ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನಿಮಂತ್ರಿ ನರೇಂದ್ರ ಮೋದಿ ಅವರು 2025ನೇ ಸಾಲಿನ ಕೊನೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದುಬೈನ ‘ಕನ್ನಡ ಪಾಠ ಶಾಲೆ’ ಬಗ್ಗೆ ಉಲ್ಲೇಖಿಸಿದ್ದಾರೆ.
ನಮ್ಮ ಮಕ್ಕಳು ಟೆಕ್ವರ್ಲ್ಡ್ನಲ್ಲಿ ಪ್ರಗತಿ ಹೊಂದುತ್ತಿದ್ದಾರೆ. ಆದರೆ ಅವರು ತಮ್ಮ ನೆಲದ ಭಾಷೆಯಾದ ಕನ್ನಡದಿಂದ ದೂರ ಆಗುತ್ತಿದ್ದಾರೆ ಎಂಬ ಉದ್ದೇಶದಿಂದ ದುಬೈನಲ್ಲಿ ಕನ್ನಡ ಪಾಠ ಶಾಲೆ ಆರಂಭವಾಯ್ತು ಎಂದಿದ್ದಾರೆ. ಆ ಮೂಲಕ ದುಬೈ ಕನ್ನಡಿಗರ ಕನ್ನಡ ಭಾಷಾ ಪ್ರೇಮದ ಬಗ್ಗೆ ಮೋದಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ದುಬೈ ‘ಕನ್ನಡ ಶಾಲೆ’?
ಕರ್ನಾಟಕದ ಹೊರಗಿನ ಅತಿ ದೊಡ್ಡ ಕನ್ನಡ ಭಾಷಾ ಶಾಲೆ ಆಗಿರುವ ‘ಕನ್ನಡ ಪಾಠ ಶಾಲೆ’ ದುಬೈನಲ್ಲಿ 2014ರಿಂದ ಕಾರ್ಯನಿರ್ವಹಿಸುತ್ತಿದೆ.
ದುಬೈನಲ್ಲಿರುವ ಕನ್ನಡಿಗ ಮಕ್ಕಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಬೆಳೆಸುವ ಸದುದ್ದೇಶದಿಂದ ಕನ್ನಡಿಗರಿಂದಲೇ ಈ ಶಾಲೆ ಆರಂಭವಾಗಿದ್ದು, ವಾರಾಂತ್ಯಗಳಲ್ಲಿ ತರಗತಿಗಳು ನಡೆಯುತ್ತವೆ.
ಸ್ವಯಂಸೇವಕ ಶಿಕ್ಷಕರು ಉಚಿತವಾಗಿ ಕನ್ನಡ ಕಲಿಸೋದು ಕೂಡ ಇದರ ವಿಶೇಷ. ‘ಕನ್ನಡ ಮಿತ್ರರು’ ಎಂಬ ಸಂಘಟನೆ ಈ ಶಾಲೆಯನ್ನು ನಡೆಸಿಕೊಂಡು ಬಂದಿದೆ.
‘ಕನ್ನಡ ಪಾಠ ಶಾಲೆ’ ಆರಂಭಿದ್ದು ಏಕೆ?
ದುಬೈಗೆ ಕೆಲಸಕ್ಕಾಗಿ ಸಾವಿರಾರು ಕನ್ನಡಿಗರು ವಲಸೆ ಬರುತ್ತಾರೆ. ಹೀಗಾಗಿ ಅವರ ಮಕ್ಕಳು ತಮ್ಮ ಮೂಲ ನೆಲದ ಭಾಷೆ ಕಲಿಯಲು ಸಾಧ್ಯವಾಗುತ್ತಿಲ್ಲ. ಪೋಷಕರು ಕೂಡ ಕೆಲಸಕ್ಕೆ ಹೋಗುವ ಕಾರಣ ಅವರಿಗೂ ಮಕ್ಕಳಿಗೆ ತಮ್ಮ ಭಾಷೆಯ ಬಗ್ಗೆ ಹೇಳಿಕೊಡಲು ಸಮಯ ಇರುವುದಿಲ್ಲ. ಹೀಗಾಗಿ ಅಂತಹ ಮಕ್ಕಳಿಗೆ ಕನ್ನಡ ಕಲಿಸಬೇಕು ಎಂಬ ಉದ್ದೇಶದೊಂದಿಗೆ 50 ಜನರ ತಂಡ ಈ ಶಾಲೆ ಆರಂಭಿಸಿದೆ. ಉಚಿತ ಕನ್ನಡ ಪಾಠದ ಜೊತೆಗೆ ಇದಕ್ಕೆ ಅಗತ್ಯವಿರುವ ಪಠ್ಯಕ್ರಮವನ್ನೂ ಇವರೇ ವಿನ್ಯಾಸಗೊಳಿಸಿದ್ದಾರೆ.
ಹಂತ ಹಂತವಾಗಿಯೇ ಕನ್ನಡ ಪಾಠ ಇಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ವರ್ಣಮಾಲೆ, ಸಂಖ್ಯೆಗಳ ಪರಿಚಯ, ಎರಡನೇ ಹಂತದಲ್ಲಿ ಪದ ಮತ್ತು ವಾಕ್ಯಗಳ ರಚನೆ ಹೇಳಿಕೊಡಲಾಗುತ್ತೆ. ಮೂರನೇ ಹಂತದಲ್ಲಿ ವ್ಯಾಕರಣ ಸೇರಿ ಇತರ ವಿಷಯಗಳ ಪಾಠ ಹೇಳಿಕೊಡಲಾಗುತ್ತೆ. ಈ ಸಾಧನೆ ರಾಜ್ಯದಲ್ಲೂ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಉಚಿತ ಕನ್ನಡ ಕಲಿಕಾ ಶಾಲೆಯೊಂದು ತೆರೆಯಬೇಕಾಗಿದೆ.

