ಪತ್ರಿಕಾ ವಿತಕರು ಪತ್ರಿಕಾ ಕ್ಷೇತ್ರದ ನರಮಂಡಲ: ಕೆ.ವಿ.ಪ್ರಭಾಕರ್

News Desk

ಚಂದ್ರವಳ್ಳಿ ನ್ಯೂಸ್, ಚನ್ನರಾಯಪಟ್ಟಣ:
ನಿತ್ಯ ಬೆಳಗ್ಗೆ ಕೋಳಿ  ಕೂಗುವ ಮೊದಲೇ ಎದ್ದು ಕೆಲಸಕ್ಕೆ ಹೊರಡುವ ಪತ್ರಿಕಾ ವಿತಕರು ಪತ್ರಿಕಾ ಕ್ಷೇತ್ರದ ನರಮಂಡಲ ಇದ್ದಂತೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹೇಳಿದರು.

ರಾಜ್ಯ ಪತ್ರಿಕಾ ವಿತರಕರ ಸಂಘ, ಹಾಸನ ಜಿಲ್ಲಾ ಪತ್ರಿಕಾ ವಿತರಕರ ಸಂಘ, ಚನ್ನರಾಯಪಟ್ಟಣ ತಾಲೂಕು ಪತ್ರಿಕಾ ವಿತರಕರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಹಾಸನ ಜಿಲ್ಲಾ ಪತ್ರಿಕಾ ವಿತರಕರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಪತ್ರಿಕೋದ್ಯಮದ ನರಮಂಡಲ ಇದ್ದಹಾಗೆ. ನರ ಮಂಡಲ ಇದ್ದರಷ್ಟೆ ಮನುಷ್ಯನ ದೇಹ ಕೆಲಸ ಮಾಡುವುದು. ಹಾಗೆಯೇ ಪತ್ರಿಕಾ ವಿತರಕರು ಪತ್ರಿಕಾ ಕ್ಷೇತ್ರದ ನರಮಂಡಲ. ಇಡೀ ದೇಶದ ಬೀದಿ ಬೀದಿಗಳಲ್ಲಿ ಓಡಾಡಿ ಸುದ್ದಿ ವಿತರಣೆ ಮಾಡುವ ವಿತರಕರು ಇಲ್ಲದೆ ಮುದ್ರಣಗೊಂಡ ಪತ್ರಿಕೆಗಳಿಗೆ ಮೋಕ್ಷ ಸಿಗುವುದಿಲ್ಲ ಎಂದು ನುಡಿದರು.

ಈ ನರಮಂಡಲಕ್ಕೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಮಾತೃ ಹೃದಯ. ಈ ಬಾರಿಯ ಬಜೆಟ್ ನಲ್ಲೂ ಪತ್ರಿಕಾ ಕಾರ್ಮಿಕರಿಗೆ ಅನುಕೂಲ ಆಗುವ ಭರವಸೆ ಇದೆ ಎಂದು ತಿಳಿಸಿದರು.

ಕಾರ್ಮಿಕ ಇಲಾಖೆಯಿಂದ ಈಗಾಗಲೇ ಸಾಕಷ್ಟು  ಸವಲತ್ತುಗಳು ಸಿಗುತ್ತಿವೆ.  ಈಗ ಆರೋಗ್ಯ ವಿಮೆಯ ಬೇಡಿಕೆ ಕೂಡ ಈಡೇರಿದೆ. ವಿತರಕರು ಹೆಚ್ಚೆಚ್ಚು ಸಂಘಟಿತರಾದಷ್ಟೂ  ತಮ್ಮ ಬೇಡಿಕೆಗಳಿಗೆ ಶಕ್ತಿ ಬರುತ್ತದೆ ಎಂದು ತಿಳಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕಾರ್ಯನಿರತ ಪತ್ರಕರ್ತರ ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಬಿ.ವಿ ಮಲ್ಲಿಕಾರ್ಜುನಯ್ಯ, ಮದನ್ ಗೌಡ, ಪತ್ರಿಕಾ ವಿತರಕರ ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗ ಸೇರಿದಂತೆ ಮತ್ತಿತರರು ಹಾಜರಿದ್ದರು.

Share This Article
error: Content is protected !!
";