ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸ್ನಾತಕೋತ್ತರ ಅಧ್ಯಯನ ಕೇಂದ್ರ ದಾವಣಗೆರೆ ವಿಶ್ವವಿದ್ಯಾನಿಲಯ ಗುಡ್ಡದರಂಗವ್ವನಹಳ್ಳಿ ಚಿತ್ರದುರ್ಗ ಇಲ್ಲಿ ಮಹಾತ್ಮ ಪುಲೆ ಅಧ್ಯಯನ ಕೇಂದ್ರ ಚಿತ್ರದುರ್ಗ ಇವರ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ನುರಿತ ಸಂಪನ್ಮೂಲ ವ್ಯಕ್ತಿ, ಅಕ್ಕಾ ಐ ಎ ಎಸ್ ಅಕಾಡಮಿ ಬೆಂಗಳೂರು ಇದರ ಮುಖ್ಯಸ್ಥ ಡಾ.ಶಿವಕುಮಾರ್ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕು ಹಾಗೂ ಸಮಯದ ಸದ್ಬಳಕೆ ಕುರಿತು ಮಾತನಾಡಿ ದಿನದ 24 ಗಂಟೆಗಳಲ್ಲಿ ಕನಿಷ್ಠ 6 ಗಂಟೆಗಳ ಕಾಲ ಅಧ್ಯಯನ ನಡೆಸುವಂತೆ ಮಾರ್ಗದರ್ಶನ ನೀಡಿದರಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಪುಸ್ತಕಗಳ ಪರಿಚಯ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವವೆಂದರೆ ಸ್ಪರ್ಧಾರ್ಥಿಗಳಿಗೆ ಕೇವಲ ಜ್ಞಾನ ಪರೀಕ್ಷಿಸುವುದಲ್ಲದೆ, ಗುರಿ ಸಾಧನೆಗೆ ಬೇಕಾದ ಶಿಸ್ತು, ಸಮಯ ನಿರ್ವಹಣೆ, ಆತಂಕ ನಿವಾರಣೆ ಮತ್ತು ಸಮರ್ಥ ಸ್ಪರ್ಧಾತ್ಮಕತೆ ಒದಗಿಸುತ್ತದೆ. ಇದರಿಂದಾಗಿ ಐಎಎಸ್, ಐಪಿಎಸ್, ಕೆಎಎಸ್ ಸೇರಿದಂತೆ ಇತರೆ ಬ್ಯಾಂಕಿಂಗ್‌ನಂತಹ ಸರ್ಕಾರಿ ಹುದ್ದೆಗಳನ್ನು ಪಡೆಯಲು ಸಹಕಾರಿ ಮತ್ತು ದೇಶದ ಉತ್ತಮ ಆಡಳಿತಕ್ಕೆ ಅರ್ಹ ಅಧಿಕಾರಿಗಳನ್ನು ಆಯ್ಕೆ ಮಾಡಲು ಇದು ಪ್ರಮುಖ ಸಾಧನವಾಗಿದೆ ಎಂದು ತಿಳಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ:
ಐಎಎಸ್, ಐಪಿಎಸ್, ಕೆಎಎಸ್, ಪಿಎಸ್ಐ, ಬ್ಯಾಂಕಿಂಗ್, ಎಫ್ ಡಿಎ, ಎಸ್ ಡಿಎ ಮುಂತಾದ ಅನೇಕ ಸರ್ಕಾರಿ ಹುದ್ದೆಗಳಿಗೆ ಪ್ರವೇಶ ಪಡೆಯಲು ಮತ್ತು ವೃತ್ತಿ ಜೀವನಕ್ಕೆ ಮಾರ್ಗದರ್ಶನಕ್ಕೆ ಅನಿವಾರ್ಯ ಎಂದು ಹೇಳಿದರು.
ಕೇವಲ ವಿಷಯ ಜ್ಞಾನವಲ್ಲದೆ, ವೇಗದ ಬರವಣಿಗೆ, ಸಮಯ ನಿರ್ವಹಣೆ, ಒತ್ತಡ ನಿರ್ವಹಣೆ ಮತ್ತು ಏಕಾಗ್ರತೆಯಂತಹ ಕೌಶಲ್ಯಗಳನ್ನು ಬೆಳೆಸುತ್ತದೆ. ಪರೀಕ್ಷೆಯ ಮಾದರಿ, ಪಠ್ಯಕ್ರಮ, ಮತ್ತು ಆಯ್ಕೆ ಪ್ರಕ್ರಿಯೆಯ ಬಗ್ಗೆ ಅರಿವು ಮೂಡಿಸಿ, ನಿರಂತರ ಮತ್ತು ಶಿಸ್ತುಬದ್ಧ ಅಧ್ಯಯನಕ್ಕೆ ಪ್ರೇರೇಪಿಸುತ್ತದೆ ಎಂದು ತಿಳಿಸಿದರು.
ನಿಜವಾದ ಪರೀಕ್ಷೆಯ ವಾತಾವರಣವನ್ನು ಸೃಷ್ಟಿಸಿ, ನ್ಯೂನತೆಗಳನ್ನು ಗುರುತಿಸಲು ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ಸಹಾಯ ಮಾಡುತ್ತವೆ. ಪ್ರತಿಭೆ ಮತ್ತು ಅರ್ಹತೆಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಆರಿಸಲು ಸಹಾಯ ಮಾಡಿ, ಉತ್ತಮ ಆಡಳಿತಕ್ಕೆ ಕೊಡುಗೆ ನೀಡುತ್ತದೆ ಎಂದು ತಿಳಿಸಿದರು.
ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಮೊಬೈಲ್ ಬಳಕೆಗೆ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು. ಇಲ್ಲವಾದರೆ ಏಕಾಗ್ರತೆ ಹಾಳು ಮಾಡುವ ಮೊಬೈಲ್ ಬಳಕೆಯಿಂದ ದೂರ ಉಳಿಯಬೇಕು ಎಂದು ಕಿವಿ ಮಾತು ಹೇಳಿದರು.
ಸಂಕ್ಷಿಪ್ತವಾಗಿ ಹೇಳುವುದಾದರೆ, ಸ್ಪರ್ಧಾತ್ಮಕ ಪರೀಕ್ಷೆಗಳು ಉನ್ನತ ಹುದ್ದೆಗಳ ಕನಸನ್ನು ನನಸು ಮಾಡಲು, ಅಗತ್ಯ ಕೌಶಲ್ಯಗಳನ್ನು ಬೆಳೆಸಲು ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಅರ್ಹ ವ್ಯಕ್ತಿಗಳನ್ನು ರೂಪಿಸಲು ಅತ್ಯಂತ ಪ್ರಮುಖ ಸಾಧನಗಳಾಗಿವೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿ ಸಿದ್ದಲಿಂಗಯ್ಯ ಮಾತನಾಡಿ ಪರೀಕ್ಷೆಗೆ ತಯಾರಿ ನಡೆಸುವ ಕುರಿತು ಮಾಹಿತಿ ತಿಳಿಸಿದರು.
ಮಹಾತ್ಮಾಫುಲೆ ಅಧ್ಯಯನ ಕೇಂದ್ರದ ಮುಖ್ಯಸ್ಥ ಆರ್.ರಾಮಣ್ಣ ಮಾತನಾಡಿ ವಿದ್ಯಾರ್ಥಿಗಳು ಪದವಿ ವಿದ್ಯಾಭ್ಯಾಸದ ಹಂತದಲ್ಲಿ ಐಎಎಸ್, ಐಪಿಎಸ್ ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವಂತೆ ಕರೆ ನೀಡಿದರು.
ಇದರ ಸಲುವಾಗಿ ಮಹಾತ್ಮಫುಲೆ ಅಧ್ಯಯನ ಕೇಂದ್ರದ ವತಿಯಿಂದ ಮಧ್ಯಾಹ್ನದ ಅವಧಿ ನಿಗದಿಪಡಿಸಿ ಬೋಧನೆ ಹಾಗೂ ಮಾರ್ಗದರ್ಶನ ನೀಡಲಾಗುತ್ತಿದೆ ಮತ್ತು ತರಗತಿಗಳು ಡಿಸೆಂಬರ್-14ರ ಭಾನುವಾರದಿಂದ ಪ್ರಾರಂಭವಾಗಲಿದ್ದು ಆಸಕ್ತರು ಖುದ್ದಾಗಿ ಅಥವಾ ಫೋನ್ ಮೂಲಕ ಸಂಪರ್ಕಿಸಬಹುದು (9242843504) ಎಂದು ತಿಳಿಸಿದರು.
ಪ್ರಾಧ್ಯಾಪಕ ಡಾ.ವಿಜಯಕುಮಾರ್ ನಿರೂಪಿಸಿದರು. ಅಕ್ಕಾ ಐಎಎಸ್ ಅಕಾಡೆಮಿ ಮುಖ್ಯಸ್ಥ ಡಾ.ಶಿವಕುಮಾರ್ ಹಾಗೂ ಸಂಪನ್ಮೂಲ ವ್ಯಕ್ತಿ ಸಿದ್ದಲಿಂಗಯ್ಯ ಮತ್ತು ಮಹಾತ್ಮಫುಲೆ ಅಧ್ಯಯನ ಕೇಂದ್ರದ ಮುಖ್ಯಸ್ಥ ರಾಮಣ್ಣ ಆರ್ ಉಪಸ್ಥಿತರಿದ್ದರು.

