ರಾಜ್ಯದಲ್ಲಿ ಬೆಲೆ ಏರಿಕೆ ಸಾಮಾನ್ಯವಾಗಿದೆ, ಸಾರ್ವಜನಿಕರು ಅಡ್ಜೆಸ್ಟ್ ಆಗಿದ್ದಾರೆ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆಯುವುದು
, ಅದನ್ನು ಜನರೂ ಭರಿಸಿಕೊಂಡು ಹೋಗುವುದು ಮಾಮೂಲಾಗಿ ಬಿಟ್ಟಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಜೆ.ಪಿ ನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೇ.15ರಷ್ಟು ಬಸ್ ಪ್ರಯಾಣ ದರ ಹೆಚ್ಚಳ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ ರಾಜ್ಯದಲ್ಲಿ ಸರ್ಕಾರ ಎನ್ನುವುದು ಇದೆಯಾ?. ಇದನ್ನು ಸರ್ಕಾರ ಎಂದು ಕರೆಯುತ್ತಾರಾ?. ಈ ಸರ್ಕಾರ ಬಂದಾಗಿನಿಂದ ಬರೀ ಬೆಲೆ ಏರಿಕೆ ಮಾಡುವುದೇ ಆಗಿದೆ. ದರ ಏರಿಕೆ, ಬೆಲೆ ಏರಿಕೆ ಎನ್ನುವುದು ಕರ್ನಾಟಕದಲ್ಲಿ ಅಚ್ಚರಿಯ ವಿಷಯ ಅಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಾರಿಗೆ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಏರಿಕೆ ಮಾಡಿ ಜನರ ಮೇಲೆ ದೊಡ್ಡ ಹೊರೆ ಹಾಕಿದೆ. ಜನರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರಿಗೂ ಅಭ್ಯಾಸವಾಗಿ ಹೋಗಿದೆ. ಎರಡು ದಿನ ಆಕ್ರೋಶ ವ್ಯಕ್ತಪಡಿಸಿ ಮೂರನೇ ದಿನ ಮರೆತು ಹೋಗಿ ಪ್ರಯಾಣ ದರ ಏರಿಕೆಗೇ ಅಡ್ಜೆಸ್ಟ್ ಆಗುತ್ತಾರೆ. ಇದು ನೈಜ ಪರಿಸ್ಥಿತಿ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಸರ್ಕಾರ ಡಿಸೇಲ್, ಪೆಟ್ರೋಲ್ ಮೇಲೆ ಸೆಸ್ ಹಾಕಿ ಆರ್ಥಿಕ ಹೊರ ಹೇರಿತ್ತು. ಜನರು ಪ್ರತಿಭಟನೆ ಮಾಡಿದರೇ?, ಇಲ್ಲ. ಅದಕ್ಕೆ ಅಡ್ಜೆಸ್ಟ್ ಆದರು. ಮುದ್ರಾಂಕ ಶುಲ್ಕ ಹೆಚ್ಚಳ ಮಾಡಿದರು. ಗೈಡ್ ಲೈನ್ಸ್ ವ್ಯಾಲ್ಯೂ, ಮದ್ಯದ ದರ ಏರಿಕೆ ಮಾಡಿದರು. ಹಾಲಿನ ದರ ಏರಿಕೆ ಮಾಡಿದ್ದು ಮತ್ತೇ ಏರಿಕೆ ಮಾಡುತ್ತಾರಂತೆ.

ನೀರಿನ ದರವೂ ಏರಿಕೆ ಆಗುತ್ತದೆ ಎನ್ನುವ ಮಾಹಿತಿ ಬರುತ್ತಿದೆ. ಎಲ್ಲಾ ದರಗಳನ್ನು ಸರ್ಕಾರ ಏರಿಕೆ ಮಾಡುತ್ತಿದೆ. ಆದರೆ, ಗ್ಯಾರಂಟಿ ಸಂತೋಷದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿಲ್ಲ, ಪ್ರತಿಭಟನೆ ಮಾಡುತ್ತಿಲ್ಲ. ಬೆಲೆ ಏರಿಕೆಗೆ ಜನರ ಸಮ್ಮತಿ ಇದೆ ಎಂದು ಸರ್ಕಾರ ಭಾವಿಸಿದಂತಿದೆ ಎಂದು ಕುಮಾರಸ್ವಾಮಿ ಹೇಳಿದರು.

ಸರ್ಕಾರ ಅಭಿವೃದ್ಧಿಗೆ ಹೊಸ ಕಾರ್ಯಕ್ರಮ ಘೋಷಣೆ ಮಾಡಬೇಕಿತ್ತು. ಆದರೆ ಬೆಲೆ ಏರಿಕೆ ಘೋಷಣೆ ಮಾಡಿದೆ. ಬೆಲೆ ಏರಿಕೆಗೆ ವರ್ಷಪೂರ್ತಿ ತಯಾರಾಗಿ ಎನ್ನುವ ಸಂದೇಶವನ್ನು ಹೊಸ ವರ್ಷದ ಆರಂಭದಲ್ಲೇ ಸರ್ಕಾರ ಜನರಿಗೆ ಸಂದೇಶ ನೀಡಿದೆ. ಹಿಂದಿನ ಸರ್ಕಾರಗಳು ಅನಿವಾರ್ಯವಿದ್ದಾಗ ಬೆಲೆ ಏರಿಕೆ ಮಾಡುವುದು, ಕಡಿಮೆ ಮಾಡುವುದು ಸಾಮಾನ್ಯ. ಆದರೆ, ಇವರು ಮಾಡಿರುವ ತಪ್ಪಿಗೆ ಜನರ ಮೇಲೆ ಬರೆ ಎಳೆಯುತ್ತಿದ್ದಾರೆ. ಎಲ್ಲ ಸಮಸ್ಯೆಗಳನ್ನೂ ಸರ್ಕಾರವೇ ಮೈ ಮೇಲೆ ಎಳೆದುಕೊಂಡಿದೆ ಎಂದು ಕುಮಾರಸ್ವಾಮಿ ಟೀಕಿಸಿದರು.

ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಬೆಲೆ ಏರಿಕೆ ಮಾಡಲಾಗುತ್ತಿದೆ. ವಿದ್ಯುತ್ ಇಲಾಖೆ ಏನಾಗುತ್ತದೋ ನೋಡಬೇಕು. ಸರ್ಕಾರದ ಅಸಮರ್ಪಕ ನಿರ್ವಹಣೆಯಿಂದ ಇಲಾಖೆ ಹಾಳಾಗುತ್ತಿದೆ. ಗ್ಯಾರಂಟಿಗಳಲ್ಲಿ ಯುವನಿಧಿ ಯೋಜನೆ ಮಾಡಿದ್ದಾರೆ. ಇದುವರೆಗೆ ಎಷ್ಟು ಯುವ ಜನರಿಗೆ ಹಣ ಸಿಕ್ಕಿದೆ. ಈ ಸರ್ಕಾರ ಸ್ವೇಚ್ಛಾಚಾರವಾಗಿ ಹಣ ಖರ್ಚು ಮಾಡುತ್ತಿದೆ. ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದರ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಕುಮಾರಸ್ವಾಮಿ ಮನವಿ ಮಾಡಿದರು.

 

- Advertisement -  - Advertisement - 
Share This Article
error: Content is protected !!
";