ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿ ನರೇಂದ್ರ ಮೋದಿ ಅವರ ರೈತ ಕಾಳಜಿ ಹಾಗೂ ಕೃಷಿ ಬದ್ಧತೆಯ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ರಾಜ್ಯದ 20.40 ಲಕ್ಷ ರೈತರು ವಿಮೆ ನೋಂದಣಿ ಮಾಡಿಸಿಕೊಂಡಿರುವ ವರದಿ ಸಾರ್ಥಕತೆಯ ಭಾವ ಮೂಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕದಲ್ಲಿ ರೈತ ಬಂಧುಗಳಿಗೆ ಅತಿ ಹೆಚ್ಚು ಜಾಗೃತಿ ಮೂಡಿಸಿದ ಫಲವಾಗಿ ಕಲಬುರಗಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಹಾವೇರಿ ಜಿಲ್ಲೆ ದ್ವಿತೀಯ ಸ್ಥಾನ ಗಳಿಸಿರುವುದು ಅಭಿನಂದನೀಯ ದಾಖಲೆಯಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸಿ ರೈತರಲ್ಲಿ ಜಾಗೃತಿ ಮೂಡಿಸಿದ ಜಿಲ್ಲೆಯ ಅಧಿಕಾರಿಗಳನ್ನೂ ಅವರು ಅಭಿನಂದಿಸಿದ್ದಾರೆ.
ರೈತಾಪಿ ವರ್ಗ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೇಂದ್ರ ಸರ್ಕಾರದ ರೈತ ಪರ ಯೋಜನೆಗಳನ್ನು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುವಂತಾಗಲು ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತಗಳು ಇನ್ನಷ್ಟು ಕಾಳಜಿ ವಹಿಸುವಂತಾಗಲಿ.
ಫಸಲ್ ಬಿಮಾ ಯೋಜನೆ ನಾಡಿನ ಗ್ರಾಮೀಣ ಪ್ರದೇಶದ ಪ್ರತಿ ರೈತರ ಮನೆಯಬಾಗಿಲಿಗೂ ತಲುಪುವಂತಾಗಲಿ, ಅದಕ್ಕಾಗಿ ನಾವೆಲ್ಲರೂ ಕೈಜೋಡಿಸೋಣ. ಪೂರಕ ಮುಂಗಾರಿನ ಈ ಹೊತ್ತಿನಲ್ಲಿ ನಾಡಿನ ರೈತರ ಬದುಕು ಹಸನಾಗಲಿ ಎಂದು ವಿಜಯೇಂದ್ರ ಹಾರೈಸಿದ್ದಾರೆ.

