ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿದ್ಯಾರ್ಥಿಗಳು ಪರಿಣಾಮಕಾರಿ ಸಂವಹನ ನಡೆಸಲು ಶಬ್ಧ ಭಂಡಾರವು ಸಹಕಾರಿಯಾಗಿದೆ ಎಂದು ಡಯಟ್ ಪ್ರಾಂಶುಪಾಲ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ನಲ್ಲಿ ಸೋಮವಾರ ಡಿ.ಎಸ್.ಇ.ಆರ್.ಟಿ, ಎಸ್.ಎಸ್.ಕೆ ಮತ್ತು ಬಾಲ ರಕ್ಷಾ ಭಾರತ್ ಸಹಯೋಗದಲ್ಲಿ ಹೊರತಂದಿರುವ ‘ದ್ವಿಭಾಷಾ ನಿಘಂಟು’ ಶೈಕ್ಷಣಿಕ ಅನುಷ್ಟಾನಾಧಿಕಾರಿಗಳಿಗೆ ವಿತರಿಸಿ ಅವರು ಮಾತನಾಡಿದರು.
ಶಬ್ಧ ಭಂಡಾರದ ಜ್ಞಾನವು ವಿದ್ಯಾರ್ಥಿಗಳಿಗೆ ಮಾಹಿತಿ, ಪರಿಕಲ್ಪನೆಗಳನ್ನು ಅರ್ಥೈಸಲು, ವಿಶ್ಲೇಷಿಸಲು ಅನುವು ಮಾಡಿಕೊಡುತ್ತದೆ. ಮನೆ ಭಾಷೆ ಮತ್ತು ಇಂಗ್ಲೀಷ್ನಲ್ಲಿ ಹೊಸ ಪದಗಳನ್ನು ತಿಳಿಯಲು ಪಠ್ಯಕ್ರಮ ಆಧಾರಿತ ಚಿತ್ರಸಹಿತ ದ್ವಿಭಾಷಾ ನಿಘಂಟು ಅಭಿವೃದ್ಧಿಪಡಿಸಲಾಗಿದೆ. ಪಠ್ಯಕ್ರಮ ಆಧಾರಿತ (ಕನ್ನಡ–ಇಂಗ್ಲೀಷ್) ನಿಘಂಟನ್ನು ಪ್ರಾಥಮಿಕ ಹಂತದ 6-14 ವರ್ಷ ವಯಸ್ಸಿನವರಿಗೆ ವಿನ್ಯಾಸಗೊಳಿಸಿದ್ದು, 1 ರಿಂದ 8 ನೇ ತರಗತಿ ವಿದ್ಯಾರ್ಥಿಗಳಿಗೆ ತಯಾರಿಸಲಾಗಿದೆ. 1 ರಿಂದ 5ನೇ ತರಗತಿಗೆ ಕನ್ನಡ, ಗಣಿತ, ಪರಿಸರ ಅಧ್ಯಯನ 6 ರಿಂದ 8 ನೇ ತರಗತಿಗೆ ಕನ್ನಡ, ಇಂಗ್ಲೀಷ್, ಹಿಂದಿ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳನ್ನೊಳಗೊಂಡ ಪ್ರಮುಖ ಮತ್ತು ಅವಶ್ಯಕ ಪದಗಳನ್ನು ಈ ನಿಘಂಟಿನಲ್ಲಿ ಅಳವಡಿಸಿರುವುದರಿಂದ ವಿದ್ಯಾರ್ಥಿಗಳು ಭಾಷಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುತ್ತಾರೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನಿಘಂಟಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಉಪನ್ಯಾಸಕ ಯು. ಸಿದ್ದೇಶಿ ಮಾತನಾಡಿ, ಪೈಲೆಟ್ ಯೋಜನೆಯಂತೆ ಹಿರಿಯೂರು ತಾಲೂಕಿನ ಕಲ್ಲಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆ.ಸಿ ರೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಸಿ.ಎನ್ ಮಾಳಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ದ್ವಿಭಾಷಾ ನಿಘಂಟು ಹಾರ್ಡ್ ಪ್ರತಿ ವಿತರಿಸಲಾಗಿದೆ.
ಸಾಪ್ಟ್ ಪ್ರತಿಯನ್ನು ಡಿ.ಎಸ್.ಇ.ಆರ್.ಟಿ ವೆಬ್ಸೈಟ್ dsert.karnataka.gov.in ನಲ್ಲಿ ಅಳವಡಿಸಲಾಗಿದ್ದು, ಜಿಲ್ಲೆಯ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ಉಪನ್ಯಾಸಕರಾದ ಎಸ್.ಸಿ.ಪ್ರಸಾದ್, ಎಸ್. ಜ್ಞಾನೇಶ್ವರ, ಉಪನ್ಯಾಸಕರಾದ ಆರ್.ನಾಗರಾಜು, ಎಸ್.ಬಸವರಾಜು, ಬಿ.ಎಸ್.ನಿತ್ಯಾನಂದ, ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ಕೆ.ಜಿ.ಪ್ರಶಾಂತ್, ತಾಂತ್ರಿಕ ಸಹಾಯಕ ಆರ್.ಲಿಂಗರಾಜು ಇದ್ದರು.