ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಪಕ್ಷಕ್ಕೆ ದೊಡ್ಡ ಶಕ್ತಿಯಾಗಿರುವ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸುವಂತೆ ಜಾತ್ಯಾತೀತ ಜನತಾದಳದ ಮಾಜಿ ಜಿಲ್ಲಾಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ ನೂತನ ಅಧ್ಯಕ್ಷ ಮಂಜುನಾಥ್ರವರಲ್ಲಿ ಮನವಿ ಮಾಡಿದರು.
ಜೆಡಿಎಸ್ ಕಚೇರಿಯಲ್ಲಿ ಸೋಮವಾರ ನಡೆದ ನೂತನ ಜಿಲ್ಲಾಧ್ಯಕ್ಷ ಮತ್ತು ತಾಲ್ಲೂಕು ಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ನಮ್ಮ ಪಕ್ಷದ ಶಾಸಕರುಗಳಿಲ್ಲದ ಕಾರಣ ಕಾರ್ಯಕರ್ತರು ಸೋತು ಬೆಂಡಾಗಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಎರಡರಿಂದ ಮೂರು ಸ್ಥಾನಗಳನ್ನಾದರೂ ಗೆಲ್ಲಬೇಕು. ಪಕ್ಷದಲ್ಲಿ ಅನುಭವಿಗಳಿದ್ದಾರೆ. ಎಲ್ಲರ ಸಲಹೆ ಮಾರ್ಗದರ್ಶನದಂತೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವಂತೆ ತಿಳಿಸಿದರು.
ಕಾರ್ಯಕರ್ತರು ಪಕ್ಷವನ್ನು ನಂಬಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಶಾಸಕರಿಲ್ಲದಿದ್ದರು ಕಾರ್ಯಕರ್ತರು ಪಕ್ಷ ಬಿಡದೆ ನಿಷ್ಟರಾಗಿದ್ದಾರೆ. ಪಾರ್ಲಿಮೆಂಟ್ ಚುನಾವಣೆಯಲ್ಲಿ ಬಿಜೆಪಿ. ಜೊತೆ ಮೈತ್ರಿ ಮಾಡಿಕೊಂಡ ಫಲವಾಗಿ ಸಂಸದ ಗೋವಿಂದ ಕಾರಜೋಳರವರ ಗೆಲುವು ಸುಲಭವಾಯಿತು ಎಂದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡಿ ಒಂದು ಕಾಲದಲ್ಲಿ ಜೆಡಿಎಸ್ ಭದ್ರಕೋಟೆಯಾಗಿದ್ದ ಚಿತ್ರದುರ್ಗ ಈಗ ಅಧಿಕಾರ ಕಳೆದುಕೊಂಡಿದೆ. ಹಿರಿಯೂರಿನಿಂದ ಗೆದ್ದಿದ್ದ ಡಿ.ಮಂಜುನಾಥ್ರವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ರಾಷ್ಟ್ರೀಯ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ತಂತ್ರಗಾರಿಕೆ ಹೆಣೆಯಬೇಕಿದೆ. ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಗಟ್ಟಿಯಾಗದಿದ್ದರೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿ.ಫಾರಂ ಪಡೆಯುವುದು ಕಷ್ಟವಾಗುತ್ತದೆ ಎಂದು ಅವರು ಎಚ್ಚರಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ೨ ರಿಂದ ಮೂರು ಕ್ಷೇತ್ರಗಳಲ್ಲಾದರೂ ಗೆಲ್ಲಬೇಕು. ಚಳ್ಳಕೆರೆ, ಹಿರಿಯೂರಿನಲ್ಲಿ ಪಕ್ಷವನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ಕಾರ್ಯಕರ್ತರುಗಳಿಗಿದೆ. ಯಾವುದೇ ಕಾರಣಕ್ಕೂ ಭಿನ್ನಮತ, ಪ್ರತಿಷ್ಟೆಯನ್ನು ದೂರವಿಟ್ಟು ಪಕ್ಷಕ್ಕೆ ಅಧಿಕಾರ ಕೊಡಿಸುವಲ್ಲಿ ನಿಮ್ಮ ಪಾತ್ರ ದೊಡ್ಡದು. ಚುನಾವಣೆಯಲ್ಲಿ ಹುಡುಗಾಟ ಬೇಡ. ಮೈತ್ರಿಯಲ್ಲಿ ಯಶಸ್ಸು ಕಾಣದಿದ್ದರೆ ಎಂದೆಂದೂ ಅಧಿಕಾರ ಪಡೆಯಲು ಆಗಲ್ಲ ಎಂದು ಹೇಳಿದರು.
ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡಿ ಬುಡಕಟ್ಟು ಜನಾಂಗ ಪ್ರಬಲವಾಗಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುವ ನಾಯಕತ್ವ ಬೇಕು. ನೂತನ ಅಧ್ಯಕ್ಷ ಮಂಜುನಾಥ್ಗೆ ಜಿಲ್ಲೆಯಲ್ಲಿ ಹೂವಿನ ಹಾಸಿಗೆಯಿಲ್ಲ. ಅನೇಕ ಸವಾಲುಗಳಿವೆ. ಸ್ಥಿರವಾದ ನಾಯಕತ್ವವಿಲ್ಲದ ಕಡೆ ಅರಾಜಕತೆಯಿರುತ್ತದೆ. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಪಕ್ಷವನ್ನು ಗೆಲ್ಲಿಸುವತ್ತ ಗಮನ ಕೊಡುವಂತೆ ನೂತನ ಅಧ್ಯಕ್ಷರಿಗೆ ಕರೆ ನೀಡಿದರು.
ರಾಷ್ಟ್ರೀಯ ಪಕ್ಷದ ಜೊತೆ ಮಾಡಿಕೊಂಡಿರುವ ಮೈತ್ರಿ ಮಲಿನವಾಗಬಾರದು. ಬೇಗುದಿ, ಕೆಟ್ಟ ಭಾವನೆ ಬಿದಿಗಿಟ್ಟು ಪಕ್ಷ ಗೆಲ್ಲಿಸಿಕೊಳ್ಳಬೇಕು. ಪ್ರಾಮಾಣಿಕ ಕಾರ್ಯಕರ್ತರ ಶ್ರಮಕ್ಕೆ ಬೆಲೆ, ಗೌರವ ಸಿಗಬೇಕು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗಿನಿಂದಲು ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕಾಗಿ ಬಳಸಿಕೊಳ್ಳುತ್ತಿದೆಯೇ ವಿನಃ ಯಾವುದೇ ಅಧಿಕಾರ ನೀಡಿಲ್ಲ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವಲ್ಲಿ ನಿಮ್ಮ ಜೊತೆ ಹೆಜ್ಜೆ ಹಾಕುತ್ತೇವೆ. ಯಾದವರಿಗೆ ಒಮ್ಮೆಯೂ ಕಾಂಗ್ರೆಸ್ನಲ್ಲಿ ಅಧಿಕಾರಸಿಕ್ಕಿಲ್ಲ. ನಮ್ಮ ವರಿಷ್ಟರು ಯಾದವ ಸಮಾಜದ ಮಂಜುನಾಥ್ರವರನ್ನು ಗುರುತಿಸಿ ಜಿಲ್ಲಾಧ್ಯಕ್ಷ ಸ್ಥಾನ ನೀಡಿದೆ ಎಂದರು.
ಜೆಡಿಎಸ್ ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿದ್ದು, ಜಿಲ್ಲೆಯಲ್ಲಿ ಹೊಸ ಭಾಷ್ಯ ಶುರವಾಗಿದೆ. ಮುಂದೆ ಕಠಿಣ ಪರೀಕ್ಷೆ ಕಾದಿರುವುದರಿಂದ ಪರಿಶುದ್ದ ಮನಸ್ಸಿನಿಂದ ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ನೂತನ ಅಧ್ಯಕ್ಷ ಕೆ.ಮಂಜುನಾಥ್ರವರಿಗೆ ಸೂಚಿಸಿದರು.
ನೂತನ ಜಿಲ್ಲಾಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿದ ಕೆ.ಮಂಜುನಾಥ್ ಮಾತನಾಡಿ ಮುಂಬರುವ ಎಲ್ಲಾ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಿಕೊಳ್ಳಬೇಕಾದರೆ ತಳಮಟ್ಟದಿಂದ ಪಕ್ಷ ಕಟ್ಟಬೇಕು. ಮಾಜಿ ಜಿಲ್ಲಾಧ್ಯಕ್ಷರುಗಳು ಹಾಗೂ ಕಾರ್ಯಕರ್ತರು, ಮುಖಂಡರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಜೆಡಿಎಸ್ ಎಂದಿಗೂ ಕಾಡುಗೊಲ್ಲರು ಯಾದವರ ವಿರೋಧಿಯಲ್ಲ. ಸಂಘಟನೆಯಲ್ಲಿ ಬೇಜವಾಬ್ದಾರಿ ತೋರಲ್ಲ ಎಂದು ಆಶ್ವಾಸನೆ ನೀಡಿದರು.
ಹಿರಿಯೂರು ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ರವೀಂದ್ರಪ್ಪ ಮಾತನಾಡಿ ಸಾಮಾಜಿಕ ನ್ಯಾಯದ ಮೇಲೆ ನಂಬಿಕೆಯಿಟ್ಟುಕೊಂಡಿರುವ ಜೆಡಿಎಸ್.ನಿಂದ ಮಾತ್ರ ತಳ ಮಟ್ಟದ ಕಾರ್ಯಕರ್ತನು ಅಧಿಕಾರ ಹಿಡಿಯಬಹುದು. ಹೆಚ್.ಡಿ.ಕುಮಾರಸ್ವಾಮಿರವರು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನ ಮಾಡಿ ಪಕ್ಷ ಸದಾ ಅನ್ನದಾತ ರೈತನ ಪರವಾಗಿದೆ ಎನ್ನುವುದನ್ನು ಸಾಬೀತುಪಡಿಸಿದ್ದರು. ಈಗಿನ ಕಾಂಗ್ರೆಸ್ ಸರ್ಕಾರ ಜನರ ತೆರಿಗೆ ಹಣದಿಂದಲೇ ಬಿಟ್ಟಿ ಭಾಗ್ಯಗಳನ್ನು ನೀಡಿ ಖಜಾನೆಯನ್ನು ದಿವಾಳಿಯಾಗಿಸಿದೆ. ಯಾವುದೇ ಅಭಿವೃದ್ದಿ ಕೆಲಸಗಳಾಗುತ್ತಿಲ್ಲ. ಇನ್ನಾದರೂ ಜನ ಎಚ್ಚೆತ್ತುಕೊಂಡು ಮುಂಬರುವ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸುವಂತೆ ಮನವಿ ಮಾಡಿದರು.
ಕೆ.ಮಂಜುನಾಥ್ರವರ ಪಕ್ಷ ನಿಷ್ಠೆಯನ್ನು ಗುರುತಿಸಿ ವರಿಷ್ಠರು ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ಇದರಿಂದ ಯಾದವ ಜನಾಂಗಕ್ಕೆ ಸಾಮಾಜಿಕ ನ್ಯಾಯ ಸಿಕ್ಕಂತಾಗಿದೆ. ಸಾಮಾನ್ಯ ಕಾರ್ಯಕರ್ತನನ್ನು ಜೊತೆಗೆ ತೆಗೆದುಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಸದೃಢಗೊಳಿಸುವಂತೆ ಹೇಳಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಜೆ.ಬಿ.ಶೇಖರ್, ಮಹಾ ಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ನಗರಸಭೆ ಮಾಜಿ ಸದಸ್ಯ ನಸ್ರುಲ್ಲಾ, ಯುವ ವಕೀಲ ಓ.ಪ್ರತಾಪ್ಜೋಗಿ, ಮಠದಹಟ್ಟಿ ವೀರಣ್ಣ, ಎಂ.ಡಿ.ರಮೇಶ್ಕುಮಾರ್, ಶಿವಪ್ರಸಾದ್ಗೌಡ, ಶಂಕರಮೂರ್ತಿ, ಶಿವಶಂಕರ್, ವೀರಭದ್ರ, ಕರಿಬಸಪ್ಪ, ಆನಂದ, ತಿಪ್ಪೀರಣ್ಣ, ಹನುಮಂತರಾಯ ಇನ್ನು ಅನೇಕರು ವೇದಿಕೆಯಲ್ಲಿದ್ದರು.

