ಚಂದ್ರವಳ್ಳಿ ನ್ಯೂಸ್ ಹಿರಿಯೂರು :
ಸೊಂಡೆಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಕೆಲವು ಲೋಪ ದೋಷಗಳನ್ನು ಸರಿಪಡಿಸಿಕೊಂಡು ಗ್ರಾಮದ ಸಹಕಾರದೊಂದಿಗೆ ಹಾಲು ಉತ್ಪಾದನೆ ಹೆಚ್ಚಿಸುವತ್ತ ಗಮನ ಹರಿಸಬೇಕು ಎಂದು ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಹಾಲು ಒಕ್ಕೂಟ ಸಹಕಾರ ಸಂಘದ ನಿರ್ದೇಶಕ ಬಿಸಿ ಸಂಜೀವಮೂರ್ತಿ ತಿಳಿಸಿದರು.
ತಾಲೂಕಿನ ಐಮಂಗಲ ಹೋಬಳಿಯ ಸೊಂಡೆಕೆರೆ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2024 ಮತ್ತು 2025 ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೆ ಹಿರಿಯೂರು ಎರಡನೇ ಸ್ಥಾನ ಪಡೆದಿದೆ. ಇಂತಹ ಸಂದರ್ಭದಲ್ಲಿ ತಾವುಗಳು ಹೆಚ್ಚಿನ ಹಾಲು ಉತ್ಪಾದನೆ ಕಡೆ ಗಮನ ಹರಿಸಿ, ಸಂಘವನ್ನು ಲಾಭಾಂಶದತ್ತ ಕೊಂಡೊಯ್ಯುವ ಗಮನ ಹರಿಸಿ, ಟೆಸ್ಟರ್ ಮೂಲಕ ಹಾಲನ್ನು ಪರೀಕ್ಷೆ ಮಾಡಬೇಕು. ಯಾವುದೇ ಮುಲಾಜಿಲ್ಲದೆ ಗುಣಮಟ್ಟವಿಲ್ಲದ ಹಾಲನ್ನು ವಾಪಸ್ ಕಳುಹಿಸಿ, ಸಂಬಂಧಗಳನ್ನು ಬದಿಗೊತ್ತಿ, ಇಂದಿನಿಂದಲೇ ಟೆಸ್ಟಿಂಗ್ ಮಾಡಿ, ಕ್ವಾಲಿಟಿ ಹಾಲು ನೀಡಬೇಕು. ಸಂಘಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.
ಸಂಘದಲ್ಲಿ ಯಾವುದೇ ಕುಂದು ಕೊರತೆಗಳು ಹಾಗೂ ಸಮಸ್ಯೆಗಳು ಕಂಡುಬಂದಲ್ಲಿ ಶಿಮುಲ್ ನಿರ್ದೇಶಕರ ಗಮನಕ್ಕೆ ಅಥವಾ ಅಧಿಕಾರಿಗಳ ಗಮನಕ್ಕೆ ತಿಳಿಸಬೇಕು ಎಂದು ಕಿವಿಮಾತು ಹೇಳಿದರು.
ಮೂರ್ನಾಲ್ಕು ಜನರಿಂದ ಸಂಘವನ್ನು ಡ್ಯಾಮೇಜ್ ಆಗಬಾರದು. ಸಂಘದ ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಯವರು ಎಚ್ಚರಿಕೆ ವಹಿಸಬೇಕು. ಸಂಘವ ಉಳಿಯಬೇಕಾದರೆ ಕೆಲಸದಲ್ಲಿ ಬದಲಾವಣೆ ಆಗಬೇಕು ಎಂದರು.
ಸೊಂಡೆಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಎಲ್. ಕೆಂಚಮ್ಮ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ಶಿಮುಲ್ ಮಾರ್ಗ ವಿಸ್ತರಣಾಧಿಕಾರಿ ನಯಾಜ್ ಬೇಗ್, ಕಾರ್ಯದರ್ಶಿ ಚೈತ್ರ, ಸಂಘದ ನಿರ್ದೇಶಕರಾದ ಲಕ್ಷ್ಮೀ, ರೇಣುಕಮ್ಮ, ಶೃತಿ, ರತ್ನಮ್ಮ, ಮಂಜುಳಾ, ಮುಖಂಡರಾದ ಮಂಜಣ್ಣ, ನಾಗಣ್ಣ ಹಾಗೂ ಗ್ರಾಮಸ್ಥರಿದ್ದರು.