ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಸಾಮಾಜಿಕ ಸಮಾನತೆಯನ್ನು ಆಚರಣೆಯಲ್ಲೂ ತಂದು ವಚನಗಳ ಬೆಳಕು ನೀಡಿದ ಮಹಾನ್ ಮಾನವತವಾದಿ ಬಸವೇಶ್ವರರು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈವಿಜಯೇಂದ್ರ ಅಭಿಪ್ರಾಯಪಟ್ಟರು.
ಮಂಡ್ಯದ ಮೈಷುಗರ್ ಮೈದಾನದಲ್ಲಿ ಸುತ್ತೂರು ಶ್ರೀ ಮಠದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳವರ ದಿವ್ಯ ಸಾನಿಧ್ಯದಲ್ಲಿ, ಸಿದ್ದಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ವಿಶ್ವಗುರು ಶ್ರೀ ಬಸವೇಶ್ವರರ 892 ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾನತೆ, ಭಕ್ತಿ ಮತ್ತು ನಾಗರಿಕ ಮೌಲ್ಯಗಳ ಹಂಚಿಕೆಯ ಆಧಾರದಲ್ಲಿ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದ ಮಹಾನ್ ಸಂತ ಬಸವೇಶ್ವರಿಗೆ ಮನುಕುಲವು ಚಿರಋಣಿಯಾಗಿದೆ. ಅವರ ಸಮಸಮಾಜ ಕಟ್ಟುವ ಕಾಯಕ ತತ್ವಗಳು ಅತ್ಯುತ್ತಮ ಮಾನವೀಯ ಮೌಲ್ಯಗಳ ಜಗತ್ತನ್ನು ನಿರ್ಮಾಣ ಮಾಡಲು ಸದಾ ಸ್ಫೂರ್ತಿ ನೀಡಲಿದೆ.
ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ ಯವರು ಸಹ ಬಸವಣ್ಣನವರ ತತ್ವವನ್ನು ಅನುಸರಿಸಿ ಮುನ್ನಡೆಯುತ್ತಿದ್ದು, ವಿಶ್ವಕರ್ಮ, ಮೇಕ್ ಇನ್ ಇಂಡಿಯಾ, ಕೌಶಲ್ಯ ಭಾರತ ಮೊದಲಾದ ಅನೇಕ ಯೋಜನೆಗಳಿಗೆ ಅವರಿಗೆ ಸ್ಪೂರ್ತಿ ನೀಡಿದ್ದು ಬಸವಣ್ಣನವರ ಕಾಯಕ ಕ್ರಾಂತಿ. ಆದ್ದರಿಂದ ನಾವೆಲ್ಲರೂ ಬಸವತತ್ವ ಅನುಸರಿಸಿ, ಸ್ವಾವಲಂಬಿ ಭಾರತ ಹಾಗೂ ಸಮೃದ್ಧ ಕರ್ನಾಟಕಕ್ಕಾಗಿ ಯುವ ಸಮುದಾಯ ದುಡಿಯಬೇಕೆಂಬ ಸಂಕಲ್ಪ ಮಾಡಲಾಯಿತು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪರಮಪೂಜ್ಯ ಡಾ.ಕರಿವೃಷಭದೇಶಿಕೇಂದ್ರ ಶ್ರೀಗಳು, ಪರಮಪೂಜ್ಯ ಚನ್ನಬಸವ ಶ್ರೀಗಳು, ಪರಮಪೂಜ್ಯ ಚಂದ್ರಶೇಖರ ಶ್ರೀಗಳು, ಪರಮಪೂಜ್ಯ ತ್ರಿನೇತ್ರ ಮಹಾಂತ ಶ್ರೀಗಳು, ಸಚಿವ ಎಂ.ಬಿ.ಪಾಟೀಲ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ,
ಶಾಸಕ ರವಿ ಗಣಿಗ, ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮುಖಂಡರಾದ ಇಂಡವಾಳು ಸಚ್ಚಿದಾನಂದ್, ಅಶೋಕ್ ಜಯರಾಂ, ಸ್ವಾಮಿ ಸೇರಿದಂತೆ ಸ್ಥಳೀಯ ಮುಖಂಡರು, ಭಕ್ತಾದಿಗಳು, ಸಮಾಜದ ಬಂಧುಗಳು ಉಪಸ್ಥಿತರಿದ್ದರು.