ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಗ್ರಾಮ ಪಂಚಾಯಿತಿಗಳಲ್ಲಿ ಕ್ರಿಯಾ ಯೋಜನೆ ತಯಾರಿಸುವ ಸಂದರ್ಭದಲ್ಲಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಪೂರಕವಾದ ಕಾಮಗಾರಿಗಳನ್ನು ಹೆಚ್ಚು ತೆಗೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರೆ ಹೇಳಿದರು.
ಬಳ್ಳಾರಿ ಜಿಲ್ಲಾ ಪಂಚಾಯತ್ ಮತ್ತು ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆ ವತಿಯಿಂದ ಪ್ರಸಕ್ತ ಸಾಲಿನ ನರೇಗಾ ವಾರ್ಷಿಕ ಕ್ರಿಯಾ ಯೋಜನೆ ತಯಾರಿಸುವ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಅಂತರ್ಜಲ ಏರಿಕೆಗೆ ಅನುಕೂಲವಾಗುವಂತ ಕಾಮಗಾರಿಗಳ ಸ್ಥಳ ಗುರುತಿಸಬೇಕು. ಈ ಸಂದರ್ಭದಲ್ಲಿ ಕ್ಲಾರ್ಟ್ ತಂತ್ರಾಂಶವನ್ನು ಖಡ್ಡಾಯವಾಗಿ ಬಳಕೆ ಮಾಡಬೇಕು ಎಂದು ತಿಳಿಸಿದರು.
ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಎಂದರೆ ಭೂಮಿ, ನೀರು, ಮಣ್ಣು, ಸಸ್ಯಗಳು ಮತ್ತು ಪ್ರಾಣಿಗಳಂತಹ ನೈಸರ್ಗಿಕ ಸಂಪನ್ಮೂಲಗಳನ್ನು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಜೀವನದ ಗುಣಮಟ್ಟ ಖಚಿತಪಡಿಸಿಕೊಳ್ಳುವ ದೃಷ್ಟಿಯಿಂದ ನಿರ್ವಹಿಸಬೇಕು. ಇದು ವಿಜ್ಞಾನ, ತಂತ್ರಜ್ಞಾನ ಮತ್ತು ಸಾಮಾಜಿಕ ವಿಜ್ಞಾನಗಳ ತತ್ವಗಳನ್ನು ಬಳಸಿಕೊಂಡು ಸಂಪನ್ಮೂಲಗಳ ವೈಜ್ಞಾನಿಕ ಮತ್ತು ತಾಂತ್ರಿಕ ಅಂಶಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಸುಸ್ಥಿರ ರೀತಿಯಲ್ಲಿ ಬಳಸುವ ಪ್ರಕ್ರಿಯೆಯಾಗಿದೆ ಎಂದು ಅವರು ತಿಳಿಸಿದರು.
ತರಬೇತಿ ಸಂಪನ್ಮೂಲ ವ್ಯಕ್ತಿ ವಾಸುದೇವಮೂರ್ತಿ ಮಾತನಾಡಿ ಜಿಲ್ಲೆಯಲ್ಲಿ ಇರುವ ಗೋಮಾಳಗಳನ್ನು ಗುರುತಿಸಿ ಅಲ್ಲಿ ಧನಕರುಗಳಿಗೆ ಬೇಕಾದ ಮೇವು, ನೀರು ಮತ್ತು ಅಂತರ್ಜಲ ಹೆಚ್ಚಾಗುವುದಕ್ಕೆ ಸಹಕಾರಿಯಾರಿಯಾಗುವ ಕಾಮಗಾರಿಗಳನ್ನು ಕ್ಲಾರ್ಟ್ ತಂತ್ರಾಂಶ ಮೂಲಕ ಸ್ಥಳ ಗುರುತಿಸುವುದಕ್ಕೆ ಬಳಸಬೇಕು ಮತ್ತು ಈ ತಂತ್ರಾಂಶ ಬಳಕೆಯ ವಿಧಾನವನ್ನು ಎಲ್ಲಾ ಸಿಬ್ಬಂದಿಗಳು ಅರಿತುಕೊಳ್ಳಬೇಕು ಎಂದು ತಿಳಿಸಿಕೊಟ್ಟರು.
ಕ್ಲಾರ್ಟ್ ತಂತ್ರಾಂಶದ ಪರಿಚಯ- ಕ್ಲಾರ್ಟ್ ತಂತ್ರಾಂಶದ(ಸಂಯೋಜಿತ ಭೂ ದೃಶ್ಯ ಮೌಲ್ಯಮಾಪನ ಮತ್ತು ಪುನಃಸ್ಥಾಪನೆ ಸಾಧನ) ಸಾಧನವಾಗಿದೆ. ಮಹತ್ಮಾ ಗಾಂಧಿ ನರೇಗಾ ವಾರ್ಷಿಕ ಕ್ರಿಯಾ ಯೋಜನೆ ಮಾಡುವಾಗ ಈ ತಂತ್ರಾಂಶ ಬಳಕೆ ಮಾಡಲಾಗುತ್ತದೆ. ಇದು ಕಾಮಗಾರಿಗಳಲ್ಲಿ ನೀರು ನಿಲ್ಲಿಸುವ, ಹಿಂಗಿಸುವ ಮತ್ತು ಅರಣ್ಯೀಕರಣ ಕಾಮಗಾರಿಗಳಿಗೆ ಸೂಕ್ತ ಸ್ಥಳಗಳನ್ನು ಸೂಚನೆ ಮಾಡುತ್ತದೆ. ಇದರಿಂದ ಸೃಷ್ಠಿಯಾಗುವ ಕಾಮಗಾರಿಗಳು ಹೆಚ್ಚು ದೀರ್ಘಬಾಳಿಕೆ ಕಾರಣವಾಗುತ್ತದೆ ಎಂದು ಅವರು ತಿಳಿಸಿದರು.
ಫೌಂಡೇಶನ್ ಫಾರ್ ಇಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ಜಿಲ್ಲಾ ಸಂಯೋಜಕ ರಮೇಶ್ ಮಾತನಾಡಿ ಹಿಂದುಳಿದ ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಇರುವ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿಗಳ ಜವಾಬ್ದಾರಿಯಲ್ಲಿ ಗ್ರಾಮ ಪರಿಸರ ಅಭಿವೃದ್ಧಿ ಮತ್ತು ನಿರ್ವಹಣೆ ಸಮಿತಿಗಳನ್ನು ರಚಿಸಬೇಕು. ಈ ಸಮಿತಿಗಳು ಸರ್ಕಾರಿ ಭೂಮಿಗಳ ಅಭಿವೃದ್ಧಿ, ನಿರ್ವಹಣೆ ಮತ್ತು ಮೇಲ್ವಿಚಾರಣೆಯ ಉದ್ದೇಶ ಹೊಂದಿರುತ್ತವೆ ಎಂದು ರಮೇಶ್ ತಿಳಿಸಿದರಲ್ಲದೆ ಇದಕ್ಕೆ ಪೂರಕವಾದ ಸರ್ಕಾರಿ ಆದೇಶಗಳು ಹಾಗೂ ರಚನೆಯ ವಿಧಾನ ಕುರಿತು ಮಾಹಿತಿ ನೀಡಿದರು.
ಸಂರಕ್ಷಣೆ ಮತ್ತು ಸಮತೋಲನ: ಇದು ಜೀವವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವವನ್ನು ಸಂರಕ್ಷಿಸುವಾಗ ಭೂಮಿ, ನೀರು, ಗಾಳಿ ಮತ್ತು ಮಣ್ಣಿನ ಗುಣಮಟ್ಟವನ್ನು ಸುಸ್ಥಿರವಾಗಿ ಬಳಸಬೇಕಾಗುತ್ತದೆ.
ಸುಸ್ಥಿರತೆ: ಕೈಗಾರಿಕೆಗಳು (ಕೃಷಿ, ಅರಣ್ಯ, ಗಣಿಗಾರಿಕೆ, ಇತ್ಯಾದಿ) ಮತ್ತು ಭೂ ಬಳಕೆ ಯೋಜನೆಗಳ ಭವಿಷ್ಯದ ಸುಸ್ಥಿರತೆ ಖಾತ್ರಿಪಡಿಸುವುದು ಒಂದು ಭಾಗವಾಗಿದೆ ಎಂದು ತಿಳಿಸಿದರು.
ಜವಾಬ್ದಾರಿ: ಇದು ಕೇವಲ ಸರ್ಕಾರ ಅಥವಾ ಕೈಗಾರಿಕೆಗಳ ಜವಾಬ್ದಾರಿಯಲ್ಲ, ಬದಲಿಗೆ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವಾಗಿದೆ. ಸರಳ ಕ್ರಮಗಳಾದ ‘3R’ (Reduce, Reuse, Recycle) ಅನ್ನು ಅನುಸರಿಸುವುದೂ ಇದರಲ್ಲಿ ಸೇರಿದೆ ಎಂದು ತಿಳಿಸಿದರು.
ತಾಂತ್ರಿಕ ಅಳವಡಿಕೆ: ಭೂಗೋಳಿಕ ಮಾಹಿತಿ ವ್ಯವಸ್ಥೆ, ದೂರ ಸಂವೇದನೆ ಮತ್ತು ಕೃತಕ ಬುದ್ಧಿಮತ್ತೆ (AI) ನಂತಹ ತಂತ್ರಜ್ಞಾನಗಳನ್ನು ಸಂಪನ್ಮೂಲಗಳ ನಿರ್ವಹಣೆಗೆ ಬಳಸಲಾಗುತ್ತದೆ ಎಂದು ಜಿಲ್ಲಾ ಸಂಯೋಜಕ ರಮೇಶ್ ತಿಳಿಸಿದರು.
ಕಾಡಿನ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಮರ ಕಡಿತದ ದರವನ್ನು ನಿಯಂತ್ರಿಸುವುದು ಮತ್ತು ಕೊಯ್ಲು ಮಾಡುವ ಸ್ಥಳಗಳನ್ನು ನಿಯಮಿತವಾಗಿ ಬದಲಾಯಿಸುವುದು. ನೀರಿನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಜಲಾನಯನ ಪ್ರದೇಶಗಳ ನಿರ್ವಹಣೆ ಮಾಡಬೇಕು. ಕೃಷಿ ಉತ್ಪಾದಕತೆ ಮತ್ತು ಮಣ್ಣಿನ ಆರೋಗ್ಯ ರಕ್ಷಣೆಗಾಗಿ ಸಂಶೋಧನಾ ಕಾರ್ಯಕ್ರಮಗಳು ಅಗತ್ಯ ಎಂದು ಅವರು ಹೇಳಿದರು.
ಜಿಲ್ಲಾ ಪಂಚಾಯತಿ ಎಡಿಪಿಸಿ ಅಂಬರೀಶ್ ಗೌಡ ಮಾತನಾಡಿ ಈ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯನ್ನು ತುರ್ತಾಗಿ ಮತ್ತು ರಾಜ್ಯದಲ್ಲಿ ಮಾದರಿಯಾಗಿ ಯುಕ್ತದಾರ ಮತ್ತು ಕ್ಲಾರ್ಟ್ ತಂತ್ರಾಂಶ ಬಳಕೆ ಮಾಡಿಕೊಂಡು ಯೋಜನೆ ತಯಾರಿಸಬೇಕು ಎಂದು ತಿಳಿಸಿದರು.
ಜಿಲ್ಲೆಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಅನುಷ್ಠಾನ ಇಲಾಖೆಯ ಅಧಿಕಾರಿಗಳು ಹಾಗೂ ನರೇಗಾ ಸಿಬ್ಬಂದಿಯವರು ಭಾಗವಹಿಸಿದ್ದರು.

