನಗಳ ಕಾಲ ನಂದಿನಿ ಪ್ರಾಡೆಕ್ಟ್ನ ತುಪ್ಪ, ಬೆಣ್ಣೆ, ಪೇಡಾ, ಮೈಸೂರು ಪಾಕ್, ಬ್ರೆಡ್, ಬನ್ ಸೇರಿದಂತೆ ವಿವಿಧ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸಿಗುತ್ತಿದ್ದವು. ಈಗ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಕೂಡ ಗ್ರಾಹಕರಿಗೆ ಸಿಗುತ್ತಿದೆ. ಗ್ರಾಹಕರಿಂದ ಸಾಕಷ್ಟು ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಕೆಎಂಎಫ್ ನಂದಿನಿ ಬ್ರ್ಯಾಂಡ್‌ನ ದೋಸೆ ಹಾಗೂ ಇಡ್ಲಿ ಹಿಟ್ಟು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಉತ್ಪನ್ನಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

